Asianet Suvarna News Asianet Suvarna News

Farmers Scheme ಮಧ್ಯವರ್ತಿ, ಗುತ್ತಿಗೆದಾರರಿಲ್ಲ, ನೇರವಾಗಿ ರೈತರ ಖಾತೆಗೆ ಹಣ ಜಮೆಗೆ ಕ್ರಮ, ಕೋಟಾ ಶ್ರೀನಿವಾಸ್‌ ಪೂಜಾರಿ

  • ಕಾರ್ಯಾಗಾರ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
  •  ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರ
  • ಹಿಂದುಳಿದ ವರ್ಗಕ್ಕೆ 4 ಸಾವಿರ ಕೊಳವೆಬಾವಿ ಕೊರೆಸುವ ಗುರಿ
     
Money Direct transfer to Farmers account says Karnataka Ministet kota srinivas poojary ckm
Author
Bengaluru, First Published Mar 20, 2022, 4:10 AM IST

ಚಿಕ್ಕಮಗಳೂರು(ಮಾ.20): ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರರಿಗೆ ಹಣ ನೀಡದೇ ನೇರವಾಗಿ ರೈತರ ಖಾತೆಗೇ ಹಣ ಜಮೆ ಮಾಡುವ ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಎಐಟಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತ್ಯೋದಯ ಜಿಲ್ಲಾಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಪರಿಶಿಷ್ಟಜಾತಿ, ಪಂಗಡದ 19 ಸಾವಿರ ಜನರಿಗೆ, ಹಿಂದುಳಿದ ವರ್ಗಕ್ಕೆ 4 ಸಾವಿರ ಕೊಳವೆಬಾವಿ ಕೊರೆಸುವ ಗುರಿ ಹೊಂದಲಾಗಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿ ಉದಯವಾಗುವಂತೆ ಮಾಡುವುದೇ ಅಂತ್ಯೋದಯದ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಸವಲತ್ತುಗಳು ಭಷ್ಟಾಚಾರರಹಿತ, ಪಾರದರ್ಶಕವಾಗಿ ತಲುಪಬೇಕಿದೆ.ಬಡವರಿಗೆ ಸರ್ಕಾರ ಯೋಜನೆ ಸಿಗುವಂತೆ ನೋಡಿಕೊಳ್ಳುವುದೇ ಸರ್ಕಾರ ಆಶಯ ಎಂದರು.

Karwar: ಅರ್ಹರಿಗೆ ಯೋಜನೆ ತಲುಪಿಸಲು ಅಂತ್ಯೋದಯ: ಸಚಿವ ಕೋಟ

ಅಸ್ಪೃಶ್ಯತೆಮುಕ್ತ ಗ್ರಾಮ ಪಂಚಾಯಿತಿ ಘೋಷಣೆಯಾಗಬೇಕಿದೆ. ಅಸ್ಪೃಶ್ಯತೆ ನಿವಾರಣೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಗುವೊಂದು ದೇವಾಲಯಕ್ಕೆ ಹೋದಾಗ ಅವರ ಪೋಷಕರಿಗೆ ದಂಡವಿಧಿಸಿದ್ದು, ಆ ಬಾಲಕನನ್ನು ಸರ್ಕಾರ ದತ್ತು ಪಡೆದು ಉನ್ನತ ಶಿಕ್ಷಣ ಪಡೆಯುವವರೆಗೆ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ತಿಳಿಸಿ, ಬಡಜನರ ಬದುಕು ಹಸನಾದರೆ ಅಂತ್ಯೋದಯ ಯೋಜನೆ ಜಾರಿ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದಲ್ಲಿ ಹಿಂದುಳಿದ, ಧ್ವನಿ ಇಲ್ಲದವರಿಗೆ ಮೀಸಲಾತಿ ಸಿಗುವ ಕುರಿತು ಸರ್ಕಾರ ಕಾನೂನು ಜಾರಿಗೊಳಿಸುವ ಅಗತ್ಯವಿದೆ. ಜನಪ್ರತಿನಿಧಿಗಳು ಮತ್ತು ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳೇ ಮಕ್ಕಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ಅವರನ್ನು ಮೀಸಲಾತಿಯಿಂದ ಹೊರಗಿಡಬೇಕಾಗಿದೆ ಎಂದು ತಿಳಿಸಿದರು.

ಆರ್ಥಿಕವಾಗಿ ಸಬಲರಾಗಿರುವವರು ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷಿ,ತೋಟಗಾರಿಕೆ, ರೇಷ್ಮೆ ಇಲಾಖೆಗಳನ್ನು ಒಗ್ಗೂಡಿಸಿ, ಯೋಜನೆಗಳನ್ನು ಕ್ರೋಢೀಕರಿಸಲು ಸಾಧ್ಯವಾ, ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸುವುದು ಒಳ್ಳೆಯದು ಎಂದು ಕೇಂದ್ರ ರಾಜ್ಯ ಸಚಿವೆ ಸಲಹೆ ನೀಡಿದರು.

 ಹಿಜಾಬ್‌ ಹೆಸರಲ್ಲಿ ಕುತಂತ್ರ, 6 ವಿದ್ಯಾರ್ಥಿನಿಯರಿಗೆ ಮಾತ್ರ ಸಮಸ್ಯೆ ಯಾಕಾಯ್ತು? ಸಚಿವ ಕೋಟ!

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ.ರವಿ ಅವರು, ಜಾತಿವಾರು ನಿಗಮ, ಮಂಡಳಿ ಸ್ಥಾಪನೆ ಕುರಿತು ಮರುಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಗ್ರಾಮಕ್ಕೊಂದೇ ಶಾಲೆ ಹೇಗೋ ಹಾಗೆಯೇ ಹಳ್ಳಿಗೊಂದೆ ಸ್ಮಶಾನವಿರಬೇಕೆಂದು ಹೇಳಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಮಾತನಾಡಿ, ಎರಡು ಎಕರೆ ಮೇಲ್ಪಟ್ಟವರಿಗೂ ಗಂಗಾಕಲ್ಯಾಣ ಯೋಜನೆ ಸವಲತ್ತು ಸಿಗುವಂತೆ ಸಚಿವರು ನೋಡಿಕೊಳ್ಳಬೇಕೆಂದು ತಿಳಿಸಿದರು.

ವಿಧಾನ ಪರಿಷತ್ತು ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಪಂಚಾಯಿತಿ ಸದಸ್ಯರ ಸಮಸ್ಯೆ ಮತ್ತು ಗೌರವಧನ ಹೆಚ್ಚಳದ ಬಗ್ಗೆ 25 ವಿಧಾನ ಪರಿಷತ್ತು ಸದಸ್ಯರು ಸರ್ಕಾರದ ಗಮನ ಸೆಳೆದಿದ್ದೇವೆ ಎಂದರು.

ವಿಪ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಿ.ಎಸ್‌.ಸುರೇಶ್‌, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಸಿಡಿಎ ಅಧ್ಯಕ್ಷ ಆನಂದ್‌, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳಾದ ರಮೇಶ್‌ದೇಸಾಯಿ, ಶಿವಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಎಂ.ಎಚ್‌.ಅಕ್ಷಯ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಹಿರಿಯ ಉಪವಿಭಾಗಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವೈ.ಸೋಮಶೇಖರ್‌ ಇದ್ದರು.

Follow Us:
Download App:
  • android
  • ios