ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್!
- ಕ್ರಾಶ್ ಟೆಸ್ಟ್‌ನಲ್ಲಿ ಟಾಟಾದ ಮತ್ತೊಂದು ಕಾರಿಗೆ 5 ಸ್ಟಾರ್
- ಅತ್ಯಂತ ಸುರಕ್ಷತೆ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಂಚ್
- ಮೈಕ್ರೋ SUV ಸೆಗ್ಮೆಂಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ ಟಾಟಾ ಪಂಚ್
ಮುಂಬೈ(ಅ.14): ಕೈಗೆಟುಕವ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ಒದಗಿಸುವ ಕಾರುಗಳ ಪೈಕಿ ಟಾಟಾ ಕಾರುಗಳಿಗೆ ಮೊದಲ ಸ್ಥಾನ. ಈಗಾಗಲೇ ಟಾಟಾ ಬಿಡುಗಡೆ ಮಾಡಿದ ಎಲ್ಲಾ ಹೊಸ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿದೆ. ಇದೀಗ ಟಾಟಾದ ಮೈಕ್ರೋ SUV ಕಾರು ಟಾಟಾ ಪಂಚ್ ಇದೀಗ ಅತ್ಯಂತ ಸುರಕ್ಷತೆ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಪಂಚ್ ಗ್ಲೋಬಲ್ ಕ್ರಾಶ್ ಟೆಸ್ಟ್ ಸಂಸ್ಥೆಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.
ಟಾಟಾ ಪಂಚ್ ಕಾರು ಹೇಗಿದೆ? ಏಷ್ಯಾನೆಟ್ ಸುವರ್ಣನ್ಯೂಸ್ ಟೆಸ್ಟ್ ಡ್ರೈವ್ Review!
ಟಾಟಾ ಮೋಟಾರ್ಸ್ ಈಗಾಗಲೇ ಪಂಚ್ ಕಾರು ಅನಾವರಣ ಮಾಡಿದೆ. ಶೀಘ್ರದಲ್ಲೇ ಕಾರು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ಗ್ಲೋಬಲ್ NCPಯಿಂದ ಕ್ರಾಶ್ ಟೆಸ್ಟ್ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಟಾಟಾ ಪಂಚ್ ಗರಿಷ್ಠ ಸುರಕ್ಷತೆ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಮೂಲಕ ಮೈಕ್ರೋ SUV ಸೆಗ್ಮೆಂಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರು ಅನ್ನೋ ಕೀರ್ತಿಗೂ ಪಾತ್ರವಾಗಿದೆ.
ಟಾಟಾ ಕಾರುಗಳೆಂದರೆ ಸುರಕ್ಷತೆ. ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್, ಟಾಟಾ ಹೆಕ್ಸಾ, ಟಾಟಾ ಟಿಗೋರ್, ಟಾಟಾ ಟಿಯಾಗೋ , ಟಾಟಾ ಅಲ್ಟ್ರೋಜ್ ಕಾರುಗಳ ಗರಿಷ್ಠ ಸುರಕ್ಷತೆ ರೇಟಿಂಗ್ ಪಡೆದ ಕಾರುಗಳಾಗಿವೆ. ಇದೀಗ ಈ ಪರಂಪರೆ ಮುಂದುವರಿದಿದೆ. ಟಾಟಾ ಪಂಚ್ ಕೂಡ ಟಾಪ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.
ವಯಸ್ಕರ ಪ್ರಯಾಣ ಸುರಕ್ಷತೆ ರೇಟಿಂಗ್‌ನಲ್ಲಿ 17 ಅಂಕದಲ್ಲಿ ಟಾಟಾ ಪಂಚ್ 16.45 ಅಂಕ ಪಡೆದುಕೊಂಡಿದೆ. ಇನ್ನು ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 49.00 ಅಂಕದಲ್ಲಿ 40.89 ಅಂಕ ಸಂಪಾದಿಸಿದೆ. ಈ ಮೂಲಕ ಮಕ್ಕಳ ಸೇಫ್ಟಿಯಲ್ಲಿ 4 ಸ್ಟಾರ್ ಪಡೆದಿದೆ. ಮಕ್ಕಳ ಸೇಫ್ಟಿಯಲ್ಲಿ 4 ಸ್ಟಾರ್ ಪಡೆದ ಮತ್ತೊಂದು ಕಾರು ಮಹೀಂದ್ರ XUV 300.
ಟಾಟಾ ಕಂಪನಿಯ ಮುಂದಿನ ಸ್ಟಾರ್ ಟಾಟಾ ಪಂಚ್!
ಟಾಟಾ ಪಂಚ್ ಕಾರು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ. 2.0 ಅಲ್ಫಾ ಆರ್ಕಿಟೆಕ್ಟ್ ಅಡಿ ನೂತನ ಕಾರು ನಿರ್ಮಾಣ ಮಾಡಲಾಗಿದೆ. ಇದೇ ಆರ್ಕಿಟೆಕ್ಟ್ ಅಡಿ ಟಾಟಾ ಅಲ್ಟ್ರೋಜ್ ಕಾರು ವಿನ್ಯಾಸ ಮಾಡಲಾಗಿದೆ. ಟಾಟಾ ಪಂಚ್ ಕಾರು ಮಹೀಂದ್ರ KUV100, ಹ್ಯುಂಡೈ ನಿಯೋಸ್, ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಆದರೆ ಪಂಚ್ ಕಾರು ನೋಟದಲ್ಲಿ ಗಾತ್ರದಲ್ಲಿ ಹಾಗೂ ಒಳಗಿರುವ ಸ್ಥಳಾವಕಾಶದಲ್ಲಿ ನಿಸಾನ್ ಮ್ಯಾಗ್ನೈಟ್ ರೆನಾಲ್ಟ್ ಕಿಗರ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
ಟಾಟಾ ಪಂಚ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಮಾತ್ರ ಲಭ್ಯವಿದೆ. ಡೀಸೆಲ್ ಹಾಗೂ ಎಲೆಕ್ಟ್ರಿಕ್ ಕಾರು ಬೇಡಿಕೆಗೆ ತಕ್ಕಂತೆ ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ. 1.2 ಲೀಟರ್ ರಿವೊಟ್ರೊನ್ 3 ಸಿಲಿಂಡರ್ ಎಂಜಿನ್ ಹೊಂದಿದೆ. ಡೈನಾಪ್ರೋ ಟೆಕ್ನಾಲಜಿ ಹೊಂದಿರುವ ಟಾಟಾ ಪಂಚ್ ಕಾರು ಹೈವೇ, ಆಫ್ ರೋಡ್ ಹಾಗೂ ಸಿಟಿ ಲೈಫ್‌ಗೂ ಹೇಳಿಮಾಡಿಸಿದ ಕಾರು.