* ಕುಂದ್ರಾ ರಹಸ್ಯ ಕಪಾಟಲ್ಲಿ ಹಿಂದಿ ಸ್ಕ್ರಿಪ್ಟ್ ಲಭ್ಯ* ಕುಂದ್ರಾ ಬಂಧನದ ಬಳಿಕವೂ ನೀಲಿ ಚಿತ್ರ ತಯಾರಿಗೆ ಸಿದ್ಧತೆ?
ಮುಂಬೈ(ಜು.26): ಬ್ಲೂಫಿಲಂ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್ ಕುಂದ್ರಾ ಬಂಧನ ಆದ ಬಳಿಕವೂ ಅವರ ಒಡೆತನದ ಜೆ.ಎಲ್. ಸ್ಟ್ರೀಮ್ ಕಂಪನಿ ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿತ್ತೇ ಎಂಬ ಅನುಮಾನಗಳು ಮೂಡಿವೆ.
ತನಿಖೆಯ ವೇಳೆ ಕುಂದ್ರಾ ಅವರ ರಹಸ್ಯ ಕಪಾಟಿನಲ್ಲಿ ತಾಜಾ ಹಿಂದಿ ಸ್ಕಿ್ರಪ್ಟ್‌ಗಳು ಲಭ್ಯವಾಗಿವೆ. ಕುಂದ್ರಾ ಅವರ ಅನುಪಸ್ಥಿತಿಯಲ್ಲಿಯೂ ಚಿತ್ರೀಕರಣವನ್ನು ಮುಂದುವರಿಸಲು ಯೋಜಿಸಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಆದರೆ, ಅವು ಕಾಮೋತ್ತೇಜಕ ಚಿತ್ರಗಳೇ ಅಥವಾ ಅಶ್ಲೀಲ ಚಿತ್ರಗಳೇ ಎಂಬುದು ಖಚಿತಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಫಿ ಸಾಕ್ಷಿ ಆಗಲಿರುವ ನಾಲ್ವರು ಉದ್ಯೋಗಿಗಳು?:
ಇದೇ ವೇಳೆ ಅಂಧೇರಿಯಲ್ಲಿರುವ ವಿಯಾನ್ ಇಂಡಸ್ಟ್ರೀಸ್‌ನ ಕಚೇರಿಗಳ ಮೇಲೆ ಶನಿವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಹಲವು ದಾಖಲೆಗಳು ಲಭ್ಯವಾಗಿವೆ. ವಿಯಾನ್ ಇಂಡಸ್ಟ್ರೀಸ್‌ನ ನಾಲ್ವರು ಉದ್ಯೋಗಿಗಳು ಪ್ರಕರಣದಲ್ಲಿ ರಾಜ್ ಕುಂದ್ರಾ ವಿರುದ್ಧ ಮಾಫಿ ಸಾಕ್ಷಿ ಆಗಿ ಬದಲಾಗುವ ಸಾಧ್ಯತೆ ಇದೆ. ಇದು ರಾಜ್ ಕುಂದ್ರಾ ಅವರನ್ನು ಇನ್ನಷ್ಟುಸಂಕಷ್ಟಕ್ಕೆ ಸಿಲುಕಿಸಿದೆ. ನಟಿ ಶಿಲ್ಪಾ ಶೆಟ್ಟಿಅವರು ಕೂಡ ವಿಯಾನ್ ಇಂಡಸ್ಟ್ರೀಸ್‌ನ ನಿರ್ದೇಶಕರ ಪೈಕಿ ಒಬ್ಬರಾಗಿದ್ದಾರೆ.
ಇ.ಡಿ.ಯಿಂದಲೂ ಕುಂದ್ರಾ ವಿರುದ್ಧ ತನಿಖೆ
ಬ್ಲೂಫಿಲಂ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಪ್ರಕರಣದ ತಿನಿಖೆ ನಡೆಸುವ ಸಾಧ್ಯತೆ ಇದೆ.
ಆನ್‌ಲೈನ್ ಬೆಟ್ಟಿಂಗ್, ಕ್ಯಾಸಿನೋ ಗೇಮಿಂಗ್‌ನಲ್ಲಿ ತೊಡಗಿರುವ ಮಕ್ರ್ಯುರಿ ಇಂಟರ್‌ನ್ಯಾಷನಲ್ ಕಂಪನಿಯ ಸೌಥ್ ಆಫ್ರಿಕಾ ಬ್ಯಾಂಕ್ ಹಾಗೂ ರಾಜ್ ಕುಂದ್ರಾ ಮಧ್ಯೆ ಅನುಮಾನಾಸ್ಪದ ಹಣ ವರ್ಗಾವಣೆ ಆಗಿರುವುದು ಅಪರಾಧ ವಿಭಾಗದ ತಿನಿಖೆಯ ವೇಳೆ ಕಂಡುಬಂದಿದೆ. ಅಲ್ಲದೇ ರಾಜ್ ಕುಂದ್ರಾ ಅವರ ಬಹುತೇಕ ವಹಿವಾಟುಗಳು ವಿದೇಶಿ ಸಂಸ್ಥೆಗಳ ಜೊತೆ ನಡೆದಿವೆ. ಪೋರ್ನ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಹಣಕಾಸು ಅವ್ಯವಹಾರಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಜ್ ಕುಂದ್ರಾ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
