ರಾಜ್ಯ ಸರ್ಕಾರ ಕೆಲವು ನಿಬಂಧನೆಗಳೊಂದಿಗೆ ಅಂತರಾಜ್ಯ ಹಾಗೂ ಜಿಲ್ಲಾ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅನುಮತಿ ನೀಡಿದೆ.  ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಲು ಈವರೆಗೆ ಆನ್‌ಲೈನ್‌ ಮೂಲಕ 291 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಚಿಕ್ಕಮಗಳೂರು(ಮೇ.05): ಅಂತಾರಾಜ್ಯ ಹಾಗೂ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಲು ಕೆಲವು ನಿಬಂಧನೆಗಳ ಸಹಿತ ರಾಜ್ಯ ಸರ್ಕಾರ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಲು ಈವರೆಗೆ ಆನ್‌ಲೈನ್‌ ಮೂಲಕ 291 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೊರ ಜಿಲ್ಲೆಗಳಿಗೆ ಹೋಗಲು 217 ಜನರಿಂದ ಜಿಲ್ಲಾಡಳಿತಕ್ಕೆ ಅರ್ಜಿಗಳು ಬಂದಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ಕರ್ತವ್ಯಕ್ಕೆ ಹಾಜರಾಗುವವರು ವಾಪಸ್‌ ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅವಕಾಶ ನೀಡಿದೆ. ಸಂಬಂಧಪಟ್ಟವರು ವೆಬ್‌ಸೈಟ್‌: Sevasindhu.karnataka.gov.in

ನಲ್ಲಿ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಜಿಲ್ಲಾಡಳಿತಕ್ಕೆ ಆನ್‌ಲೈನ್‌ ಮೂಲಕ ಬರುವ ಅರ್ಜಿಯನ್ನು ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಪ್ರಯಾಣಿಕರು ಹೋಗಬೇಕಾಗಿರುವ ರಾಜ್ಯಗಳಿಂದ ಕಳುಹಿಸಲಾಗುವುದು. ಅವರು ಅಲ್ಲಿಂದ ಸಂಬಂಧಿತ ಜಿಲ್ಲೆಗಳ ನೋಡಲ್‌ ಅಧಿಕಾರಿಗಳಿಗೆ ಕಳುಹಿಸಲಿದ್ದಾರೆ. ಹೀಗೆ ಸಲ್ಲಿಸಿದ ಅರ್ಜಿಯ ಮಾಹಿತಿಯನ್ನು ಅರ್ಜಿದಾರರ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುವುದು ಎಂದು ಹೇಳಿದರು.

ಒನ್‌ ವೇ:

ಲಾಕ್‌ಡೌನ್‌ ಹಿಂದಿನ ದಿನ ಜಿಲ್ಲೆಗೆ ಬಂದು ಸಿಲುಕಿರುವ ವಿದ್ಯಾರ್ಥಿಗಳು, ಪ್ರವಾಸಿಗರು, ಕಾರ್ಮಿಕರು, ಯಾತ್ರಾರ್ಥಿಗಳು ಮರಳು ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಅಂದರೆ, ಒನ್‌ ವೇ, ಒನ್‌ ಟೈಂ, ಒನ್‌ ಡೇ ಪಾಸ್‌ಗಳನ್ನು ತೆಗೆದುಕೊಂಡು ಹೋಗಬಹುದು. ಇದಕ್ಕಾಗಿ ಸಂಬಂಧಿತ ತಹಸೀಲ್ದಾರ್‌ಗಳಿಗೆ ಪೂರಕ ದಾಖಲೆಗಳನ್ನು ನೀಡಿ, ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ಒನ್‌ ವೇ ಪಾಸ್‌ ನೀಡಲಾಗುವುದು. ಈ ಪಾಸ್‌ ಪಡೆದವರು ಪುನಃ ಜಿಲ್ಲೆಗೆ ವಾಪಸ್‌ ಬರಲು ಆಗುವುದಿಲ್ಲ ಎಂದು ಹೇಳಿದರು.

ಗ್ರೀನ್‌ ಟು ಗ್ರೀನ್‌:

ಹಸಿರು ವಲಯದಿಂದ ಮತ್ತೊಂದು ಹಸಿರು ವಲಯ ಜಿಲ್ಲೆಗಳಿಗೆ ತೆರಳಲು ಸರ್ಕಾರ ಅವಕಾಶ ನೀಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಅಗತ್ಯ ಸೇವೆಯ ಕೆಲಸಗಳಿಗೆ ತೆರಳುವವರಿಗೆ ಮಾತ್ರ ಈ ಪಾಸ್‌ ನೀಡಲಾಗುವುದು. ಪಾಸ್‌ ತೆಗೆದುಕೊಳ್ಳುವವರು ಸಂಜೆ 7 ಗಂಟೆಯೊಳಗೆ ಊರುಗಳಿಗೆ ವಾಪಸ್‌ ಬಂದಿರಬೇಕು. ಇದು, ಟು ವೇ ಪಾಸ್‌. ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಅಥವಾ ಸಂಬಂಧಿತ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಅಗತ್ಯ ದಾಖಲೆ ನೀಡಿ ಪಾಸ್‌ ಪಡೆದುಕೊಳ್ಳಬಹುದು. ಉದಾಹರಣೆಗೆ ನಗರದಿಂದ ಪಕ್ಕದ ಜಿಲ್ಲೆಯ ಬೇಲೂರಿಗೆ ಹೋಗಲು ಮತ್ತು ತರೀಕೆರೆಯಿಂದ ಶಿವಮೊಗ್ಗಕ್ಕೆ ಅಗತ್ಯ ಕೆಲಸಕ್ಕೆ ಹೋಗಿಬರಲು ಅವಕಾಶ ಇದೆ ಎಂದರು.

ಎರಡನೆಯದಾಗಿ ಮಾನವೀಯತೆ ದೃಷ್ಟಿಯಿಂದ ಬೇರೆ ಜಿಲ್ಲೆಗೆ ಹೋಗಲು ಅನುಮತಿ ನೀಡಲಾಗುವುದು. ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಕಿಡ್ನಿ ಡಯಾಲಿಸಿಸ್‌, ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ, ಯಾರಾದರೂ ಸಂಬಂಧಿಕರು ಮೃತಪಟ್ಟಿದ್ದರೆ, ಮದುವೆ ಕಾರ್ಯಕ್ಕೆ ಹೋಗಲು ಪಾಸ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಹಳದಿ ವಲಯದಿಂದ ಬಂದವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಬೇರೆಡೆಗೆ ತೆರಳಲು ಅತ್ಯುತ್ಸಾಹಕತೆ ಬೇಡ. ಈ ಜಿಲ್ಲೆಗೆ ಕೊರೋನಾ ಸೋಂಕು ತಗುಲಬಾರದು ಎನ್ನುವ ದೃಷ್ಟಿಯಿಂದ ನಡೆದುಕೊಳ್ಳುವುದು ಮುಖ್ಯವಾಗಿದೆ. ಲಾಕ್‌ಡೌನ್‌ ಇನ್ನೂ ಇದೆ. ಸ್ವಲ್ಪ ಸಡಿಲಿಕೆಯಾಗಿದೆ ಅಷ್ಟೇ ಎಂದು ಜಿಲ್ಲಾಧಿಕಾರಿ ಹೇಳಿದರು.