ಕೇಂದ್ರದ ನೀತಿಗೆ ಹೈರಾಣಾದ ಮಾರುತಿ ಸುಜುಕಿ, ಅಲ್ಟೋ ಸೇರಿ ಸಣ್ಣ ಕಾರು ಸ್ಥಗಿತಕ್ಕೆ ಚಿಂತನೆ!
- ಕಡಿಮೆ ಬೆಲೆಯ ಕಾರುಗಳ ಉತ್ಪಾದನೆ ಸಾಧ್ಯವಿಲ್ಲ ಎಂದ ಮಾರುತಿ
- ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಉತ್ಪಾದನೆ ವೆಚ್ಚ ಹೆಚ್ಚಳ
- ಕಡಿಮೆ ಬೆಲೆಯ ಹಾಗೂ ಸಣ್ಣ ಕಾರುಗಳಿಗೆ ಗುಡ್ ಬೈ ಚಿಂತನೆ
ನವದೆಹಲಿ(ಜೂ.29): ಭಾರತದಲ್ಲಿ ವಾಹನಗಳ ನೀತಿಗಳು ಕಠಿಣಗೊಳ್ಳುತ್ತಿದೆ. ಸುರಕ್ಷತೆಗೆ ಆದ್ಯತೆ ಹೆಚ್ಚಾಗಿದೆ. ಇದೀಗ ಕೇಂದ್ರ ಸರ್ಕಾರ ಪ್ರಯಾಣಿಕರ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯಗೊಳಿಸುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಮಾರುತಿ ಸುಜುಕಿ ಕಂಪನಿಗೆ ತೀವ್ರ ಹೊಡೆತ ನೀಡಿದೆ. ದೇಶದಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ನೀಡುತ್ತಿರುವ ಮಾರುತಿ ಸುಜುಕಿಗೆ ಹೊಸ ನೀತಿಯಿಂದ ಹಿನ್ನಡೆಯಾಗಲಿದೆ. ಹೀಗಾಗಿ ಆಲ್ಟೋ, ಸೆಲೆರಿಯೋ ಸೇರಿದಂತೆ ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಲು ಮಾರುತಿ ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ಈಗಾಗಲೇ ವಾಹನ ಸುರಕ್ಷತೆಗಾಗಿ ಹಲವು ಹೊಸ ನೀತಿಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಎಬಿಎಸ್ ಬ್ರೇಕ್, ರೇರ್ ಕ್ಯಾಮಾರ, ಸೀಟ್ ಬೆಲ್ಟ್ ಅಲರ್ಟ್, ಸ್ಪೀಡ್ ಅಲರಾಂ, ಡ್ಯುಯೆಲ್ ಏರ್‌ಬ್ಯಾಗ್ ಕಡ್ಡಾಯಗೊಳಿಸಲಾಗಿದೆ. ಇದರಿಂದ ಈಗಾಗಲೇ ಅಗ್ಗದ ಬೆಲೆಯ ಕಾರುಗಳ ದರ ಏರಿಕೆಯಾಗಿದೆ. ಇದೀಗ 6 ಏರ್‌ಬ್ಯಾಗ್ ಕಡ್ಡಾಯ ನೀತಿಯಿಂದ ಉತ್ಪಾದನೆ ವೆಚ್ಚ ಮತ್ತಷ್ಟು ಹೆಚ್ಚಳವಾಗಲಿದೆ. ಇದರಿಂ ಸಾಮಾನ್ಯ ಜನರಿಗೆ ಕಾರು ತಲುಪಿಸುವ ಕಾರ್ಯಕ್ಕೆ ಹಿನ್ನಡೆಯಾಗಲಿದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ್ ಹೇಳಿದ್ದಾರೆ.
Mandatory 6 airbag 6 ಏರ್‌ಬ್ಯಾಗ್ ಕಡ್ಡಾಯ ನಿರ್ಧಾರ ಶ್ರೀಮಂತರ ಪರ, ಬಡವರ ವಿರೋಧಿ, ಗಡ್ಕರಿಗೆ IRF ಪತ್ರ!
ದೇಶದಲ್ಲಿನ ಗರಿಷ್ಠ ಮಾರಾಟವಾಗು ಕಾರುಗಳ ಪೈಕಿ ಸಣ್ಣ ಹಾಗೂ ಕಡಿಮೆ ಬೆಲೆಯ ಕಾರುಗಳ ಸಂಖ್ಯೆ ಹೆಚ್ಚಿದೆ. ಆದರೆ ಹೊಸ ನೀತಿಯಿಂತ ಸಾಮಾನ್ಯ ಜನರಿಗೆ ಕಾರು ಸಿಗದಂತಾಗಲಿದೆ. ಸಣ್ಣ ಕಾರಿನ ಬೆಲೆಯೂ ದುಬಾರಿಯಾಗಲಿದೆ. ಹೀಗಾಗಿ ಕಾರು ಕೈಗೆಟುಕದ ವಸ್ತುವಾಗಲಿದೆ. ಇದರಿಂದ ಜನಸಾಮಾನ್ಯರು ಕಾರು ಖರೀದಿಗೆ ಹಿಂದೇಟು ಹಾಕಲಿದ್ದಾರೆ. ಇದರಿಂದ ಕಂಪನಿ ಮಾತ್ರವಲ್ಲ ದೇಶದ ಕಾರು ವಹಿವಾಟಿನಲ್ಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದ ಭಾರ್ಗವ್ ಹೇಳಿದ್ದಾರೆ.
ಬೇಸ್ ಮಾಡೆಲ್ ಕಾರುಗಳ ಉತ್ಪಾದನೆ ವೆಚ್ಚ ಹಾಗೂ ಮಾರಾಟ ವೆಚ್ಚದ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಹೀಗಾಗಿ ಈ ಕಾರುಗಳಿಂದ ಕಂಪನಿಗೆ ಲಾಭ ಕಡಿಮೆ. ಆದರೆ ಹೊಸ ನೀತಿಯಿಂದ ಬೇಸ್ ಮಾಡೆಲ್ ಕಾರುಗಳ ಬೆಲೆ ಗಗನಕ್ಕೇರಲಿದೆ. ಹೀಗಾಗಿ ಸಣ್ಣ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸದೆ ಬೇರೆ ಮಾರ್ಗವಿಲ್ಲ ಎಂದು ಭಾರ್ಗವ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಬ್ರೇಕ್ ಕಡ್ಡಾಯ ಮಾಡಿದೆ. ಎಬಿಎಸ್ ಬ್ರೇಕ್‌ನಿಂದ ಅತೀ ವೇಗದಲ್ಲಿ ದಿಢೀರ್ ಬೇಕ್ ಹಾಕಿದಾಗ ಚಕ್ರಗಳು ಲಾಕ್ ಆಗುವುದನ್ನು, ಸ್ಟೇರಿಂಗ್ ನಿಯಂತ್ರಣ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದ ವೇಗವಾಗಿ ಚಲಿಸುತ್ತಿರುವ ಕಾರನ್ನು ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಆದರೆ ಎಬಿಎಸ್ ಬೇಸ್ ಮಾಡೆಲ್ ಕಾರುಗಳಿಗೂ ಎಬಿಎಸ್ ಅಳವಡಿಕೆ, ಸ್ಪೀಡ್ ಅಲರ್ಟ್ ಸೇರಿದಂತೆ ಇತರ ಕಡ್ಡಾಯ ಫೀಚರ್ಸ್‌ನಿಂದ ಸಣ್ಣ ಕಾರಿನ ಬೆಲೆ ದುಪ್ಪಟ್ಟಾಗಿದೆ ಎಂದು ಭಾರ್ಗವ್ ಹೇಳಿದ್ದಾರೆ.
ಕಾರಿನಲ್ಲಿ ಮಾಡಬೇಡಿ ಈ 6 ತಪ್ಪು- ಆಗಬಹುದು ಪ್ರಾಣಕ್ಕೆ ಕುತ್ತು!
ಅಕ್ಟೋಬರ್ 1 ರಿಂದ 8 ಅಥವಾ ಅದಕ್ಕಿಂತ ಕಡಿಮೆ ಆಸನಗಳ ಸಾಮರ್ಥ್ಯ ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ ಮಾಡಿದೆ. ಏರ್‌ಬ್ಯಾಗ್‌ನಿಂದ ಅಪಘಾತದಲ್ಲಿ ಹಲವು ಜೀವಗಳಿಗೆ ರಕ್ಷಣೆ ಸಿಕ್ಕಿದೆ. ಹೀಗಾಗಿ ಅಘಾತದ ಪ್ರಮಾಣ ತಗ್ಗಿಸಲು ಹಾಗೂ ಅಪಘಾತವಾದಾಗ ಜೀವಹಾನಿಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದು ಬಿಎಸ್6 ಎಮಿಶನ್ ನಿಯಮ ಜಾರಿಗೆ ತಂದ ರೀತಿಯಲ್ಲೇ ಸರ್ಕಾರ ಹೊಸ ನೀತಿಯನ್ನು ಜಾರಿಗೆ ತರುತ್ತಿದೆ.
ಸದ್ಯ ಬಿಎಸ್6 ಎಮಿಶನ್ ನಿಯಮ ಪಾಲಿಸದ ಕಾರುಗಳ ನೋಂದಣಿ ಮಾಡಲು ಸಾಧ್ಯವಿಲ್ಲ. ಅದೇ ರೀತಿ 6 ಏರ್‌ಬ್ಯಾಗ್ ಇಲ್ಲದ ಕಾರುಗಳ ನೋಂದಣಿ ಮಾಡಲು ಸಾಧ್ಯವಿಲ್ಲ. ಏರ್‌ಬ್ಯಾಗ್‌ನಿಂದ 3ನೇ ಒಂದು ಭಾಗದಷ್ಟು ಜನರ ಜೀವ ಉಳಿದಿದೆ.
ಹೊಸ ನೀತಿಯಿಂದ ಕಾರುಗಳ ಬೆಲೆ ಹೆಚ್ಚಾಗಲಿದೆ. ಆದರೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುವವರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಈ ವಿಚಾರವನ್ನು ಅಲ್ಲಗೆಳೆಯುವಂತಿಲ್ಲ ಎಂದು ಆರ್‌ಸಿ ಭಾರ್ಗವ್ ಹೇಳಿದ್ದಾರೆ.