ಲಕ್ನೋ(ಫೆ.07): ಇಂದು ಉತ್ತರ ಪ್ರದೇಶ ಸರ್ಕಾರ ತನ್ನ 2019-20ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಹಣಕಾಸು ಸಚಿವ ರಾಜೇಶ್ ಅಗರವಾಲ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.

ಒಟ್ಟು 4.79 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿರುವ ಯೋಗಿ ಸರ್ಕಾರ, ರೈತ ಸಮುದಾಯ ಮತ್ತು ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆ ಘೋಷಿಸಿದ್ದಾರೆ.

ಕಳೆದ ಬಾರಿ ಉತ್ತರ ಪ್ರದೇಶ ಸರ್ಕಾರ 4.28 ಲಕ್ಷ ಕೋಟಿ ರೂ. ಮಂಡಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಜೆಟ್ ಗಾತ್ರ ಶೇ.12ರಷ್ಟು ಹೆಚ್ಚಿದೆ.

ಇನ್ನು ಪ್ರಮುಖವಾಗಿ ರಾಜ್ಯದ ಗೋಶಾಲೆಗಳಿಗೆ 450 ಕೋಟಿ ರೂ. ಒದಗಿಸಿರುವ ಯೋಗಿ ಸರ್ಕಾರ, ಗೋರಕ್ಷಣೆಗೆ ತನ್ನ ಬದ್ಧತೆಯನ್ನು ಪುನರುಚ್ಛಿಸಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 650 ಕೋಟಿ ರೂ.ಗಳನ್ನು ಗೋರಕ್ಷಣೆಗೆ ಮೀಸಲಿಡಲಾಗಿದೆ. 

ಈ ಮಧ್ಯೆ ರಾಜ್ಯದ ಮದರಸಾಗಳ ಅಭಿವೃದ್ಧಿಗೆ 459 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಅಲ್ಲದೇ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 200 ಕೋಟಿ ರೂ. ಮೀಸಲಿಡಲಾಗಿದೆ.