ಕನ್ನಡದಲ್ಲಿಲ್ಲದ ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಯೇ ರದ್ದು..!
ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿದ್ದೇವೆ. ಕನ್ನಡದಲ್ಲಿ ಪರೀಕ್ಷೆ ಬಗ್ಗೆ ಸುತ್ತೋಲೆ ಹೊರಡಿಸಲಿದ್ದೇವೆ ಎಂದು ತಿಳಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಬೆಂಗಳೂರು(ಆ.04): ನೈಋತ್ಯ ರೈಲ್ವೆ ಸಹಾಯಕ ಲೋಕೋ ಪೈಲಟ್ ಹುದ್ದೆ ಬಡ್ತಿಗಾಗಿ ಸಾಮಾನ್ಯ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಯನ್ನು (ಜಿಡಿಸಿಇ) ಇಂಗ್ಲಿಷ್/ಹಿಂದಿ ಭಾಷೆಯ ಜೊತೆಗೆ ಕನ್ನಡದಲ್ಲೂ ಬರೆಯಲು ಅವಕಾಶ ನೀಡುವಂತೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ರಾಜ್ಯಖಾತೆ ಸಚಿವ ವಿ. ಸೋಮಣ್ಣ ಸೂಚಿಸಿದ್ದು, ಇನ್ನೆರಡು ದಿನದಲ್ಲಿ ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.
'ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕೊಟ್ಟು ಕಿತ್ತುಕೊಂಡ ರೈಲ್ವೇ ಇಲಾಖೆ' ಶೀರ್ಷಿಕೆಯಡಿ 'ಕನ್ನಡಪ್ರಭ' ಆ.2ರಂದು ವರದಿಯನ್ನು ಪ್ರಕಟಿಸಿತ್ತು. ಪರೀಕ್ಷೆ ಸುತ್ತೋಲೆ ಹೊರಡಿಸುವಾಗ ಕನ್ನಡಕ್ಕೆ ಅವಕಾಶ ನೀಡಿ ಬಳಿಕ ಹಾಲ್ ಟಿಕೆಟ್‌ನಲ್ಲಿ ಹಿಂದಿ/ಇಂಗ್ಲಿಷ್ ಗೆಮಾತ್ರ ಅವಕಾಶ ನೀಡಿರುವ ಬಗ್ಗೆ ವಿವರಿಸಲಾಗಿತ್ತು.
ಕನ್ನಡದಲ್ಲಿ ಪರೀಕ್ಷೆ ಬರೆವ ಅವಕಾಶ ಕೊಟ್ಟು ಕಿತ್ಕೊಂಡ ರೈಲ್ವೆ ಇಲಾಖೆ..!
ಈ ಸಂಬಂಧ ರೈಲ್ವೇ ನೌಕರರ ವಿವಿಧ ಸಂಘಟನೆಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದವು. ಜೊತೆಗೆ ನೈಋತ್ಯ ರೈಲ್ವೇ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಪರಿಣಾಮ, ಶನಿವಾರ (ಆ.3) ನಡೆಯಬೇಕಿದ್ದ ಪರೀಕ್ಷೆಯನ್ನು ನೈಋತ್ಯ ರೈಲ್ವೆ ರದ್ದುಪಡಿಸಿ, ಮುಂದೂಡಿತು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, 'ಈಗಾಗಲೇ ಪರೀಕ್ಷೆ ಮುಂದೂಡಲಾಗಿದೆ. ಪ್ರಸ್ತುತ ಜಿಡಿಸಿಇ ಮಾತ್ರವಲ್ಲದೆ ರಾಜ್ಯದಲ್ಲಿ ನಡೆಯುವ ಸೀಮಿತ ವಿಭಾಗೀಯ ಸ್ಪರ್ಧಾತ್ಮಕಪರೀಕ್ಷೆ (ಎಲ್‌ಡಿಸಿಇ) ಸೇರಿ ಎಲ್ಲ ರೈಲ್ವೆ ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗುವುದು. ಈ ಸಂಬಂಧ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರ ಜೊತೆಗೆ ಮಾತನಾಡಿದ್ದೇವೆ. ನಮ್ಮನ್ನು ನಂಬಿ, ಸಂಶಯ ಬೇಡ' ಎಂದು ಹೇಳಿದರು
ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿದ್ದೇವೆ. ಕನ್ನಡದಲ್ಲಿ ಪರೀಕ್ಷೆ ಬಗ್ಗೆ ಸುತ್ತೋಲೆ ಹೊರಡಿಸಲಿದ್ದೇವೆ ಎಂದು ತಿಳಿಸಿದರು.
ಕನ್ನಡಪ್ರಭ ವಿಶೇಷ ವರದಿ ಫಲಶ್ರುತಿ
ಪರೀಕ್ಷೆ ಸುತ್ತೋಲೆ ಹೊರಡಿಸುವಾಗ ಕನ್ನಡಕ್ಕೆ ಅವಕಾಶ ನೀಡಿ ಬಳಿಕ ಹಾಲ್ ಟಿಕೆಟ್‌ನಲ್ಲಿ ಹಿಂದಿ/ಇಂಗ್ಲಿಷ್ ಗೆ ಮಾತ್ರ ಅವಕಾಶ ನೀಡಿದ್ದ ರೈಲ್ವೆ ಕ್ರಮದ ಬಗ್ಗೆ 'ಕನ್ನಡಪ್ರಭ' ಆ.2ರಂದು ವಿಶೇಷ ವರದಿ ಪ್ರಕಟಿಸಿತ್ತು.