ಕಂಗನಾ ವಿರುದ್ಧ ಮಾತನಾಡಿ ನಾಯಕಿ 'ಕೈ'ಸುಟ್ಟುಕೊಂಡ ಬೆನ್ನಲ್ಲೇ ನಾಯಕನಿಂದ ಗೋಮಾಂಸದ ಪೋಸ್ಟ್: ನಟಿ ತಿರುಗೇಟು
ಕಂಗನಾ ವಿರುದ್ಧ ಮಾತನಾಡಿ ನಾಯಕಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಟಿಕೆಟ್ ಕಳೆದುಕೊಂಡ ಬೆನ್ನಲ್ಲೇ ಇದೀಗ ಮತ್ತೋರ್ವ ನಾಯಕ ನಟಿ ವಿರುದ್ಧ ಮಾತನಾಡಿದ್ದಾರೆ. ಏನಿದು ವಿವಾದ?
ಕಂಗನಾ ಅವರು ಹಿಮಾಚಲ ಪ್ರದೇಶದ ಲೋಕಸಭೆ ಕ್ಷೇತ್ರ ಮಂಡಿಯ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದಂತೆಯೇ ಕಾಂಗ್ರೆಸ್ ಅವರ ಮೇಲೆ ಭಾರಿ ಆರೋಪ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ವಿವಾದಾತ್ಮಕ ಪೋಸ್ಟ್ ಹಾಕಿ ಭಾರಿ ಇಕ್ಕಟ್ಟಿಗೆ ಸಿಲುಕಿದ್ದರು. ಕಂಗನಾ ವಿರುದ್ದ ಕೀಳುಮಟ್ಟದ ಪೋಸ್ಟ್ ಹಾಕಿ ಬಳಿಕ ಭಾರಿ ಗಲಾಟೆಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದರು. ಆದರೆ ಸುಪ್ರಿಯಾ ಶ್ರೀನಾಟೆ ಸ್ಪಷ್ಟನೆ ಪ್ರಯೋಜನವಾಗಿಲ್ಲ. ಗಲಾಟೆ ಜೋರಾಗುತ್ತಿದ್ದಂತೆಯೇ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರಿಯಾ ಶ್ರೀನಾಟೆ ಕೈಬಿಟ್ಟಿದೆ. ಕಾಂಗ್ರೆಸ್ ಪ್ರಕಟಗೊಳಿಸದ 8ನೇ ಪಟ್ಟಿಯಲ್ಲಿ ಸುಪ್ರಿಯಾ ಶ್ರೀನಾಟೆ ಕಳೆದ ಬಾರಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಕ್ಷೇತ್ರವನ್ನು ವಿರೇಂದ್ರ ಚೌಧರಿಗೆ ನೀಡಲಾಗಿದೆ. ಇದೀಗ, ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರು ಕಂಗನಾ ಅವರು ಗೋಮಾಂಸವನ್ನು ಇಷ್ಟಪಡುತ್ತಾರೆ ಹಾಗೂ ಸೇವನೆ ಮಾಡುತ್ತಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿದ್ದು, ಇದು ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. ಇದಕ್ಕೆ ಕಂಗನಾ ಕಿಡಿ ಕಾರಿದ್ದಾರೆ.
ತಾವು ಸ್ಪರ್ಧಾ ಕಣಕ್ಕೆ ಇಳಿಯುತ್ತಿದ್ದಂತೆಯೇ ಕಾಂಗ್ರೆಸ್ನವರು ಇಂಥ ಹೇಳಿಕೆ ನೀಡುತ್ತಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ, ಕಾಂಗ್ರೆಸ್ನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಗೋಮಾಂಸ ಕುರಿತು ತಮ್ಮ ಮೇಲೆ ಬಂದಿರುವ ಆರೋಪದ ಕುರಿತು ಹೇಳಿಕೆ ನೀಡಿರುವ ನಟಿ, ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ. ನನ್ನ ವಿರುದ್ಧ ಸಂಪೂರ್ಣ ಆಧಾರರಹಿತ ಸುದ್ದಿ ಮಾಡಲಾಗುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ ಎಂದಿದ್ದಾರೆ. ನನ್ನ ಜನರಿಗೆ ನಾನು ‘ಹೆಮ್ಮೆಯ ಹಿಂದೂ’ ಎಂದು ಗೊತ್ತಿದೆ. ನನ್ನ ಮೇಲೆ ಇಂತಹ ಆರೋಪಗಳನ್ನು ಮಾಡಿ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ, ‘ಜೈ ಶ್ರೀ ರಾಮ್’ ಎಂದು ನಟಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ನನ್ನ ವಿರುದ್ಧ ಗೋಮಾಂಸ ಸೇವನೆಯಂಥ ಹೀನ ಆರೋಪ ಮಾಡಲಾಗುತ್ತಿದೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪಾಲಿಸುತ್ತಿದ್ದೇನೆ ಹಾಗೂ ಪ್ರಚಾರ ಮಾಡುತ್ತಿದ್ದೇನೆ. ಇಂಥ ಆರೋಪ ಮಾಡುವ ಮೂಲಕ ನನ್ನ ಇಮೇಜನ್ನು ಹಾಳು ಮಾಡುವ ಉದ್ದೇಶ ನಿಮಗಿದ್ದರೆ ಅದು ಈಡೇರುವುದಿಲ್ಲ. ನಾನೊಬ್ಬ ಹೆಮ್ಮೆಯ ಹಿಂದೂ ಎಂದು ನನ್ನ ಜನರಿಗೆ ಗೊತ್ತಿದೆ ಎಂದಿದ್ದಾರೆ.
ವಿಷ್ಣು, ರಾಮನ ಅಂಶವೇ ಪ್ರಧಾನಿ ನರೇಂದ್ರ ಮೋದಿ: ನಟಿ ಕಂಗನಾ ಹೇಳಿಕೆ ಭಾರಿ ವೈರಲ್
ಇದೇ ವೇಳೆ ಕಂಗನಾ ಅವರ ಗೋಮಾಂಸದ ಕುರಿತು ವಿಜಯ್ ವಾಡೆಟ್ಟಿವಾರ್ ಅವರ ಹೇಳಿಕೆಗೆ ಬಿಜೆಪಿಯ ಕೆಲ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಶೈನಾ ಎನ್‌ಸಿ ವಿಜಯ್ ವಾಡೆಟ್ಟಿವಾರ್ ಅವರು ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಅವರು ಕಂಗನಾ ರಣಾವತ್ ಅವರಿಗೆ ಗೋಮಾಂಸ ತಿನ್ನುವ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆ ಎಂದು ಹೇಳುವ ಧೈರ್ಯವಿದೆ. ಕಾಂಗ್ರೆಸ್ ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಟೀಕಿಸಿದ್ದಾರೆ.
ಇನ್ನು ಕಂಗನಾ ವಿರುದ್ಧ ಕೀಳುಮಟ್ಟದ ಪೋಸ್ಟ್ ಹಾಕಿದ್ದ ಸುಪ್ರಿಯಾ ಶ್ರೀನಾಟೆ ಕುರಿತು ಹೇಳುವುದಾದರೆ, ಈ ಕೀಳುಮಟ್ಟದ ಪೋಸ್ಟ್ಗೆ ಸ್ಪಷ್ಟನೆ ಕೊಡಲು ಸಾಕಷ್ಟು ಪ್ರಯತ್ನ ಮಾಡಿದ್ದರು ಸುಪ್ರಿಯಾ. ನನ್ನ ಸಾಮಾಜಿಕ ಜಾಲತಾಣ ತಂಡದ ಯಾರೋ ಒಬ್ಬರು ಈ ಪೋಸ್ಟ್ ಹಾಕಿದ್ದಾರೆ. ನನ್ನ ಗಮನಕ್ಕೆ ಬಂದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಲಾಗಿದೆ. ತಂಡದಲ್ಲಿ ಹಲವರು ಇರುವ ಕಾರಣ ಈ ಪೋಸ್ಟ್ ಯಾರು ಮಾಡಿದ್ದಾರೆ ಎಂದು ಪರಿಶೀಲಿಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರಿನಲ್ಲಿ ಕೆಲ ನಕಲಿ ಖಾತೆಗಳನ್ನು ತೆರೆದು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಕುರಿತು ದೂರು ನೀಡಲಾಗಿದೆ ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದರು. ಆದರೆ ಯಾವುದೂ ಪ್ರಯೋಜನಕ್ಕೆ ಬಾರದೇ ಟಿಕೆಟ್ ಕಳೆದುಕೊಂಡರು. 2019ರಲ್ಲಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಪ್ರಿಯಾ ಶ್ರೀನಾಟೆ ಸೋಲು ಕಂಡಿದ್ದರು. ಬಿಜೆಪಿಯ ಪಂಕಜ್ ಚೌಧರಿ ವಿರುದ್ದ ಸೋಲು ಕಂಡಿದ್ದರು. ಈ ಬಾರಿಯೂ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸುಪ್ರಿಯಾ ಶ್ರೀನಾಟೆಗೆ ಟಿಕೆಟ್ ಬಹುತೇಕ ಪಕ್ಕಾ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಂಗನಾ ವಿರುದ್ದ ಪೋಸ್ಟ್ ಹಾಕಿ ಕೈಸುಟ್ಟುಕೊಂಡಿದ್ದಾರೆ.
6ನೇ ಕ್ಲಾಸ್ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್ ಶೆಟ್ಟಿಯ ಅಪರೂಪದ ಫೋಟೋ ವೈರಲ್