ಪಕ್ಷದ ವಿಚಾರದಲ್ಲಿ ಬಿಎಸ್ ವೈ ಕೈ ಹಾಕಲ್ಲ : ಕಟೀಲ್
ನನ್ನ ಹಾಗೂ ಯಡಿಯೂರಪಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮಿಬ್ಬರ ಸಂಬಂಧ ಉತ್ತಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿಕ್ಕಮಗಳೂರು [ನ.11]: ನನ್ನ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧ ಚೆನ್ನಾಗಿದೆ. ನಾನು ಸರ್ಕಾರದ ವಿಷಯದಲ್ಲಿ ಕೈ ಹಾಕುವುದಿಲ್ಲ, ಅವರು ಪಕ್ಷದ ವಿಚಾರದಲ್ಲಿ ಕೈ ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬರ ಇತ್ತು, ನೆರೆ ಉಂಟಾಗಿ ಸಾಕಷ್ಟು ನಷ್ಟ ಉಂಟಾಗಿತ್ತು. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸಿದರು ಎಂದು ಹೊಗಳಿದರು.
ಶಾಸಕ ರಾಜು ಕಾಗೆ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಂಬಂಧದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ವೈಯಕ್ತಿಕ ಸಂಬಂಧಗಳು ಇರುತ್ತವೆ. ಅವುಗಳಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನನ್ನ ಹಾಗೂ ಜನಾರ್ದನ ಪೂಜಾರಿ ನಡುವಿನದು ಗುರು-ಶಿಷ್ಯರ ಸಂಬಂಧ. ಅವರು ನನ್ನ ಗುರುಗಳು. ನಾವು ಪ್ರತಿದಿನ ಮಾತನಾಡುತ್ತೇವೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಾಗೆಂದು ಅವರೇನೂ ಬಿಜೆಪಿಗೆ ಬಂದಿಲ್ಲ, ನಾನೇನು ಕಾಂಗ್ರೆಸ್‌ಗೆ ಹೋಗಿಲ್ಲ ಎಂದರು. ಅಯೋಧ್ಯೆಯ ರಾಮ ಮಂದಿರ ರಾಷ್ಟ್ರ ಮಂದಿರವಾಗಿ ಪರಿವರ್ತನೆಯಾಗಲಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಒಡಕು, ಸಂಶಯ, ಚರ್ಚೆಗೆ ಆಸ್ಪದ ಇಲ್ಲದೇ ನ್ಯಾಯಾಲಯ ತೀರ್ಮಾನ ಕೊಟ್ಟಿದೆ. ರಾಮನ ಹೆಸರು ವಿಭಜನೆ ಅಲ್ಲ, ಸಂಘಟನೆ. ಎಲ್ಲರನ್ನೂ ಒಂದು ಮಾಡುತ್ತದೆ ಎಂದು ತಿಳಿಸಿದರು.