ಬೆಂಗಳೂರು (ಮಾ. 27): ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. 

ನಾನು ಸಕ್ರಿಯ ರಾಜಕಾರಣಕ್ಕೆ ಮೊದಲ ಹೆಜ್ಜೆ ಇರಿಸಿದ್ದೇನೆ. ಸರ್ದಾರ್ ವಲ್ಲಭಬಾಯಿ ಪಟೇಲ್, ಮಹಾತ್ಮ ಗಾಂಧಿ, ನೆಹರು ಐಡಿಯಾಲಜಿಗಳನ್ನು ನಮ್ಮ ಕುಟುಂಬ ಪಾಲಿಸುತ್ತಾ ಬಂದಿದೆ. ನನ್ನನ್ನೂ ಹಾಗೆ ಬೆಳೆಸುತ್ತಾ ಬಂದಿದೆ. ನನ್ನ ರಾಜಕೀಯ ದೃಷ್ಟಿಕೋನವೂ ಹಾಗೆಯೇ ಬೆಳೆದಿದೆ. ನನಗೆ ಚಿಕ್ಕಂದಿನಿಂದಲೂ ಸಾಮಾಜಿಕ ಕಳಕಳಿ ಇತ್ತು. ಆಕಸ್ಮಿಕವಾಗಿ ಫಿಲ್ಮ್ ಫೀಲ್ಡಿಗೆ ಬಂದೆ. ಇದೀಗ ಕಾಂಗ್ರೆಸ್ ಗೆ ಸೇರಿದ್ದೇನೆ ಎಂದಿದ್ದಾರೆ. 

ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಊರ್ಮಿಳಾ ಮಾತೋಡ್ಕರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಉತ್ತರದಿಂದ ಸ್ಪರ್ಧಿಸಿದರೆ ಬಿಜೆಪಿಯ ಗೋಪಾಲ್ ಶೆಟ್ಟಿಯವರನ್ನು ಎದುರಿಸಬೇಕಾಗುತ್ತದೆ. 

ಊರ್ಮಿಳಾ ಮಾಸೂಮ್ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರು. 1995 ರಲ್ಲಿ ತೆರೆಕಂಡ ರಂಗೀಲಾ ಸಿನಿಮಾ ಇವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು.