ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟಪ್ ಕಂಪನಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ಆಧರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ದೇಶದ ಸಂಚಾರಿ ವ್ಯವಸ್ಥೆಗೆ ಅನುಗುಣವಾಗಿ ಈ ಕಾರು ಓಡುವುದು ವಿಶೇಷ.
ಬೆಂಗಳೂರು (ಮೇ.22): ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟಪ್ ಕಂಪನಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ಆಧರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ದೇಶದ ಸಂಚಾರಿ ವ್ಯವಸ್ಥೆಗೆ ಅನುಗುಣವಾಗಿ ಈ ಕಾರು ಓಡುವುದು ವಿಶೇಷ. ಹೌದು! ಇಷ್ಟು ದಿನ ಕೇವಲ ಎಲಾನ್ ಮಸ್ಕರ ಟೆಸ್ಲಾ ಡ್ರೈವರ್ಸ್ ಕಾರಿನ ವಿಡಿಯೋ ನೋಡುವುದೇ ಆಗಿತ್ತು. ಆದರೆ, ಈಗ ನಮ್ಮ ರಾಜ್ಯದಲ್ಲಿ ಇಂಥದ್ದೊಂದು ಆಟೋಪೈಲೆಟ್ ಕಾರು ಸಿದ್ಧವಾಗಿದ್ದು, ಬೆಂಗಳೂರಿನ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಿರುವುದಾಗಿ ಕಂಪನಿ ತನ್ನ 'ಎಕ್ಸ್' ಖಾತೆಯಲ್ಲಿತಿಳಿಸಿದೆ. ಇದು ಭಾರತದಲ್ಲೇ ಪ್ರಥಮ ಬಾರಿ ಎಂದು ಕಂಪೆನಿ ಹೇಳಿಕೊಂಡಿದೆ.
ಮಾರ್ಕ್ ಇರದ ರಸ್ತೆಯಲ್ಲೂ ಸಂಚಾರ: ಈ ಕಾರು ಒನ್‌ವೇಯಲ್ಲಿ ಎದುರಾಗುವ ವಾಹನ ಗಳನ್ನು ಸಲೀಸಾಗಿ ಗುರುತಿಸುತ್ತದೆ. ಎದುರಿನವರು ಏಕಾಏಕಿ ಬ್ರೇಕ್ ಹಾಕಿದಾಗ ಅದನ್ನು ರಿಯಲ್ ಟೈಮ್‌ನಲ್ಲಿ ಗಮನಿಸಿ ತಾನೂ ನಿಂತು ಸಾಗುತ್ತದೆ. ಅಕ್ಕಪಕ್ಕ, ಹಿಂದೆ ಮುಂದೆ ಬರುವ ಕಾರಿರಲಿ, ಬೈಕಿರಲಿ, ಪಾದಚಾರಿಗಳಿರಲಿ ಎಲ್ಲವನ್ನು ತಕ್ಷಣ ಗುರುತಿಸಿಕೊಂಡು ಅದಕ್ಕೆ ಅನುಗುಣವಾಗಿ ಚಾಲನೆ ಆಗುವ ಸಾಮರ್ಥ್ಯ ಹೊಂದಿದೆ ಎಂದು ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ನೀಡಿದೆ.
ಅದರಲ್ಲೂ ವಿಶೇಷವಾಗಿ ದುಬಾರಿ ಅಲ್ಲೊರಿದಂ, ಸೆನ್ಸಾರ್‌ಗಳನ್ನು ಬಳಸಿಕೊಳ್ಳದೆ ಈಗಿರುವ ಸಾಂಪ್ರದಾಯಿಕ ಎಐ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಎಐ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಜತೆಗೆ ಲಭ್ಯವಿರುವ ಡೇಟಾ ಅಥವಾ ಹೈ-ಡೆಫಿನೆಷನ್ ನಕ್ಷೆಗಳಿಲ್ಲದೆ ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅಳವಡಿಸಿದೆ. ಈ ಹಿಂದೆ ಮೈನಸ್ ಝೀರೊ ಕಂಪನಿ ಕ್ಯಾಂಪಸ್ ಒಳಗಡೆ ಆಟೋಪೈಲಟ್ ಕಾರಿನ ಪ್ರಾಯೋಗಿಕ ಸಂಚಾರ ನಡೆಸಿತ್ತು. ಭಾರತದಲ್ಲಿ ಸದ್ಯ ಎಡಿಎಸ್ (ಅಡ್ವಾನ್‌ಸ್‌ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಎಲ್1, ಎಲ್2 ಹಂತದಲ್ಲಿದೆ. ಈ ಸಂದರ್ಭದಲ್ಲಿ ಕಂಪನಿ ಮುಂದುವರಿದು ಎಲ್2+, ಎಲ್2++ ಮತ್ತು ಎಲ್3 ತಂತ್ರಜ್ಞಾನದತ್ತ ಮುಂದುವರಿಯುವ ಗುರಿಯೊಂದಿಗೆ ಸಾಗುತ್ತಿದ್ದೇವೆ ಮೈನಸ್ ಝೀರೊ ತಿಳಿಸಿದೆ.
ಕದಂಬ ನೌಕಾನೆಲೆಯಲ್ಲಿ 5ನೇ ಶತಮಾನ ಮಾದರಿಯ ಕೌಂಡಿನ್ಯ ಹಡಗು ಲೋಕಾರ್ಪಣೆ
ಅಪಘಾತ ತಡೆ: ಜಾಗತಿಕವಾಗಿ ಟೆಸ್ಲಾದ ಪೂರ್ಣಪ್ರಮಾಣದ ಸ್ವಯಂಚಾಲಿತ ಕಾರು, ಮರ್ಸಿಡಿಸ್ ಡ್ರೈವ್ ಪೈಲಟ್, ಜಿಎಂ ಸೂಪರ್ ಕ್ರೂಸ್‌ಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರಸ್ತೆ ಗಿಳಿದಿವೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಇವು ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ, ನಮ್ಮಲ್ಲೇ ಹೆಚ್ಚಿನಮಟ್ಟದ ಅಪಘಾತಗಳು ಸಂಭವಿಸುತ್ತವೆ. ಇಂತಹ ಅಪಘಾತಗಳನ್ನೂ ಸ್ವಯಂಚಾಲಿತ ಕಾರುಗಳು ತಡೆಯಬಲ್ಲವು. ಮೈನಸ್ ಝಿರೋ ಅಭಿವೃದ್ಧಿಪಡಿಸಿದ ಈ ಕಾರು ಸದ್ಯ ಸುರಕ್ಷತಾ ವಿಚಾರವಾಗಿ ಇನ್ನಷ್ಟು ಪ್ರಾಯೋಗಿಕ ಪರೀಕ್ಷೆಗೆ ಒಳಪಡುತ್ತಿದೆ.