ರಿವರ್ಸ್ ವೇಳೆ ಪಾರ್ಕಿಂಗ್ ಏರಿಯಾದ ಮೊದಲನೇ ಮಹಡಿಯಿಂದ ಬಿದ್ದ ಕಾರು: ವೀಡಿಯೋ ವೈರಲ್
ಪಾರ್ಕಿಂಗ್ ಸ್ಥಳದಲ್ಲಿ ಚಾಲಕನೋರ್ವ ವಾಹನವನ್ನು ತಿರುಗಿಸುವ ವೇಳೆ ಕಾರೊಂದು ಮೊದಲನೇ ಮಹಡಿಯಿಂದ ಕೆಳಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದೆ.

ನಗರಗಳಲ್ಲಿ ವಾಹನ ನಿಲುಗಡೆಗೆ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಮಾಡಿರುವುದನ್ನು ನೀವು ನೋಡಿರಬಹುದು. ಹೀಗೆ ಪಾರ್ಕಿಂಗ್ ಮಾಡಿದ್ದ ಪಾರ್ಕಿಂಗ್ ಸ್ಥಳದಲ್ಲಿ ಚಾಲಕನೋರ್ವ ವಾಹನವನ್ನು ತಿರುಗಿಸುವ ವೇಳೆ ಕಾರೊಂದು ಮೊದಲನೇ ಮಹಡಿಯಿಂದ ಕೆಳಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಣೆಯ ವಿಮಾನನಗರದ ಬಳಿಯ ಶುಭಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಅಲ್ಲಿದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ನಂತರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡಿದೆ. ಚಾಲಕ ಆಕಸ್ಮಿಕವಾಗಿ ರಿವರ್ಸ್ ಗೇರ್ ಚಲಾಯಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಾರ್ಕಿಂಗ್ ಸ್ಥಳದ ತಡೆಗೋಡೆಗೆ ಬಡಿದು ಸೀದಾ ಕೆಳಗೆ ಬಿದ್ದಿದೆ.
ಈ ವೇಳೆ ಜೋರಾಗಿ ಸದ್ದು ಕೇಳಿ ಬಂದಿದ್ದು, ಸುತ್ತಮುತ್ತಲಿದ್ದ ಜನ ಸ್ಥಳಕ್ಕೆ ಓಡಿ ಬಂದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪಾರ್ಕಿಂಗ್ ಸ್ಥಳದ ಕಟ್ಟಡ ಹಾಗೂ ಗೋಡೆಗಳ ಕಳಪೆ ಗುಣಮಟ್ಟ ಬೆಳಕಿಗೆ ಬಂದಿದ್ದು, ಅನೇಕರು ಕಟ್ಟಡ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಘಟನೆಯಲ್ಲಿ ಕಾರು ಚಾಲಕನಿಗೆ ಯಾವುದೇ ಹಾನಿಯಾಗಿಲ್ಲ, ಕಪ್ಪು ಬಣ್ಣದ ಕಾರಿನ ಚಾಲಕ ತಮ್ಮ ಪಾರ್ಕಿಂಗ್ ಸ್ಥಳವನ್ನು ತಪ್ಪಾಗಿ ಲೆಕ್ಕ ಹಾಕಿರಬಹುದು, ಅದು ಘಟನೆಗೆ ಕಾರಣವಾಗಿರಬಹುದು. ಕಾರಿನ ಬಲವಾದ ಹೊಡೆತ ಗೋಡೆ ಕುಸಿದು ಬಿದ್ದು ಕಾರು ಕೆಳಗೆ ಬೀಳಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ @AshTheWiz (Ashok Bijalwan) ಎಂಬುವವರು ಕಾರನ್ನು ಜೇಮ್ಸ್ ಬಾಂಡ್ ರೀತಿ ಚಾಲನೆ ಹಾಗೂ ಪಾರ್ಕಿಂಗ್ ಮಾಡದಿರಿ ಎಂದು ಬರೆದಿದ್ದಾರೆ. ಜೊತೆಗೆ ಪುಣೆಯ ವಿಜ್ಞಾನ ನಗರದ ಶುಭ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ ಎಂದು ಬರೆದುಕೊಂಡಿದ್ದಾರೆ.