ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ, ದತ್ತಪೀಠದಿಂದ ಮರಳುವಾಗ ಈ ಘಟನೆ ನಡೆದಿದೆ. ಪುತ್ತೂರಿನಿಂದ ಜೀಪ್ ಮೂಲಕ ಆಗಮಿಸಿದ್ದ ಪ್ರವಾಸಿಗರ ಜೀಪ್ ಪಲ್ಟಿಯಾಗಿ ಅವಘಡ ನಡೆದಿದೆ. 

ಚಿಕ್ಕಮಗಳೂರು (ಡಿ.25) ರಜಾ ದಿನಗಳ ಹಿನ್ನಲೆಯಲ್ಲಿ ಕರ್ನಾಟಕದ ಹಲವು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಭಾರಿ ಟ್ರಾಫ್ ಜಾಮ್ ಸೃಷ್ಟಿಯಾಗಿದೆ. ರಸ್ತೆಗಳಲ್ಲೇ ಪ್ರವಾಸಿಗರು ಗಂಟೆ ಗಟ್ಟಲೇ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಭಾರಿ ಜನದಟ್ಟಣೆ ನಡುವೆ ಅಪಘಾತ ಸಂಭವಿಸಿದೆ. ದತ್ತಪೀಠದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರ ಜೀಪ್ ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್ ಕ್ರಾಸ್ ಬಳಿ ಪ್ರವಾಸಿಗರ ಜೀಪ್ ಪಲ್ಟಿಯಾಗಿದೆ. ಅಪಘಾತದಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದತ್ತಪೀಠಕ್ಕೆ ಆಗಮಿಸಿದ್ದ ಪುತ್ತೂರು ಮೂಲದ ಪ್ರವಾಸಿಗರು

ಕೆಲಸಕ್ಕೆ ರಜಾದಿನವಾಗಿದ್ದ ಕಾರಣ ದಕ್ಷಿಣ ಕನ್ನಡದ ಪುತ್ತೂರು ಮೂಲ ಪ್ರವಾಸಿಗರು ತಮ್ಮ ಜೀಪ್ ಮೂಲಕ ಚಿಕ್ಕಮಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದತ್ತಪೀಠಕ್ಕೆ ಆಗಮಿಸಿದ್ದರು. ಪುತ್ತೂರಿನಿಂದ ಜೀಪ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಿದ ಪ್ರವಾಸಿಗರು, ದತ್ತಪೀಠ ದರ್ಶನ ಮಾಡಿದ್ದರು. ದತ್ತಪೀಠ ದರ್ಶನ ಬಳಿಕ ಮರಳುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಭಾರಿ ತಿರುವಿನ ರಸ್ತೆಯಲ್ಲಿ ಜೀಪ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಪಲ್ಟಿಯಾಗಿದೆ.

ಗಾಯಾಳುಗಳನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳೀಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಬಳ್ಳಾರಿ ರಸ್ತೆ ಅಪಘಾತಕ್ಕೆ ಮೂವರು ಸಾವು

ಬಳ್ಳಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ಕಾರಿನಲ್ಲಿ ಪ್ರಯಾಣಿಸುತ್ತದ್ದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಮತ್ತು ಸಿರುಗುಪ್ಪ ರಸ್ತೆ ಮಧ್ಯ ಬರುವಾಗ ದೇವಿ ನಗರ ಕ್ಯಾಂಪ್ ಹತ್ತಿರ ಅಪಘಾತ ನಡೆದಿದೆ. ತಮಿಳುನಾಡಿನ ನಾಲ್ಕು ದೇವಸ್ಥಾನಕ್ಕೆ ತೆರಳಿ ಮರಳುವಾಗ ಈ ಘಟನೆ ನಡೆದಿದೆ. ನಿದ್ದೆ ಮಂಪರು ಹಾಗೂ ಮಂಜುಗಟ್ಟದ ವಾತಾವರಣದ ಹಿನ್ನೆಲೆ ರಸ್ತೆ ಕಾಣದೇ ಬೆಳಗ್ಗೆ 5 ಗಂಟೆ ಕಿರು ಸೇತುವೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ನಿಟ್ಟೂರು ಪ್ರಸಾದ್ ರಾವ್ ಮತ್ತು ಜೊತೆಗಿದ್ದ ಇಬ್ಬರು ಮಹಿಳೆಯರು ಸೇರಿ 3 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.