Asianet Suvarna News Asianet Suvarna News

ನಿಗಮ ಮಂಡಳಿ ನೇಮಕ ಕುರಿತು ಸಿಎಂ ಬಳಿ ಚರ್ಚೆ - ಭೈರತಿ ಬಸವರಾಜ್‌

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯವಿದ್ದು ಈ ಸಂಬಂಧ ಹಿಂದುಳಿದ ವರ್ಗದವರು ಸಂಘಟಿತರಾಗಬೇಕೆಂದು ಸಚಿವ ಭೈರತಿ ಬಸವರಾಜ್‌ ಮನವಿ ಮಾಡಿದರು

CM discussion on appointment of Corporation Board
Author
First Published Oct 2, 2022, 11:12 AM IST

ಚಿತ್ರದುರ್ಗ (ಅ.2)  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯವಿದ್ದು ಈ ಸಂಬಂಧ ಹಿಂದುಳಿದ ವರ್ಗದವರು ಸಂಘಟಿತರಾಗಬೇಕೆಂದು ಸಚಿವ ಭೈರತಿ ಬಸವರಾಜ್‌ ಮನವಿ ಮಾಡಿದರು

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೆ.ಆರ್‌.ಕ್ಷೇತ್ರಕ್ಕೆ 25 ಕೋಟಿ ನೆರವು: ಬೈರತಿ ಬಸವರಾಜ್

ಕಲಬುರಗಿಯಲ್ಲಿ ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಾಗೃತಿ ಸಮಾವೇಶದ ಅಂಗವಾಗಿ ಶನಿವಾರ ಚಿತ್ರದುರ್ಗದಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾವೇಶಕ್ಕೆ ಜಿಲ್ಲೆಯಿಂದ 15 ಸಾವಿರ ಜನ ಭಾಗವಹಿಸಬೇಕು. ಸಮಾವೇಶ ಯಶಸ್ವಿಯಾಗಬೇಕು. ಹಿಂದುಳಿದವರು ಯಾರು ತಪ್ಪಿಸಿಕೊಳ್ಳಬಾರದು ಎಂದರು. ಚಿತ್ರದುರ್ಗದಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ ಇದುವರೆಗೂ ನಿಗಮ ಮಂಡಳಿಗಳಿಗೆ ನೇಮಕ ಮಾಡಿಲ್ಲ ಎನ್ನುವ ಕೊರಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ಗಮನ ಸೆಳೆದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಳಿ ಮಾತನಾಡಿ ಚಿತ್ರದುರ್ಗಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದೆಂದರು.

ಚಿತ್ರದುರ್ಗದವರಿಗೆ ಸಿಕ್ಕಿಲ್ಲ ನಿಗಮ ಮಂಡಳಿ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ಜಾಸ್ತಿಯಿದ್ದಾರೆ. ಇಲ್ಲಿಯೇ ಸಮಾವೇಶ ನಡೆಯಬೇಕಿತ್ತು. ಆದರೆ ಪಕ್ಷದ ನಾಯಕರುಗಳು ಗುಲ್ಬರ್ಗದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ನಮ್ಮ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕು. ರಾಜ್ಯದಲ್ಲಿ 150 ಸೀಟುಗಳು ನಮ್ಮ ಪಕ್ಷಕ್ಕೆ ಸಿಗಬೇಕು. ನಿಗಮ ಮಂಡಳಿಗಳಿಗೆ ಒಬ್ಬರನ್ನು ನೇಮಕ ಮಾಡಿಲ್ಲ ಎನ್ನುವ ಅಸಮಾಧಾನ ನಮ್ಮ ಕಾರ್ಯಕರ್ತರಲ್ಲಿದೆ. ಈ ಸಂಬಂಧ ರಾಜ್ಯದ ನಾಯಕರುಗಳ ಜೊತೆ ಮಾತನಾಡಬೇಕೆಂದು ಸಚಿವ ಭೈರತಿ ಬಸವರಾಜ್‌ ಅವರಲ್ಲಿ ಮನವಿ ಮಾಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೇಲ ನರೇಂದ್ರಬಾಬು ಮಾತನಾಡಿ, ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತಗಳೆ ನಿರ್ಣಾಯಕ ಪಾತ್ರ ವಹಿಸಲಿವೆ. ಕೇಂದ್ರದಲ್ಲಿ 21 ಸಚಿವರು ಹಿಂದುಳಿದವರಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದವರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದೆ. ಶೇ.27 ರಷ್ಟುಮೀಸಲಾತಿಯನ್ನು ಕೇಂದ್ರ ಸರ್ಕಾರ ಹಿಂದುಳಿದವರಿಗೆ ನೀಡಿದೆ ಎಂದರು.

ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಗುಲ್ಬರ್ಗದಲ್ಲಿ ನಡೆಯುವ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶದಲ್ಲಿ 5 ಲಕ್ಷ ಜನರನ್ನು ಸೇರಿಸುವ ತಯಾರಿ ನಡೆಯುತ್ತಿದೆ. 2023ರ ವಿಧಾನಸಭೆ ಚುನಾವಣೆಗೆ ಈ ಸಮಾವೇಶ ದಿಕ್ಸೂಚಿಯಾಗಲಿದೆ. ಎಲ್ಲಾ ಬೂತ್‌ಗಳಿಂದ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಸೂಚಿಸಿದರು.

ದಾವಣಗೆರೆಯ ಬಾಪೂಜಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಗೈದ ಉಸ್ತುವಾರಿ ಸಚಿವ ಬೈರತಿ ಬಸವರಾಜ್

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಜಿಲ್ಲೆಯಲ್ಲಿರುವ ಪ್ರತಿ ಮಂಡಲದ ಸಮುದಾಯದ ಪ್ರಮುಖರು ಹಿಂದುಳಿದವರು ಸಮಾವೇಶದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಸಮಾವೇಶಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬಣ್ಣ ,ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್‌, ನಗರಾಧ್ಯಕ್ಷ ಎನ್‌.ಕೃಷ್ಣ ಹಾಗೂ ಎಲ್ಲಾ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios