Asianet Suvarna News Asianet Suvarna News

ಶರಾವತಿ ಕಣಿವೆಯಲ್ಲಿ ಕಪ್ಪೆರಾಗ, ಕುಂಬಾರ ಧ್ಯಾನ

ಮನುಷ್ಯರ ಹಾಗೆ ಎರಡು ಕಾಲಿನಲ್ಲಿ ನಿಲ್ಲುವ, ಮೊಟ್ಟೆಯ ಸುತ್ತ ರಕ್ಷಣೆಗಾಗಿ ಮಣ್ಣಿನ ಗೋಡೆ ನಿರ್ಮಿಸುವ ಶರಾವತಿ ಕಣಿವೆಯ ನಿಶಾಚರಿ ಕುಂಬಾರ ಕಪ್ಪೆ. ಪಿತೃವಾತ್ಸಲ್ಯದ ಪ್ರತಿರೂಪದಂತಿರುವ ಬಲು ಅಪರೂಪದ ಈ ಪ್ರಬೇಧದ ಬಗೆಗಿನ ಮ್ಯೂಸಿಕಲ್ ಡಾಕ್ಯುಮೆಂಟ್ ‘ಕಪ್ಪೆರಾಗ’ ಇದೀಗ ಬಿಡುಗಡೆಯಾಗಿದೆ.

Story behind Kapperaga short film directed by Prashant S Nayaka Vin
Author
First Published Mar 17, 2024, 12:43 PM IST | Last Updated Mar 17, 2024, 12:43 PM IST

-ಪ್ರಿಯಾ ಕೆರ್ವಾಶೆ

'ಆಗರ್ಭ ಪ್ರಾಕೃತಿಕ ಸಮೃದಿಟಛಿಯ ಶರಾವತಿ ಕಣಿವೆಯ ಹಲವು ವಿಸ್ಮಯಗಳಲ್ಲೊಂದು ಕುಂಬಾರ ಎಂಬ ಇರುಳುಗಪ್ಪೆ. ಇಡೀ ಜಗತ್ತಿನಲ್ಲಿ ಈ ಕಪ್ಪೆಗಳು ಕಂಡುಬರುವುದು ಇಲ್ಲಿ ಮಾತ್ರ. ಪಶ್ಚಿಮ ಘಟ್ಟಗಳ ಕಪ್ಪೆಗಳ ಬಗ್ಗೆ ಸಂಶೋಧನೆ ಮಾಡುತ್ತಿರುವ ಗಿರೀಶ್ ಜೆನ್ನಿ ಇವುಗಳ ಬಗ್ಗೆ ವಿವರಿಸುವಾಗ ವೈಲ್ಡ್‌ಲೈಫ್ ಎಕ್ಸ್‌ಪ್ಲೋರರ್ ಆಗಿರುವ ನನ್ನ ಕುತೂಹಲ ಗರಿಗೆದರಿತು. ಕಪ್ಪೆರಾಗದ ಜರ್ನಿ ಶುರುವಾದದ್ದು ಹೀ' ಹೀಗಂದರು ಪ್ರಶಾಂತ್ ಎಸ್ ನಾಯಕ.

ಇವರು ವನ್ಯಜೀವಿ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ನಿರ್ದೇಶಕ. ಕೆಲವು ವರ್ಷಗಳ ಕೆಳಗೆ ಸರ್ಕಾರ ಬಿಡುಗಡೆ ಮಾಡಿದ್ದ 'ಬಂಡಿಪುರ' ಸಾಕ್ಷ್ಯಚಿತ್ರಕ್ಕೆ ಪ್ರಶಾಂತ್ ಛಾಯಾಗ್ರಹಣ (ಡಿಓಪಿ) ಮಾಡಿದ್ದರು. ಇವರ ಮ್ಯೂಸಿಕಲ್ ಡಾಕ್ಯುಮೆಂಟರಿಯೇ 'ಕಪ್ಪೆರಾಗ'. ಈಗಾಗಲೇ ಜಗತ್ತಿನ ಪ್ರತಿಷ್ಠಿತ ಗ್ರೀನ್ ಆಸ್ಕರ್ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಈ ಕಿರುಚಿತ್ರ ಈಗ ನಮ್ಮ ನಿಮ್ಮೆಲ್ಲರ ಅಂಗೈ ಮುಂದೆ ಬಂದು ನಿಂತಿದೆ. ಪ್ರಶಾಂತ್ ನಾಯಕ ಯೂಟ್ಯೂಬ್‌ನಲ್ಲಿ ಕೇವಲ ಐದೂವರೆ ನಿಮಿಷಗಳಲ್ಲಿ ಕುಂಬಾರ ಕಪ್ಪೆಯ ವಿಸ್ಮಯ ಜಗತ್ತನ್ನು ಕಂಡು ಬರಬಹುದು.

ಕಾಸರವಳ್ಳಿ ವರ್ಸಸ್ ಕಾಸರವಳ್ಳಿ, ಸಿನಿಮಾ ಜಗತ್ತಿನ ಕುರಿತ ಮಾಹಿತಿಯ ಕೃತಿ 'ಬಿಂಬ-ಬಿಂಬಕ'

ಈ ವಿಶಿಷ್ಟ ಕಪ್ಪೆಗಳ ಬದುಕೇ ನಿಗೂಢ. ಶರಾವತಿ ಕಣಿವೆ ಮಳೆಗಾಲದ ರಾತ್ರಿಗಳಲ್ಲಿ ಎರಡು ತಿಂಗಳು ಇವುಗಳ ಅಪರೂಪದ ಸಂಚಾರ. ಭೋರೆಂದು ಸುರಿಯುವ ಮಳೆಯ ಸದ್ದನ್ನೂ ಮೀರಿದ ಟಕ್ ಟಕ್ ಟಕ್ ಟಕ್ ಕೂಗು. ಕುಂಬಾರ ಗಂಡು ಕಪ್ಪೆ ಹೆಣ್ಣುಕಪ್ಪೆಯನ್ನು ನಲ್ಮೆಯಿಂದ ಕರೆಯುವ ರೀತಿ ಇದು. ಎಷ್ಟೋ ಸಲ ಅದರ ಈ ಪ್ರಯತ್ನ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಈ ಕರೆಗೆ ಹೆಣ್ಣು ಕಪ್ಪೆ ಸ್ಪಂದಿಸಿದರೂ ಹತ್ತಿರ ಬಂದು ಕುಂಬಾರನ ಕೆಲಸ ಇಷ್ಟವಾಗದೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ತಿರುಗಿ ನೋಡದೇ ನಡೆದು ಬಿಡುತ್ತದೆ. ಆಗ 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ'ದ ಕಥೆ. ಬ್ರೇಕಪ್‌ನಲ್ಲೇ ಆ ರಾತ್ರಿ ಕಳೆಯುವ ಕುಂಬಾರ ಮರುರಾತ್ರಿ ಮತ್ತೆ ಪ್ರಯತ್ನ ಮುಂದುವರಿಸುತ್ತದೆ.

ಅಷ್ಟಕ್ಕೂ ಕರೆಯುವ ಮೊದಲೇ ಕುಂಬಾರ, ಹೆಣ್ಣುಗಪ್ಪೆ ಮೊಟ್ಟೆಯಿಡಲು ಸರಿಯಾದ ಜಾಗ ಹುಡುಕಬೇಕು. ಮೇಲ್ಭಾಗ ಬಂಡೆ, ಕೆಳಭಾಗ ನೀರು ಇರುವಂಥಾ ಸುರಕ್ಷಿತ ಜಾಗವಾಗಿರಬೇಕದು. ಹೆಣ್ಣಿಗೆ ಆ ಜಾಗ ಇಷ್ಟ ಆದರೆ ಸರಿ, ಇಲ್ಲವಾದರೆ ಮಳೆ ಸುರಿವ ರಾತ್ರಿಗಳಲ್ಲಿ ‘ರಿಜೆಕ್ಷನ್’ನ ಬೇಗೆಯಲ್ಲಿ ಬೇಯಬೇಕು. ಕೊನೆಗೂ ಹೆಣ್ಣು ಒಪ್ಪಿದರೆಪರಸ್ಪರ ಮೆಚ್ಚುಗೆಯ ತಬ್ಬುಗೆ. ಮನುಷ್ಯರಂತೆ ಎರಡು ಕಾಲುಗಳಲ್ಲಿ ನಿಂತು ಗಾಢವಾಗಿ ತಬ್ಬಿಕೊಳ್ಳುವುದು ಇವುಗಳ ವಿಶೇಷತೆ. ಇವುಗಳಲ್ಲಿ ಮೇಟಿಂಗ್ ಅಂದರೆ ಸಂಭೋಗ ನಡೆಯುವುದಿಲ್ಲ. ಆದರೆ ತಲೆಕೆಳಗೆ ಕಾಲು ಮೇಲೆ ಮಾಡಿ ಸರ್ಕಸ್ ಮಾಡುವಂಥಾ ಮುದ್ದಾಟ, ಕೊಂಡಾಟಗಳು ನಡೆಯುತ್ತವೆ. ಕೊನೆಯಲ್ಲಿ ರಕ್ಷಾ ಕವಚದಂತೆ ಹೆಣ್ಣುಗಪ್ಪೆಯ ಬೆನ್ನ ಮೇಲೆ ಕುಂಬಾರ ವೀರ್ಯ ಸುರಿಸುವ ಮೂಲಕ ಈ ಚಿನ್ನಾಟಕ್ಕೆ ಕೊನೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಆಮೇಲೆ ಘನ ಗಾಂಭೀರ್ಯದಲ್ಲಿ ಗಂಡು ಹುಡುಕಿದ ಜಾಗದಲ್ಲಿ ಹೆಣ್ಣು ಕಪ್ಪೆ ಹೋಗಿ ಏಳೆಂಟು ಮೊಟ್ಟೆ ಇಡುತ್ತದೆ. ಅಲ್ಲಿಗೆ ಹೆಣ್ಣಿನ ಕೆಲಸ ಮುಕ್ತಾಯ. ಆಮೇಲೆ ಸಂಬಂಧವೇ ಇಲ್ಲದ ಹಾಗೆ ಹೆಣ್ಣು ಅಲ್ಲಿಂದ ಎಸ್ಕೇಪ್ ಆಗಿಬಿಡುತ್ತದೆ. ಈಗ ಗಂಡು ಕಪ್ಪೆಯ ಹೆಗಲ ಮೇಲೆ ಜವಾಬ್ದಾರಿಯ ಹೊರೆ. ಹೆಣ್ಣಿನ ಅನುಪಸ್ಥಿತಿಯಲ್ಲಿ ಒಂಟಿಯಾಗಿ ಅಷ್ಟೂ ಮೊಟ್ಟೆಗಳನ್ನೂ ಅದು ಕಾಪಾಡಬೇಕು. ಅದಕ್ಕಾಗಿ ಮೊಟ್ಟೆಯ ಸುತ್ತ ಮಣ್ಣಿನ ಗೋಡೆ ಕಟ್ಟುತ್ತದೆ. ನೀರಲ್ಲಿ ಮುಳುಗಿ ಮಣ್ಣು ಮೇಲೆತ್ತಿ ಆ ಮೊಟ್ಟೆಗಳ ಸುತ್ತ ಮಣ್ಣಿನ ಕವಚ ನಿರ್ಮಿಸುವುದು ಸಣ್ಣ ಕೆಲಸ ಅಲ್ಲ. ಈ ಅವಧಿಯಲ್ಲಿ ಊಟವೂ ಇಲ್ಲ, ನಿದ್ದೆಯೂ ಇಲ್ಲ. ಏಳೆಂಟು ದಿನ ನಿದ್ರಾಹಾರಗಳಿಲ್ಲದೇ ಜತನದಿಂದ ಮೊಟ್ಟೆಗಳನ್ನು ಕಾಯ್ದು ಕೊನೆಯಲ್ಲಿ ಆ ಮೊಟ್ಟೆಯಿಂದ ಮರಿ ಹೊರಬಂದ ಮೇಲೆ ಸಮಾಧಾನದ ನಿಟ್ಟುಸಿರು. ದೊಡ್ಡ ಜವಾಬ್ದಾರಿ ಪೂರೈಸಿದ ತೃಪ್ತಿಯಲ್ಲಿ ತಂದೆ ವಾತ್ಸಲ್ಯದ ಗಂಡು ಕಪ್ಪೆ ಮರೆಗೆ ಸರಿಯುತ್ತದೆ.

ಈ ಎಲ್ಲ ವಿವರಗಳನ್ನು ಸೂಕ್ಷ್ಮವಾಗಿ ಹಾಡಿನ ಭಾವದೊಂದಿಗೆ 'ಕಪ್ಪೆರಾಗ' ಕಟ್ಟಿಕೊಡುತ್ತದೆ. ಈ ಕಪ್ಪೆಗಳದ್ದು ಒಂದು ಜಗತ್ತಾದರೆ, ಸಣ್ಣ ಅಲುಗಾಟ ಕಂಡರೂ ಪುಸಕ್ಕನೆ ಹಾರಿ ಮರೆಯಾಗುವ, ಸಣ್ಣ ಗಾತ್ರದ ಈ ನಿಶಾಚರಿ ಕಪ್ಪೆಗಳ ಸಾಕ್ಷ್ಯಚಿತ್ರ ತಯಾರಿಸಿದ ಪ್ರಶಾಂತ್ ಮತ್ತವರ ಏಳೆಂಟು ಜನರ ತಂಡದ ಸಾಹಸದ್ದು ಮತ್ತೊಂದು ಕಥೆ. ಅದನ್ನು ನಿರ್ದೇಶಕ ಪ್ರಶಾಂತ್ ವಿವರಿಸುವುದು ಹೀಗೆ. ರಾತ್ರಿಯಿಡೀ ಸುರಿಯುವ ಮಳೆಯಲ್ಲಿ ಶರಾವತಿ ಕಣಿವೆಯ ಕಾಡುಗಳ ಒಳಗೆ ಹೊಕ್ಕರೆ ನಮ್ಮ ಗಂಬೂಟ್ ಅನ್ನೂ ಲೆಕ್ಕಿಸದೇ ತಲೆಯವರೆಗೂ ಏರುವ ಹತ್ತಾರು ಜಿಗಣೆಗಳು. ಅಲ್ಲಲ್ಲಿ ವಿಷಯುಕ್ತ ಹಾವುಗಳ ಓಡಾಟ. ಇದರ ನಡುವೆ ಸರ್ಕಸ್ ಮಾಡಿಕೊಂಡು ಕುಂಬಾರ ಕಪ್ಪೆಯ ಆಗಮನಕ್ಕೆ ಎದುರು ನೋಡಬೇಕು. ಜೋರಾಗಿ ಬೀಳುವ ಮಳೆಯ ಸದ್ದು, ಕಾಡಿನ ಹಲವು ಸದ್ದುಗಳ ನಡುವೆ ಈ ಜಾತಿಯ ಕಪ್ಪೆಯ ಕೂಗನ್ನು ಗುರುತಿಸಿ ಅದು ಇರುವ ಜಾಗವನ್ನು ಪತ್ತೆ ಹಚ್ಚುವುದು ಸವಾಲು. ಸಣ್ಣ ಅಲುಗಾಟಕ್ಕೂ ಪುಸಕ್ಕನೆ ಹಾರಿ ಪೊದೆ ಸೇರುವ ಈ ಕಿರಿಯ ನಿಶಾಚರಿ ನಮ್ಮನ್ನು ಕಾಡಿಸಿದ್ದು ಅಷ್ಟಿಷ್ಟಲ್ಲ.

ಮೊದಲ ಬಾರಿ ಹೋದಾಗ ಹಲವು ರಾತ್ರಿ ಕಾದು ಕೊನೆಗೂ ಗಂಡು ಹೆಣ್ಣು ಕಪ್ಪೆಗಳು ಸಿಕ್ಕವು. ರಾತ್ರಿ ಏಳೂವರೆಗೆ ಗಂಡು ಕಪ್ಪೆ ಹೆಣ್ಣನ್ನು ಕರೆಯಲು ಶುರು ಮಾಡಿದರೆ ಆ ಹೆಣ್ಣು ಗಂಡಿನ ಸಮೀಪ ಹೋಗುವಾಗ ಬೆಳಗಿನ ಜಾವ ನಾಲ್ಕು ಗಂಟೆ. ಅಷ್ಟೂ ಹೊತ್ತು ಭಂಗಿ ಬದಲಿಸದೇ ನಮ್ಮ ಬೆನ್ನು, ಮೈ ಕೈ ಮರಗಟ್ಟಿ ಹೋಗಿತ್ತು. ಅಬ್ಬಾ. ಕೊನೆಗೂ ಅವರೆಡು ಒಂದಾದವಲ್ಲಾ ಎಂದು ನಿಟ್ಟುಸಿರು ಇನ್ನೇನು ಹೊರಬೀಳಬೇಕು, ಕುಂಬಾರ ಇನ್ನೇನು ಹೆಣ್ಣು ಕಪ್ಪೆಯನ್ನು ಮುದ್ದಾಡಬೇಕು ಅನ್ನುವಷ್ಟರಲ್ಲಿ ಹೆಣ್ಣು ಕಪ್ಪೆ ಅಲ್ಲಿಂದ ಹೊರಟು ಹೋಯಿತು. 'ಕುಂಬಾರ ರಿಜೆಕ್ಟ್' ಅಂದರು ಜೊತೆಗಿದ್ದ ತಜ್ಞ ಗಿರೀಶ್ ಜೆನ್ನಿ. ಅಲ್ಲಿಗೆ ನಮ್ಮ ಅಷ್ಟೂ ಸಾಹಸ ನೀರಲ್ಲಿ ಹೋಮ. 

ಹಠ ಬಿಡದೇ ಮರುವರ್ಷ ಅದೇ ಋತುವಿನಲ್ಲಿ ಮತ್ತೆ ಹೋದೆವು. ಹಿಂದಿನ ರೀತಿಯೇ ಸರ್ಕಸ್ ಮಾಡಿ ಕೊನೆಗೂ ಈ ನಿಶಾಚರ ಜಗತ್ತಿನ ಈ ಕೌತುಕವನ್ನು ಸೆರೆಹಿಡಿದಾಗ ಆದ ಖುಷಿಯನ್ನು ಮಾತಿನಲ್ಲಿ ಹಿಡಿದಿಡುವುದು ಕಷ್ಟ ಎಂದು ಉತ್ಸಾಹದಲ್ಲಿ ಮಾತು ಮುಗಿಸಿದರು ಪ್ರಶಾಂತ್. ಇವರ ಮಾತುಗಳನ್ನು ಕೇಳಿದರೆ, 'ಇಷ್ಟೆಲ್ಲ ಕಷ್ಟಪಟ್ಟು ಐದೂವರೆ ನಿಮಿಷಗಳ ಕಿರುಚಿತ್ರ ಮಾಡುವುದಕ್ಕಿಂತ, ಡಾಕ್ಯುಮೆಂಟರಿಯನ್ನೇ ಮಾಡಬಹುದಿತ್ತಲ್ಲಾ?' ಎಂಬ ಪ್ರಶ್ನೆ ಬರಬಹುದು. ಆದರೆ ಪ್ರಯೋಗಶೀಲತೆಯೇ ಎಲ್ಲಕ್ಕಿಂತ ದೊಡ್ಡದು ಎಂದು ನಂಬಿರುವವರು ಪ್ರಶಾಂತ್. ಇದನ್ನೂ ವಿಭಿನ್ನವಾಗಿ ಜಗತ್ತಿನ ಮುಂದಿಡಲು ಮುಂದಾಗಿದ್ದಾರೆ. ಸೂಕ್ಷ್ಮವಿವರಗಳಲ್ಲಿ ಒಂದು ಜಗತ್ತನ್ನೇ ಹಿಡಿದಿಟ್ಟಿದ್ದಾರೆ. ಪ್ರದೀಪ್ ಶಾಸಿಉೀ ನಿರ್ಮಾಣ ಹಾಗೂ ಹಾಡಿನ ಸಾಹಿತ್ಯ, ಅಶ್ವಿನ್ ಪಿ ಕುಮಾರ್ ಸಂಗೀತ, ಅರುಂಧತಿ ವಸಿಷ್ಠ ಹಾಗೂ ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯನ ಈ ಕಿರುಚಿತ್ರಕ್ಕಿದೆ.

Latest Videos
Follow Us:
Download App:
  • android
  • ios