ವ್ಯಾಕ್ಸೀನ್ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ಬೇಡ: ಚುನಾವಣಾ ಆಯೋಗ ಸೂಚನೆ
ಎಸೆಂಬ್ಲಿ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗ ಸ್ಟ್ರಿಕ್ಟ್ ರೂಲ್ಸ್ | ವ್ಯಾಕ್ಸೀನ್ ಸರ್ಟಿಫಿಕೇಟ್‌ನಿಂದ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚನೆ
ನವದೆಹಲಿ(ಮಾ.06): ವಿಧಾನಸಭಾ ಚುನಾವಣೆಗೇ ಕೆಲವೇ ವಾರ ಮುನ್ನ ಚುನಾವಣಾ ಆಯೋಗ ಕೊರೋನಾ ವೈರಸ್ ವ್ಯಾಕ್ಸೀನ್ ಸರ್ಟಿಫಿಕೇಟ್ನಿಂದ ಮೋದಿಯ ಫೋಟೋ ತೆಗೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
4 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಎಸೆಂಬ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸರ್ಟಿಫಿಕೇಟ್ನಲ್ಲಿ ಮೋದಿ ಫೋಟೋ ತೆಗೆಯಲು ಸೂಚನೆ ನೀಡಿದೆ. ಈಗಾಗಲೇ ಎಲೆಕ್ಷನ್ ಕೋಡ್ ಆಫ್ ಕಂಡಕ್ಟ್ ಜಾರಿಯಲ್ಲಿದ್ದು, ಈ ರೀತಿ ಮಾಡುವಂತಿಲ್ಲ ಎಂದು ಹೇಳಿದೆ.
ಈ ವಾರದ ಆರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಅಧಿಕೃತ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಚುನಾವಣಾ ಅಧಿಕಾರಿಗೆ ಸೂಚನೆ ನೀಡಿತ್ತು. ಈಘಟನೆಯ ಬೆನ್ನಲ್ಲೇ ಇದೀಗ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವ್ಯಾಕ್ಸೀನ್ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಲು ಸೂಚಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸೀನ್ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ಇರುವುದನ್ನು ಪಶ್ಚಿಮ ಬಂಗಳಾದ ಆಡಳಿತ ಪಕ್ಷ ತೀವ್ರವಾಗಿ ವಿರೋಧಿಸಿತ್ತು. ವೈದ್ಯರು, ನರ್ಸ್, ಆರೋಗ್ಯ ಸಿಬ್ಬಂದಿ ಕೆಲಸದ ಕ್ರೆಡಿಟ್ ಮೋದಿ ತೆಗೆದುಕೊಂಡಿದ್ದಾರೆ ಎಂದು ಟಿಎಂಸಿ ಆರೋಪಿಸಿತ್ತು.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮಾರ್ಚ್ 27ರಿಂದ ವಿಧಾನಸಭಾ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏ.01, ಏ.06, ಏ.10, ಏ.17, ಏ.22, ಏ.26, ಏ.19ರಂದು ನಡೆಯಲಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏ.06ರಂದು ಮತದಾನ ನಡೆಯಲಿದೆ. ಪುದುಚೇರಿಯಲ್ಲಿಯೂ ಅದೇ ದಿನ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮಾರ್ಚ್ 27, ಏ.01, ಏ.06ರಂದು ಚುನಾವಣೆ ನಡೆಯಲಿದೆ.