ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪದ ಮೇರೆಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪದ ಮೇರೆಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 'ಓ ಪರಿ..' ಎಂಬ ಹಾಡಿನ ಸಾಹಿತ್ಯ ತೀವ್ರ ಆಕ್ಷೇಪಾರ್ಹವಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ನಟಿ ಕರಾಟೆ ಕಲ್ಯಾಣಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವ್ಯೂವ್ಸ್ ಪಡೆದುಕೊಂಡಿದೆ. ಧಾರ್ಮಿಕ ಪಠಣಗಳಿರುವ ಈ ಹಾಡಿನಲ್ಲಿ ನೃತ್ಯ ಮಾಡುವವರು ಕಡಿಮೆ ಬಟ್ಟೆ ಧರಿಸಿದ್ದಾರೆ ಎಂದು ಕಲ್ಯಾಣಿ ಆರೋಪಿಸಿದ್ದಾರೆ. 

'ಭಗವದ್ಗೀತೆಯ ಸಂಪೂರ್ಣ ಶ್ಲೋಕಗಳನ್ನು ಅಥವಾ ಇನ್ನಾವುದೇ ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದಿದ್ದರೆ ನಾವು ಅದನ್ನು ಹರೇ ಕೃಷ್ಣ ಹರೇ ರಾಮ ಎಂದು ಜಪಿಸುತ್ತೇವೆ. ಆ ಶ್ಲೋಕಗಳು ಸಹ ಎಷ್ಟು ಶಕ್ತಿಯುತವಾಗಿವೆ. ಅದು ಹಿಂದೂ ಧರ್ಮದ ಶ್ರೀಮಂತ ಸಂಸ್ಕೃತಿ' ಎಂದು ಹೇಳಿದ್ದಾರೆ. ಇನ್ನು ದೇವಿಶ್ರೀ ಪ್ರಸಾದ್ ಅವರು ಸದ್ಯ ರಿಲೀಸ್ ಮಾಡಿರುವ ಹಾಡಿನ ಬಗ್ಗೆ ಆಕ್ಷೇಪ ಎತ್ತಿರುವ ಕರಾಟೆ ಕಲ್ಯಾಣಿ ಅವರು, 'ಊ ಅಂಟಾವ ಮಾವ ಅಂತ ಐಟಂ ಹಾಡಿಗೆ ಸಂಗೀತ ನೀಡಿದ ಇವರು ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ತುಂಡುಡುಗೆ ತೊಟ್ಟು ಮಹಿಳೆಯರು ನೃತ್ಯ ಮಾಡಿದ್ದಾರೆ. ಬಿಕಿನಿ ಧರಿಸಿ ಹುಡುಗಿಯರು ಶ್ಲೋಕ ಪಠಿಸಿದ್ದಾರೆ. ಇದು ಹಿಂದೂ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇಂಥ ಪ್ರಚೋದನಾಕಾರಿ ಹಾಡುಗಳನ್ನು ಚಿತ್ರೀಕರಿಸುವ ಮೊದಲು ನಮ್ಮ ಭಾವನೆಗೆ ನೋವಾಗುತ್ತದೆ ಎನ್ನುವ ಯೋಚನೆ ಬೇಕು. ಹಿಂದೂ ಧರ್ಮ ಉಳಿಸಲು ಸಾಧ್ಯವಾಗದಿದ್ದರೂ ಅದನ್ನು ಅವಮಾನಿಸಬೇಡಿ. ಹಾಗಾಗಿ ನೀವು ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದರೆ ನಿಮ್ಮ ಸ್ಟುಡಿಯೋಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ' ಎಂದು ಕರಾಟೆ ಕಲ್ಯಾಣಿ ಎಚ್ಚರಿಕೆ ನೀಡಿದ್ದಾರೆ. 

ಈ ಬಗ್ಗೆ ಹೈದರಾಬಾದ್ ಸೈಬರ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, 'ನವೆಂಬರ್ 2ರಂದು ಲಲಿತ್ ಕುಮಾರ್ ಮತ್ತು ಕರಾಟೆ ಕಲ್ಯಾಣಿ ಅವರಿಂದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹಾಡಿನ ಬಗ್ಗೆ ನಮಗೆ ದೂರು ಬಂದಿದೆ. ಇದು ಕಾನೂನು ಸಮಸ್ಯೆ ಆಗಿದ್ದರಿಂದ ನಾವು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೀವಿ' ಎಂದು ಹೇಳಿದ್ದಾರೆ. 

ಪಂಚಭಾಷೆಗಳಲ್ಲೂ Pushpa ಹಾಡುಗಳು ಸಕ್ಸಸ್: ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್

ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಐಪಿಸಿ ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಂಧ್ರಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಮಾತನಾಡಿ, ‘ಗೀತೆಯಲ್ಲಿ ಹಿಂದೂಗಳನ್ನು ಅವಹೇಳನ ಮಾಡಿ ಶ್ರೀಕೃಷ್ಣನನ್ನು ಅವಮಾನಿಸಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಕೂಡಲೇ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು’ಎಂದು ಹೇಳಿದರು. ಹಿಂದೂ ದೇವತೆಗಳು ಮತ್ತು ದೇವರುಗಳನ್ನು ಆಗಾಗ ಅವಮಾನಿಸುವುದು ಚಿತ್ರರಂಗದ ಕೆಲವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಹೇಳಿದರು.