Asianet Suvarna News Asianet Suvarna News

Shyam Singha Roy ಟೀಸರ್ ರಿಲೀಸ್: ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ನಾನಿ

ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Nani Sai Pallavi Starring Shyam Singha Roy teaser out gvd
Author
Bangalore, First Published Nov 18, 2021, 3:49 PM IST
  • Facebook
  • Twitter
  • Whatsapp

ನ್ಯಾಚುರಲ್ ಸ್ಟಾರ್ ನಾನಿ (Nani) ಅವರು ಕೊನೆಯದಾಗಿ ನಟಿಸಿದ ಚಿತ್ರ ಟಕ್ ಜಗದೀಶ್ (Tuck Jagadish). ಈ ಚಿತ್ರ ಡೈರೆಕ್ಟ್ ಆಗಿ ಒಟಿಟಿ ಪ್ಲಾಟ್ ಫಾರ್ಮ್ ಅಮೇಜಾನ್ ಪ್ರೈಂ (Amazon Prime) ನಲ್ಲಿ ಬಿಡುಗಡೆಯಾಗಿ ಸಿನಿಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿತ್ತು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರದಲ್ಲಿ 'ಪೆಳ್ಳಿ ಚೂಪುಲು' ಸಿನಿಮಾ ಖ್ಯಾತಿಯ ರಿತು ವರ್ಮಾ ನಾನಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ನಾನಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೋಸ್ಕರ ಅವರ ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದಾರೆ. ಹೌದು! 'ಶ್ಯಾಮ್ ಸಿಂಗಾ ರಾಯ್' (Shyam Singha Roy) ಚಿತ್ರದಲ್ಲಿ ನಾನಿ ನಟಿಸುತ್ತಿದ್ದು, ಚಿತ್ರದ ಟೀಸರ್ (Teaser) ಒಟ್ಟು ನಾಲ್ಕು ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ.

ಬಿಡುಗಡೆಯಾದ ಟೀಸರ್‌ನಲ್ಲಿ 'ಕೇಳೋ ಧೈರ್ಯ ಇಲ್ಲ, ಎದುರು ನಿಲ್ಲೋ ಶಕ್ತಿ ಇಲ್ಲ ಅಂತಾ ರಕ್ಷಿಸಬೇಕಾಗಿರೋ ದೇವರೇ ರಾಕ್ಷಸನಾಗಿ ಬದಲಾಗುತ್ತಿದರೆ, ಕಾಗದ ಹೊಟ್ಟೆ ಸೀಳಿ ಹುಟ್ಟಿ ಬರಹ ಅಲ್ಲ, ಹಣೆ ಬರಹನೇ ಬರೆಯೋದು ಗೊತ್ತು ಅಂತಾ ಅಕ್ಷರ ಹಿಡಿದಿರೋ ಆಯುಧದ ಹೆಸರೇ 'ಶ್ಯಾಮ್ ಸಿಂಗಾ ರಾಯ್' ಎಂಬ ಪವರ್‌ಫುಲ್ ಡೈಲಾಗ್‌ಗಳ ಜೊತೆಗೆ ಕೋಲ್ಕತ್ತಾದಲ್ಲಿನ ದೇವದಾಸಿ ಪದ್ದತಿ ಮತ್ತು ಈ ಪದ್ದತಿಯನ್ನು ತೊಡೆದುಹಾಕಲು ಜನರು ಹೇಗೆ ಹೋರಾಡುತ್ತಾರೆ ಎನ್ನುವ ಬಗ್ಗೆ ತೋರಿಸಲಾಗಿದೆ. ಬಂಗಾಳಿ ನೆಲದಲ್ಲಿ ನಡೆಯುವ ಈ ಕತೆಗೆ ನಾನಿ 'ಸ್ತ್ರೀ ಯಾರಿಗೂ ಗುಲಾಮಳಲ್ಲ ಕಡೆಗೆ ಆ ದೇವ್ರಿಗೂ ಕೂಡಾ' ಎಂದು ಬಂಗಾಳಿ ಭಾಷೆಯಲ್ಲಿ ಡೈಲಾಗ್ ಹೇಳಿದ್ದಾರೆ.

OTTಯಲ್ಲಿ ಬಿಡುಗಡೆ; ನಟ ನಾನಿ ಚಿತ್ರಗಳು ಚಿತ್ರಮಂದಿರಗಳಲ್ಲಿ ಬ್ಯಾನ್!

ಈ ಹಿಂದೆ 'ದಿ ಎಂಡ್' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಟ್ಯಾಕ್ಸಿವಾಲಾ' ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕ್ರಿತ್ಯಾನ್ (Rahul Sankrithyan) 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ಬೋಯನಪಲ್ಲಿ (Venkat Boyanapalli) ಚಿತ್ರವನ್ನು ನಿರ್ಮಿಸಿದ್ದು, 2017ರಲ್ಲಿ ತೆರೆಕಂಡ 'ಮಿಡಲ್ ಕ್ಲಾಸ್ ಅಬ್ಬಾಯ್' ಚಿತ್ರದ ನಂತರ ಈ ಚಿತ್ರದಲ್ಲಿ ನಾನಿ ಜೊತೆಗೆ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಅವರೊಂದಿಗೆ ಕೃತಿ ಶೆಟ್ಟಿ (Krithi Shetty), ಮಡೋನ್ನಾ ಸೆಬಾಸ್ಟಿಯನ್ (Madonna Sebastian), ಮುರಳಿ ಶರ್ಮಾ, ಅಭಿನವ್ ಗೋಮತಮ್, ರಾಹುಲ್ ರವೀಂದ್ರನ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್‌ನ ಈ ಚಿತ್ರಕ್ಕೆ ಸತ್ಯದೇವ್ ಜಂಗ (Satyadev Janga) ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟೈನ್‌ಮೆಂಟ್ (Niharika Entertainment) ಬ್ಯಾನರ್‌ನಡಿಯಲ್ಲಿ ಸಿನಿಮಾ ತಯಾರಾಗಿದೆ. ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ನಾನಿ ಜೊತೆ ಸಿನಿಮಾ ಮಾಡಲು 2 ಕೋಟಿ ಡಿಮ್ಯಾಂಡ್‌ ಮಾಡಿದ್ರಾ ಸಾಯಿ ಪಲ್ಲವಿ?

ಇನ್ನು, ನವೀನ್ ಮೂಲಿ ಸಂಕಲನ, ಸನು ಜಾನ್ ವರ್ಗೀಸ್  ಕ್ಯಾಮರಾ ಕೈ ಚಳಕ, ಹಾಗೂ ಮಿಕ್ಕಿ ಜೆ ಮೆಯರ್ ಸಂಗೀತ ಸಂಯೋಜನೆ ಇರುವ 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ (Rakshit Shetty) ಶುಭಕೋರಿದ್ದಾರೆ. ಈ ಬಗ್ಗೆ 'ಅದ್ಭುತವಾಗಿ ಚಿತ್ರ ಮೂಡಿ ಬಂದಿದೆ ಎಂಬುದು ಟೀಸರ್‌ನಲ್ಲಿನ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ. ಎಂದಿನಂತೆ ಬೆರುಗುಗೊಳಿಸುವ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಲು ಕಾತರನಾಗಿದ್ದೇನೆ' ಎಂದು 'ಶ್ಯಾಮ್ ಸಿಂಗಾ ರಾಯ್' ಕನ್ನಡ ಟೀಸರ್‌ನ್ನು ಹಂಚಿಕೊಂಡು ರಕ್ಷಿತ್ ಶೆಟ್ಟಿ ಟ್ವೀಟ್ (Tweet) ಮಾಡಿದ್ದಾರೆ.

Follow Us:
Download App:
  • android
  • ios