ಭಾರತೀಯ ಗಣಿತಶಾಸ್ತ್ರದ ಪರಿಣಿತೆ, ನಮ್ಮ ಕನ್ನಡತಿ ಬೆಂಗಳೂರಿನ ಮಾನವ ಕಂಪ್ಯೂಟರ್‌ ಎಂದೇ ಖ್ಯಾತರಾದ ಶಕುಂತಲಾ ದೇವಿ ಅವರ ಜೀವನ ಚರಿತ್ರೆಯನ್ನು ಬಾಲಿವುಡ್‌ನಲ್ಲಿ ಸಿನಿಮಾ ಮಾಡಲಾಗಿದೆ. ವಿದ್ಯಾ ಬಾಲನ್ ಅದ್ಭುತ ಅಭಿನಯವನ್ನು ಪ್ರೇಕ್ಷಕರು ಟ್ರೈಲರ್‌ನಲ್ಲಿಯೇ ಮೆಚ್ಚಿಕೊಂಡಿದ್ದಾರೆ.

ಕನ್ನಡತಿ ಶಕುಂತಲಾ ದೇವಿ ಬಯೋಪಿಕ್‌ನಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್!

ಟ್ರೈಲರ್‌ ವೀಕ್ಷಿಸಿದರೆ ಹಾಸ್ಯ ಮತ್ತು ಗಣಿತ ಪಾಠ ಎರಡಕ್ಕೂ ಸಮಾನವಾಗಿ ಗಮನ ಹರಿಸಲಾಗಿದೆ. ವಿದ್ಯಾ ಬಾಲನ್ ವಸ್ತ್ರ ವಿನ್ಯಾಸ ಟ್ರೈಲರ್‌ನ ಆಕರ್ಷಣೆಯ ಕೇಂದ್ರ ಬಿಂದು. ಶಕುಂತಲಾ ದೇವಿ ಅವರ ವೈಯಕ್ತಿಕ ಜೀವನ,  ಪತಿ, ಮಗಳು ಮತ್ತು ಕೌಟುಂಬಿಕ ಕಲಹಗಳ ಬಗ್ಗೆಯೂ ತೋರಿಸಲಾಗಿದೆ.

ವಿಕ್ರಂ ಮಲ್ಹೋತ್ರಾ ಮತ್ತು ಸೋನಿ ಪಿಕ್ಚರ್ಸ್‌ ನಿರ್ಮಾಣದ, ಅನು ಮೆನನ್ ನಿರ್ದೇಶನ  ಶಕುಂತಲಾ ದೇವಿ ಬಯೋಪಿಕ್‌ನಲ್ಲಿ ಕನ್ನಡದ ಪ್ರಕಾಶ್ ಬೆಳವಾಡಿ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಅಮಿತ್ ಸಾಧ್, ಜಿಸ್ಶು ಸೇನ್‌ಗುಪ್ತಾ ಮತ್ತು ಇತರರು ಅಭಿನಯಿಸಿದ್ದಾರೆ.

ಜುಲೈ 31ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

 

ಡರ್ಟಿ ಪಿಕ್ಚರ್, ಕಹಾನಿ, ಮಂಗಳ್‌ಯಾನ್‌ನಂಥ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯವಿರುವ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರಕ್ಕೂ ಜೀವ ತುಂಬುವುದರಲ್ಲಿ ಅನುಮಾನವೇ ಇಲ್ಲ. ಎಂಥದ್ದೇ ಪಾತ್ರವಾದರೂ ಅದಕ್ಕೆ ತಕ್ಕಂತೆ ಅಭಿನಯಿಸುವುದು ವಿದ್ಯಾ ಬಾಲನ್‌ಗೆ ಕರಗತ. ಝೀರೋ ಸೈಜ್ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಬೆಳೆಯಲು ಸಾಧ್ಯ ಎನ್ನುವವರಿಗೆ, ವಿದ್ಯಾ ಸೌಂದರ್ಯಕ್ಕಿಂತಲೂ ಅಭಿನಯ, ಡಿಡಿಕೇಷನ್ ಮುಖ್ಯ ಎಂದು ತೋರಿಸಿಕೊಟ್ಟವರು. ಅಷ್ಟೇ ಅಲ್ಲ ಒಮ್ಮೆ ಕಪೂರ್ ಕುಟುಂಬದ ಕುಡಿ, ಝೀರೋ ಸೈಜ್ ಖ್ಯಾತಿಯ ಕರೀನಾ ಕಪೂರ್ ವಿದ್ಯಾ ಬಾಲನ್ ಅವರಿಗೆ ಬಾಡಿ ಶೇಮಿಂಗ್ ಮಾಡಿದ್ದರು. ಅದಕ್ಕೆ ನಯವಾಗಿಯೇ ಪ್ರತಿಕ್ರಿಯೆ ನೀಡಿದ ವಿದ್ಯಾ, 'ಝೀರೋ ಸೈಜ್ ಇದ್ದವರು ಹೀರೋಯಿನ್‌ನಂಥ ಚಿತ್ರದಲ್ಲಿ ನಟಿಸಬಹುದೇ ಹೊರತು, ಡರ್ಟಿ ಪಿಕ್ಚರ್ ಮಾಡಲು ಸಾಧ್ಯವಿಲ್ಲ,' ಎನ್ನುವ ಮೂಲಕ ತಮ್ಮ ಸಾಮರ್ಥ್ಯ ಏನೆಂದು ಹೇಳಿದ್ದರು.

ಬಾಲಿವುಡ್‌ ಸ್ಟಾರ್‌ ನಟ ನಟಿಯರ ಹೊಡೆದಾಟ, ಆಯಿತು ವಿಡಿಯೋ ವೈರಲ್‌

ಇದೀಗ ಕನ್ನಡತಿ ಶಕುಂತಲಾ ದೇವಿ ಪಾತ್ರಕ್ಕೆ ವಿದ್ಯಾ ಜೀವ ತುಂಬಿದ್ದಾರೆ. ಕನ್ನಡದ ಹೆಮ್ಮೆ, ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಚಿತ್ರವಾಗುತ್ತಿರುವುದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅಂಥದ್ದರಲ್ಲಿ ವಿದ್ಯಾ ಆ ಪಾತ್ರ ಮಾಡಿರುವುದು ಮತ್ತಷ್ಟು ಸಂತೋಷದ ವಿಷಯ. 

ಈ ಜೀನಿಯಸ್ ಭೇಟಿಯಾಗಲು ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ.