Asianet Suvarna News Asianet Suvarna News

Chikkamagaluru: ಶಾಸಕ ರಾಜೇಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಕೂಲಿ ಕಾರ್ಮಿಕ ಮಹಿಳೆ

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಅಕ್ರಮ ಆಸ್ತಿ ಖರೀದಿಯ ಹಗರಣ ಬೆನ್ನಿಗೆ ಬಿದ್ದು ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗುತ್ತಿದೆ. ಈಗ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ತಮ್ಮ ಮೇಲೆ ಮರ ಬಿದ್ದರೂ ಚಿಕಿತ್ಸೆ ಕೊಡದೇ ವಂಚನೆ ಮಾಡಿರುವ ಬಗ್ಗೆ ಶಾಸಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

A woman laborer filed a fraud case against MLA Rajegowda
Author
First Published Dec 1, 2022, 6:28 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.1):  ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿದ್ದು, ಅಕ್ರಮ ಆಸ್ತಿಗಳಿಕೆ ಆರೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಈಗ ರಾಜೇಗೌಡರ ವಿರುದ್ಧ ಕೂಲಿ ಕಾರ್ಮಿಕ ಮಹಿಳೆ ತಮಗೆ ಶಾಸಕರು ಮತ್ತು ಅವರ ಸಂಬಂಧಿಕರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು, ಶಾಸಕ ರಾಜೇಗೌಡ ಹಾಗೂ ಅವರ ಸಂಬಂಧಿ ಎಸ್ಟೇಟ್ ಮ್ಯಾನೇಜರ್ ವಿರುದ್ಧ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ತಮಗೆ ಶಾಸಕರಿಂದ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ ವೀಡಿಯೋ ಸದ್ಯ ವೈರಲ್ ಆಗಿದೆ. ಶಾಸಕರ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಮಹಿಳೆ ಗಂಭೀರ ಗಾಯಗೊಂಡಿದ್ದರು. ಆದರೆ, ಈ ಬಗ್ಗೆ ಯಾರಿಗೂ ತಿಳಿಸಬೇಡ, ಸರ್ಕಾರದ ಸೌಲಭ್ಯ ಕೊಡಿಸುತ್ತೇನೆ ಎಂದು ಹೇಳಿ ಶಾಸಕರು ಯಾವುದೇ ನೆರವು ನೀಡಿಲ್ಲ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.

ಶಾಸಕ ರಾಜೇಗೌಡರ ರಾಜಕೀಯಕ್ಕೆ ಮುಳ್ಳಾದ ಶಬಾನಾ ರಂಜಾನ್‌ ಟ್ರಸ್ಟ್

4 ತಿಂಗಳ ಬಳಿಕ ಠಾಣೆಯಲ್ಲಿ ದೂರು: ಕಳೆದ ಜುಲೈನಲ್ಲಿ ಶಾಸಕರ ತೋಟದಲ್ಲಿ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎನ್.ಆರ್.ಪುರ ತಾಲೂಕಿನ ಬಾಸಾಪುರ ಗ್ರಾಮದ ಶೋಭಾ ಎಂಬುವವರು ಈಗ ದೂರು ದಾಖಲಿಸಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೊಂಚ ಚೇತರಿಸಿಕೊಂಡು, 4 ತಿಂಗಳ ಬಳಿಕ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಶಾಸಕ ಟಿ.ಡಿ ರಾಜೇಗೌಡ ಮತ್ತು ಅವರ ಸಂಬಂಧಿ ಯುವರಾಜಗೌಡರ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಗಾಯಗೊಂಡಿದ್ದೆ. ಈ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಬಾರದು. ಈ ಗಾಯ ಬೇರೆ ಕಡೆಗೆ ಆಗಿದೆಯೆಂದು ಪೊಲೀಸರ ಮುಂದೆ ಹೇಳಬೇಕು ಎಂದು ತಿಳಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 

ಬೇರೆಡೆ ಬಿದ್ದಿರುವುದಾಗಿ ಸುಳ್ಳು ಹೇಳಿಸಿದ್ದರು:  ಕಾಲಿಗೆ ಗಂಭೀರ ಗಾಯಗಳಾಗಿದ್ದರಿಂದ ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ಹೇಳಿ ಶಿವಮೊಗ್ಗದ ಗುತ್ತಿ ಮಲೆನಾಡ್ ಆಸ್ಪತ್ರೆಗೆ ತೋಟದ ಮಾಲೀಕರು ಚಿಕಿತ್ಸೆಗೆ ಸೇರ್ಪಡೆ ಮಾಡಿದ್ದರು. ಬಳಿಕ ಹೆಚ್ಚುವರಿ ಚಿಕಿತ್ಸೆಗೆ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ತೋಟದ ಮ್ಯಾನೇಜರ್ ಬಂದು, ನೀವು ಹೊರಗಡೆ ಬಿದ್ದು ಗಾಯಗೊಂಡಿರುವುದು ಎಂದು ಹೇಳಿ ಪೊಲೀಸರಿಗೆ ದೂರು ಕೊಡಿ, ನಿಮ್ಮ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳುವ ಜತೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳಿ ಹೋಗಿದ್ದರು. ಬಳಿಕ ಯಾವುದೇ ನೆರವು ಸಿಕ್ಕಿಲ್ಲ, ಯಾರೂ ಬಂದು ವಿಚಾರಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಬಿಜೆಪಿ ಜನಸಂಕಲ್ಪ ಯಾತ್ರೆ ನನ್ನನ್ನು ಟಾರ್ಗೆಟ್‌ ಮಾಡಿದ ಯಾತ್ರೆಯಾಗಿತ್ತು: ಶಾಸಕ ರಾಜೇಗೌಡ ಆರೋಪ

ಚಿಕಿತ್ಸೆಗೆ ಹಣದ ಅಗತ್ಯವಿದೆ: ಎನ್.ಆರ್.ಪುರ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಸ್ವಂತ ಖರ್ಚಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ. ಬಳಿಕ ಮಾಲೀಕ ಯುವರಾಜಗೌಡನ ಬಳಿ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಾಗ, ನಮ್ಮ ಬಳಿ ಹಣ ಇಲ್ಲ. ನೀವೇ ಏನಾದರೂ ಮಾಡಿಕೊಳ್ಳಿ ಎಂದು ಕೈಬಿಟ್ಟಿದ್ದಾರೆ. ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇರುವುದರಿಂದ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮಹಿಳೆ ಬಾಳೆಹೊನ್ನೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios