ಚಿಕ್ಕಮಗಳೂರು [ಅ.12]:  ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದ್ದು ಈ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್‌  ಮಾತನಾಡಿ, ಈ ಬಾರಿ ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗಿದ್ದು ದೊಡ್ಡ ಅವಾಂತರ ಸೃಷ್ಟಿಸಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಾಫಿ ಬೆಲೆ ಕುಸಿತ, ಹವಾಮಾನ ವೈಪರಿತ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ ಉದ್ಯಮವನ್ನು ನಡೆಸಲಾಗದೆ ಅಸಹಾಯಕರಾಗಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭ ಈ ಮೂರು ಜಿಲ್ಲೆಗಳಲ್ಲಿ ಆಗಿರುವ ನಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸಾಲಮನ್ನಾ ಮಾಡಿ:  ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡ ಬೆಳೆಗಾರರಿಗೆ ಅದೇ ವಿಸ್ತೀರ್ಣದ ಪರಾರ‍ಯಯ ಭೂಮಿ ನೀಡುವುದು, ಅವರು ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಕುಗಳಲ್ಲಿ ಪಡೆದಿರುವ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವುದು, ವಾಣಿಜ್ಯ ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ದೀರ್ಘಾವಧಿ ಕೃಷಿ ಸಾಲ 7ವರ್ಷಗಳಿಗೆ ಶೇ.3 ಬಡ್ಡಿದರದಲ್ಲಿ ಮರುಹೊಂದಾಣಿಕೆ ಮಾಡಬೇಕು ಮತ್ತು 3ವರ್ಷ ಮರುಪಾವತಿಗೆ ರಜೆ ಕೊಡಬೇಕು ಹಾಗೂ ಅತೀವೃಷ್ಟಿಪ್ರದೇಶದಲ್ಲಿ ಹಾನಿಗೊಳಗಾಗಿರುವ ಭೂಮಿಗೆ ಎಕರೆಗೆ ಕನಿಷ್ಠ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬೆಳೆಗಾರರ ಪರಿಸ್ಥಿತಿ ಅರಿತು ಎಸ್‌ಎಲ್‌ಬಿಸಿ ಸಮಿತಿ ಸಾಲ ವಸೂಲಾತಿಗೆ ತಡೆಯಾಜ್ಞೆ ನೀಡಿದ್ದರೂ ಬ್ಯಾಂಕುಗಳು ಸಾಲ ಮರುಪಾವತಿಗೆ ಒತ್ತಾಯಿಸುತ್ತಿವೆ. ಬ್ಯಾಂಕ್‌ಗಳು ಎಸ್‌ಎಲ್‌ಬಿಸಿ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾಲ ಮರುಹೊಂದಾಣಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10 ಎಚ್‌ಪಿ ಪಂಪ್‌ ಸೆಟ್‌ ಉಳ್ಳ ಸಣ್ಣ ಬೆಳೆಗಾರರಿಗೆ ಶುಲ್ಕ ರಹಿತ ವಿದ್ಯುತ್‌ ಪೂರೈಸುವುದು, ಹಳೆ ಬಾಕಿಹಣವನ್ನು ಮನ್ನಾ ಮಾಡುವುದು, 10ಎಚ್‌ಪಿ ಪಂಪ್‌ ಸೆಟ್‌ಗಿಂತ ಮೇಲ್ಪಟ್ಟವರಿಗೆ ಬಾಕಿಯನ್ನು ಬಡ್ಡಿರಹಿತವಾಗಿ ತೀರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ ಅವರು, ಮರದ ವ್ಯಾಪಾರಿಗಳು ಸಿಲ್ವರ್‌ ಮರಗಳನ್ನು ಟನೇಜ್‌ ಲೆಕ್ಕದಲ್ಲಿ ಖರೀದಿಸುತ್ತಿದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿಯಾಗುತ್ತಿದೆ. ಇದನ್ನು ತಡೆಯಲು ರೈಲ್ವೇ ಕಂಬಿಗಳ ತಡೆಗೋಡೆ ನಿರ್ಮಾಣ, ಕಾಡಾನೆಗಳಿಗೆ ರೆಡಿಯೋ ಕಾಲರ್‌ ಅಳವಡಿಸುವುದು, ಸೋಲಾರ್‌ ಬೇಲಿ ನಿರ್ಮಾಣ, ಕಾಡಾನೆ ದಾಳಿಯಿಂದ ಮೃತಪಟ್ಟಬೆಳೆಗಾರರಿಗೆ 10 ಲಕ್ಷ ರು.ಪರಿಹಾರ ನೀಡಬೇಕು ಎಂದು ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮನವಿ ಮಾಡಿದ್ದೇವೆ ಎಂದು ತೀರ್ಥಮಲ್ಲೇಶ್‌ ಹೇಳಿದರು.

ಕಾಳು ಮೆಣಸು:  ಹವಾಮಾನ ವೈಪರಿತ್ಯದಿಂದ ಕೀಟಬಾಧೆ ಹೆಚ್ಚಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯಬೇಕು. ಆಮದಾಗುವ ಕಾಳು ಮೆಣಸಿನ ಮೇಲೆ ಕನಿಷ್ಠ ಆಮದು ಶುಲ್ಕ ವಿಧಿಸಬೇಕು. ಕೇಂದ್ರ ಸರ್ಕಾರದ ಟಾಸ್ಕ್‌ಫೋರ್ಸ್‌ ಸಮಿತಿಯು ಶೀಘ್ರದಲ್ಲಿ ಅತಿವೃಷ್ಟಿಯ ಹಾನಿ ವರದಿ ನೀಡಬೇಕು. ಕೃಷಿ ಸಲಕರಣೆಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಬೇಕು. ಭೂಕಬಳಿಕೆ ನ್ಯಾಯಾಲಯದಿಂದ ರೈತರನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ 41ಜನ ಅತಿವೃಷ್ಟಿಸಂತ್ರಸ್ತ ಕಾಫಿ ಬೆಳೆಗಾರರಿಗೆ 41 ಲಕ್ಷ ರು. ಸಹಾಯಧನ ನೀಡಲಾಗಿದೆ. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತ ಕುಟುಂಬಗಳಿಗೆ ತಲಾ 10 ಸಾವಿರ ರು. ಸಹಾಯ ಮಾಡಲಾಗಿದೆ. ಒಕ್ಕೂಟವು ಕಾಫಿ ಪ್ಲಡ್ಜ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಲು ಉದ್ದೇಶಿಸಿದೆ ಹಾಗೂ ಕಾಫಿ ತೋಟದಲ್ಲಿ ಕಾರ್ಮಿಕರು ಕನಿಷ್ಠ 8ಗಂಟೆ ದುಡಿಯುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರುಳೀಧರ ಎಸ್‌. ಬಕ್ಕರವಳ್ಳಿ, ಮಾಜಿ ಅಧ್ಯಕ್ಷ ಜೈರಾಮ್‌, ವಿಜಯ್‌, ರೇವಣ್ಣಗೌಡ, ಲಿಂಗಪ್ಪಗೌಡ, ಸುರೇಶ್‌ ಮತ್ತಿತರರು ಹಾಜರಿದ್ದರು.