ಹೊಸದುರ್ಗ: ಭದ್ರಾ ಕಾಲುವೆ ಕಾಮಗಾರಿ ಕಳಪೆಯಾಗಿಲ್ಲ ಎಂದ ಮಾಜಿ ಶಾಸಕ
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕಳಪೆಯಾಗಿಲ್ಲ| ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕೆಲಸವನ್ನೇ ಮಾಡಿದ್ದಾರೆ| ಈ ಪ್ರದೇಶ ಗಣಿಗಾರಿಕೆ ಪ್ರದೇಶವಾಗಿದ್ದು, ಹೆಚ್ಚು ಕಲ್ಲು, ಬಂಡೆಗಳಿಂದ ಕೂಡಿದೆ| ಇಲ್ಲಿ ಕೆಲಸ ಮಾಡುವಾಗಲೇ ನಿಸರ್ಗದತ್ತವಾದ ನೀರಿನ ಹರಿವಿನ ಸುರಂಗ ಪತ್ತೆಯಾಗಿತ್ತು| ಅದು ಕಾಲುವೆಯ ಅರ್ಧಕ್ಕಿಂತ ಮೇಲ್ಭಾಗದಲ್ಲಿ ಬಂದಿದ್ದರಿಂದ ಅಲ್ಲದೆ, ಆ ಮಟ್ಟಕ್ಕಿಂತ ಮೇಲೆ ನೀರು ಹರಿಯುವುದಿಲ್ಲ ಎಂದು ಅದನ್ನು ಹಾಗೆಯೇ ಬಿಟ್ಟು ಕಾಲುವೆ ನಿರ್ಮಿಸಲಾಗಿತ್ತು|
ಹೊಸದುರ್ಗ(ಅ.17): ತಾಲೂಕಿನಲ್ಲಿ ನಡೆದಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕಳಪೆಯಾಗಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕೆಲಸವನ್ನೇ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಹೇಳಿದ್ದಾರೆ.
ಪಟ್ಟಣದ ಕನಕ ಪತ್ತಿನ ಸಹಕಾರ ಬ್ಯಾಂಕ್‌ನ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ದೊಡ್ಡಕಿಟ್ಟದಹಳ್ಳಿ ಬಳಿ ಸುರಂಗದಿಂದ ಮುಂದಿನ ನಾಲೆಯಲ್ಲಿ ಇತ್ತೀಚಿಗೆ ಮಳೆ ಬಂದು ಕಂದಕ ಬಿದ್ದಿರುವ ಘಟನೆ ನಡೆದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ಬಂದ ಕಳಪೆ ಕಾಮಗಾರಿ, ಅವ್ಯವಹಾರದ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಪ್ರದೇಶ ಗಣಿಗಾರಿಕೆ ಪ್ರದೇಶವಾಗಿದ್ದು, ಹೆಚ್ಚು ಕಲ್ಲು, ಬಂಡೆಗಳಿಂದ ಕೂಡಿದೆ. ಇಲ್ಲಿ ಕೆಲಸ ಮಾಡುವಾಗಲೇ ನಿಸರ್ಗದತ್ತವಾದ ನೀರಿನ ಹರಿವಿನ ಸುರಂಗ ಪತ್ತೆಯಾಗಿತ್ತು. ಆದರೆ, ಅದು ಕಾಲುವೆಯ ಅರ್ಧಕ್ಕಿಂತ ಮೇಲ್ಭಾಗದಲ್ಲಿ ಬಂದಿದ್ದರಿಂದ ಅಲ್ಲದೆ, ಆ ಮಟ್ಟಕ್ಕಿಂತ ಮೇಲೆ ನೀರು ಹರಿಯುವುದಿಲ್ಲ ಎಂದು ಅದನ್ನು ಹಾಗೆಯೇ ಬಿಟ್ಟು ಕಾಲುವೆ ನಿರ್ಮಿಸಲಾಗಿತ್ತು. ಕಾಲುವೆ ಕಾಮಗಾರಿ ಪೂರ್ಣವಾಗದ ಕಾರಣ ಮುಂದಕ್ಕೆ ನೀರು ಹರಿಯದಂತೆ ಮುಂದೆ ಮಣ್ಣಿನಿಂದ ಏರಿ ಹಾಕಲಾಗಿತ್ತು. ಆದರೆ, ಇತ್ತೀಚಿಗೆ ಆ ಭಾಗದಲ್ಲಿ ಸುರಿದ ಮಳೆ ನೀರು ಕಾಲುವೆಯಲ್ಲಿ ಹರಿದು ಮುಂದೆ ಹೊಗಲು ಮಣ್ಣಿನ ಏರಿ ಹಾಕಿದ್ದರಿಂದ ಅಲ್ಲೇ ನೀರು ಸಂಗ್ರಹ ಹೆಚ್ಚಾಗಿ ಈ ಸುರಂಗದ ಮೂಲಕ ನೀರು ಹೋಗಿ ಕಂದಕ ಬಿದ್ದಿದೆಯೇ ಹೊರತು, ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ, ಕಳಪೆ ಕಾಮಗಾರಿ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ವಿಚಾರ ನನಗೆ, ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾತ್ರ ಗೊತ್ತಿರುವುದರಿಂದ ಹಲವರು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಈಗಾಗಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಜಲ ನಿಗಮದ ಅಧಿಕಾರಿಗಳು ಮಾತನಾಡಿದ್ದು, ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಆಧುನಿಕ ಯಂತ್ರಗಳ ಮೂಲಕ ಈ ಸುರಂಗ ಎಲ್ಲಿಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚಲಿದ್ದಾರೆ ಎಂದು ತಿಳಿಸಿದರು.
ತರೀಕೆರೆ ಭಾಗದ ಜನಪ್ರತಿನಿಧಿಗಳು ಯೋಜನೆಯ ಪರವಾಗಿಲ್ಲ, ಅಲ್ಲಿನ ರೈತರ ಪರವಾಗಿದ್ದಾರೆ. 12 ವರ್ಷದಿಂದ 53 ಕಿ.ಮೀ. ಮಾತ್ರ ಕಾಲುವೆ ಕೆಲಸ ನಡೆದಿದೆ. ಇನ್ನೂ 16 ಕಿ.ಮೀ. ಕಾಲುವೆ ಕೆಲಸ ಬಾಕಿ ಇದೆ. ಆದರೆ, ಹೊಸದುರ್ಗ ತಾಲೂಕಿನಲ್ಲಿ 3 ವರ್ಷಗಳಲ್ಲಿ ಭೂಸ್ವಾಧೀನ ಸೇರಿ 52 ಕಿ.ಮೀ. ಕೆನಲ್ ಕೆಲಸ ಪೂರ್ಣಗೊಂಡಿದೆ.
ಸದ್ಯದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ನೀರಾವರಿ ಸಚಿವರು ಹಾಗೂ ಮಾಜಿ ಕಾನೂನು ಸಚಿವರನ್ನು ಕರೆಸಿ ಚಳ್ಳಕೆರೆ, ಹೊಸದುರ್ಗ ಹಾಗೂ ಹಿರಿಯೂರು ತಾಲೂಕಿನ ಜನರನ್ನು ಸೇರಿಸಿ ವಾಣಿ ವಿಲಾಸ ಸಾಗರದ ಬಳಿ ಬೃಹತ್ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಇಸ್ಮಾಯಿಲ್, ಕೆಟಿ ಮಂಜುನಾಥ್ ಇದ್ದರು.