3 ತಿಂಗಳ ಹಸುಗೂಸನ್ನೇ ಭದ್ರಾ ನಾಲೆಗೆ ಎಸೆದ ತಾಯಿ
ಮೂರು ತಿಂಗಳ ಹಸುಗೂಸನ್ನು ತಾಯಿಯೆ ನಾಲೆಗೆ ಎಸೆದ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ತರೀಕೆರೆ [ನ.09]: ಮೂರು ತಿಂಗಳ ಹಸುಗೂಸನ್ನು ಹೆತ್ತ ತಾಯಿಯೇ ನಾಲ್ಕು ಕಿ.ಮೀ. ನಡೆದು ಹೋಗಿ ನಾಲೆಗೆ ಎಸೆದ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ವರದಿಯಾಗಿದೆ.
ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ತಿಮ್ಮಯ್ಯ ಎಂಬವರ ಪತ್ನಿ ಕಮಲಾ ಮಗುವನ್ನು ನಾಲೆಗೆಸೆದ ಆರೋಪಿ. ಅವರು ತಮ್ಮ ಮೂರು ತಿಂಗಳ ಗಂಡು ಮಗುವಿಗೆ ಆರೋಗ್ಯ ಸರಿಯಿಲ್ಲ ಎಂದು ಸೋಮವಾರ ತರೀಕೆರೆ ಪಟ್ಟಣದ ಬಸವೇಶ್ವರ ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದರು.
ಮಂಗಳವಾರ ಚಿಕಿತ್ಸೆ ಮುಗಿದ ಬಳಿಕ ಆಸ್ಪತ್ರೆಯಿಂದ ಹೊರಬಂದು ಸುಮಾರು 4 ಕಿ.ಮೀ. ದೂರವಿರುವ ಹಳಿಯೂರು ಬಳಿ ಭದ್ರಾ ಮೇಲ್ದಂಡೆ ಕಾಲುವೆಗೆ ಮಗುವನ್ನು ಎಸೆದಿದ್ದಾರೆ. ವಾಪಸ್ ಬಂದು ಅಪರಿಚಿತರು ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಸಂತೆದಿಬ್ಬದ ಬಳಿ ಮಗುವಿನ ಶವ ಚಾನಲ್‌ನಲ್ಲಿ ತೇಲಿ ಹೋಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬೆಟ್ಟತಾವರೆಕೆರೆ ಭದ್ರಾ ಮೇಲ್ದಂಡೆ ಕಾಲುವೆ ಪಂಪ್ ಹೌಸ್ ಬಳಿ ಗ್ರಾಮಸ್ಥರ ಸಹಕಾರದಿಂದ ಮಗುವನ್ನು ನಾಲೆಯಿಂದ ಹೊರಕ್ಕೆ ಎತ್ತಲಾಯಿತು ಎಂದು ಪೋಲೀಸರು ತಿಳಿಸಿದ್ದಾರೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಿ ನ.೧೯ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.