ಸೂಪರ್ ಪವರ್ ದೇಶದಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲ; ಮೋದಿ ವಿರುದ್ಧ ಸೆಲೆಬ್ರೆಟಿಗಳ ಆಕ್ರೋಶ!
ಕೊರೋನಾ ವೈರಸ್ ದೇಶದಲ್ಲಿ ಸೃಷ್ಟಿಸಿರುವ ಭೀಕರತೆಗೆ ಹಲವು ಜೀವಗಳು ಬಲಿಯಾಗಿದೆ. ಕೊರೋನಾ 2ನೇ ಅಲೆ ಈ ರೀತಿ ಅಬ್ಬರಿಸಲು ಪೂರ್ವ ತಯಾರಿ ನಡೆಸದೇ ಇರುವುದೇ ಕಾರಣ ಅನ್ನೋ ಮಾತು ಬಲವಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ(ಏ.25): ಕೊರೋನಾ ಮೊದಲ ಬಾರಿಗೆ ವಕ್ಕರಿಸಿದಾಗ ಭಾರತ ದಿಢೀರ್ ಕ್ರಮಗಳನ್ನು ಕೈಗೊಂಡು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ 2ನೇ ಅಲೆಗೆ ಭಾರತ ಸರಿಯಾಗಿ ತಯಾರಿ ಮಾಡಿಕೊಳ್ಳಲಿಲ್ಲ ಅನ್ನೋ ಆರೋಪಗಳಿವೆ. ವೈದ್ಯಕೀಯ ಕ್ಷೇತ್ರ ಬಲಪಡಿಸುವ ಕಾರ್ಯ ಆಗಲೇ ಇಲ್ಲ. ಪರಿಣಾಮ ದೇಶ ಅತೀ ಭೀಕರ ಕೊರೋನಾಗೆ ತುತ್ತಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ವೈಫಲ್ಯಗಳೇ ಕಾರಣ ಎಂದು ಭಾರತದ ಸೆಲೆಬ್ರೆಟಿಗಳು ಆರೋಪಿಸಿದ್ದಾರೆ.
ಪರಿಸ್ಥಿತಿ ಕೈ ಮೀರಿದೆ, ದೇಶ ಕಾಪಾಡಲು ಏಮ್ಸ್ ನಿರ್ದೇಶಕರ ಎಚ್ಚರಿಕೆ!.
ಕೊರೋನಾ ವಕ್ಕರಿಸಿದಾಗ ಭಾರತದ ವೈದ್ಯಕೀಯ ಕ್ಷೇತ್ರದ ಕೊರತೆಗಳು ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಕೊರೋನಾ ಮರೆತು ಚುನಾವಣೆಯತ್ತ ಗಮನಹರಿಸಿತು. ಪರಿಣಾಮ 2ನೇ ಅಲೆಗೆ ಅಮಾಯಕ ಜೀವಗಳು ಬಲಿಯಾಗುತ್ತಿದೆ ಎಂದು ಬಾಲಿವುಡ್ ಸೆಲೆಬ್ರೆಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಆದರೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೊರೋನಾ ನಿಯಂತ್ರಣ ಮಾಡಲು, ಸೋಂಕಿತರ ಆರೈಕೆ ಮಾಡಲು ಸಾಧ್ಯವಾಗದ ಕೇಂದ್ರ ಸರ್ಕಾರದ ವೈಪಲ್ಯವೇ ಕಾರಣ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಮತ ಹಾಕಿದ ಜನತಗೆ ಬಿಜೆಪಿ ಆತ್ಮನಿರ್ಭರ ಭಾರತ ಎಂದಿತು. ನಿಮ್ಮ ಆರೋಗ್ಯ, ಚಿಕಿತ್ಸೆ ಕೂಡ ನೀವೇ ನೋಡಿಕೊಳ್ಳಿ ಎಂದಿದೆ ಎಂದು ನಟಿ ಶ್ರುತಿ ಸೇಠ್ ಟ್ವೀಟ್ ಮಾಡಿದ್ದಾರೆ.
ಭಾರದಲ್ಲಿ 20 ಸ್ಮಾರ್ಟ್ ಸಿಟಿ, ಸೂಪರ್ ಪವರ್ ದೇಶ, 5 ಟ್ರಿಲಿಯನ್ ಎಕನಾಮಿ ಎಂದ ದೇಶದಲ್ಲಿ ಆಸ್ಪತ್ರೆ ಇಲ್ಲ, ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಕೊನೆ ಪಕ್ಷ ಚಿತಾಗಾರ ಕೂಡ ಇಲ್ಲ ಎಂದು ನಟಿ ರಿಚಾ ಚಡ್ಡಾ ಟ್ವೀಟ್ ಮಾಡಿದ್ದಾರೆ.
ನಟ ಸಿದ್ಧಾರ್ಥ್ ಸರಣಿ ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿ ಪೊಳ್ಳು ಭರವಸೆ ಜನರಿಗೆ ಈಗ ಅರಿವಾಗಿದೆ. ಎಲ್ಲವೂ ಮತಕ್ಕಾಗಿ ಹೊರತು ದೇಶಕ್ಕಾಗಿ ಅಲ್ಲ ಎಂದು ಸಿದ್ಧಾರ್ಧ್ ಹೇಳಿದ್ದಾರೆ.
ಫರಾನ್ ಅಕ್ತರ್, ಕಾಮಿಡಿ ನಟ ಅತುಲ್ ಕಾತ್ರಿ, ನಿರ್ದೇಶಕಿ ಸ್ವರಾ ಭಾಸ್ಕರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.