ಮುಂಬೈ[ಮಾ.31]: ಖಾಸಗಿ ಸ್ವಾಮ್ಯದ ವಿಮಾನಯಾನ ಕಂಪನಿ ಜೆಟ್‌ ಏರ್‌ವೇಸ್‌ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗಲೇ, ಏ.1ರ ಸೋಮವಾರದಿಂದ ಕರ್ತವ್ಯದಿಂದ ದೂರ ಉಳಿಯಲು ಆ ಕಂಪನಿಯ ಬರೋಬ್ಬರಿ 1000 ಪೈಲಟ್‌ಗಳು ನಿರ್ಧರಿಸಿದ್ದಾರೆ. ಇದರಿಂದಾಗಿ ಜೆಟ್‌ ಏರ್‌ವೇಸ್‌ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯವಾಗುವ ಸಾಧ್ಯತೆ ಇದೆ.

ಪೈಲಟ್‌ಗಳು, ಎಂಜಿನಿಯರ್‌ಗಳು ಹಾಗೂ ಹಿರಿಯ ಮ್ಯಾನೇಜ್‌ಮೆಂಟ್‌ ಸಿಬ್ಬಂದಿಗೆ ಕಳೆದ 4 ತಿಂಗಳಿನಿಂದ ಸಂಬಳ ಪಾವತಿಯಾಗಿಲ್ಲ. ಮಾ.31ರೊಳಗೆ ಸಂಬಳ ಪಾವತಿಯಾಗದಿದ್ದರೆ ಹಾಗೂ ಪುನಶ್ಚೇತನ ಯೋಜನೆಯ ಕುರಿತು ಸ್ಪಷ್ಟತೆ ಸಿಗದಿದ್ದರೆ ಏ.1ರಿಂದ ಕರ್ತವ್ಯದಿಂದ ದೂರ ಉಳಿಯಲು ಜೆಟ್‌ ಏರ್‌ವೇಸ್‌ನ 1100 ಪೈಲಟ್‌ಗಳು ಸದಸ್ಯರಾಗಿರುವ ನ್ಯಾಷನಲ್‌ ಏವಿಯೇಟರ್ಸ್ ಗಿಲ್ಡ್‌ ನಿರ್ಧರಿಸಿತ್ತು. ಅದಾದ ಬಳಿಕ ಜೆಟ್‌ ಏರ್‌ವೇಸ್‌ ಆಡಳಿತ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟದ ತೆಕ್ಕೆಗೆ ಹೋಗಿತ್ತು.

ಮಾ.29ರಂದು ಶುಕ್ರವಾರ ಬ್ಯಾಂಕುಗಳಿಂದ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿ ಪೈಲಟ್‌ಗಳು ಇದ್ದರು. ಬಾರದ ಕಾರಣ ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ.