ತೈಲದರ ಏರಿಕೆ ಕುರಿತು ಪ್ರಧಾನಿ ಮೋದಿ ಮೌನವೇಕೆ?! ಜನಸಾಮಾನ್ಯನ ಗೋಳು ಮೋದಿಗೆ ಕೇಳಿಸುತ್ತಿಲ್ಲವೇ?! ಮಾಜಿ ಪ್ರಧಾನಿ ಡಾ. ಸಿಂಗ್ ಅಂದು ಮಾಡಿದ್ದ ಭಾಷಣವೇನು?! ಸಿಂಗ್ ಉಲ್ಲೇಖಿಸಿದ್ದ ಭವಿಷ್ಯದ ಮಕ್ಕಳು ಅನುಭವಿಸುತ್ತಿರುವ ಪಾಡೇನು?! ಆಯಿಲ್ ಬಾಂಡ್ ಮಾರಕ ಎಂದು ಗೊತ್ತಿದ್ದರೂ ಸಿಂಗ್ ವಿತರಿಸಿದ್ದೇಕೆ?
ನವದೆಹಲಿ(ಸೆ.13): ನಿರಂತರ ತೈಲದರ ಏರಿಕೆ ಪ್ರತಿಯೊಬ್ಬ ಭಾರತೀಯನನ್ನು ಕಂಗಾಲಾಗಿಸಿದೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಕಂಡು ಜನಸಾಮಾನ್ಯ ದಂಗಾಗಿ ಹೋಗಿದ್ದಾನೆ. ಕೇಂದ್ರ ಸರ್ಕಾರ ಕೂಡ ತೈಲದರ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದೆ.
ಈ ಮಧ್ಯೆ ಇಷ್ಟೊಂದು ಪ್ರಮಾಣದಲ್ಲಿ ತೈಲದರ ಏರಿಕೆಯಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದೇಕೆ ಎಂಬ ಪ್ರಶ್ನೆ ದೇಶವಾಸಿಗಳನ್ನು ಕಾಡುತ್ತಿದೆ. ಅಷ್ಟೇ ಅಲ್ಲ ಈ ಕುರಿತು ಸಣ್ಣದೊಂದು ಸಿಟ್ಟು ಮೋದಿ ಅವರ ಮೇಲೆ ಜನರಲ್ಲಿ ಇರುವುದು ಸುಳ್ಳಲ್ಲ.
ಆದರೆ ಪ್ರಧಾನಿ ಮೋದಿ ಏಕೆ ತೈಲದರ ಏರಿಕೆ ಕುರಿತು ತುಟಿ ಬಿಚ್ಚುತ್ತಿಲ್ಲ?. ತೈಲದರ ನಿಯಂತ್ರಣಕ್ಕೆ ಮೋದಿ ಏಕೆ ಮುಂದಾಗುತ್ತಿಲ್ಲ?. ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಕಳೆದ ೧೦ ವರ್ಷಗಳ ಭಾರತದ ಆರ್ಥಿಕತೆ ಸಾಗಿ ಬಂದ ಹಾದಿಯಲ್ಲಿ ಉತ್ತರ ಅಡಗಿದೆ.
ಯುಪಿಎ ಅವಧಿಯಲ್ಲಿ ಕೈಗೊಂಡ ಕೆಲವು ಆರ್ಥಿಕ ನಿರ್ಣಯಗಳು, ಪ್ರಮುಖವಾಗಿ ಅಗಾಧ ಪ್ರಮಾಣದ ಆಯಿಲ್ ಬಾಂಡ್ ಗಳ ವಿತರಣೆ ಮಾಡಿದ್ದೂ ಕೂಡ ಇಂದಿನ ತೈಲದರ ಏರಿಕೆಯ ಕಾರಣಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವೇ ಇಲ್ಲ.
ಅದು ಜೂನ್ 4, 2008. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ದೇಶವನ್ನು ಉದ್ದೇಶೀಸಿ ಮಾತನಾಡಿದ್ದರು. ಅಂದು ಕೇಂದ್ರ ಸರ್ಕಾರ ತೈಲದರವನ್ನು ಏರಿಸಿತ್ತು. ಈ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಸಿಂಗ್, ತೈಲದರ ಏರಿಕೆಗೆ ಕಾರಣಗಳು, ಭವಿಷ್ಯದ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳ ಕುರಿತು ದೀರ್ಘವಾಗಿ ಭಾಷಣ ಮಾಡಿದ್ದರು.
ಅಂದು ಡಾ ಸಿಂಗ್ ಹೇಳಿದ್ದಿಷ್ಟು:
‘ನನ್ನ ಪ್ರೀತಿಯ ದೇಶ ಭಾಂಧವರೇ ಸರ್ಕಾರ ಇಂದು ತೈಲದರ ಏರಿಸುವ ನಿರ್ಧಾರ ಕೈಗೊಂಡಿದೆ. ನನಗೆ ಗೊತ್ತು ಇದು ಖಂಡಿತವಾಗಿ ಜನಪ್ರಿಯ ಘೋಷಣೆಯಾಗದಿರದು ಎಂದು. ಆದರೆ ನಮ್ಮ ಆಯಿಲ್ ಕಂಪನಿಗಳು ಮತ್ತು ಸರ್ಕಾರ ತೈಲದರ ನಿಯಂತ್ರಣಕ್ಕಾಗಿ ಸಾಕಷ್ಟು ತ್ಯಾಗಗಳನ್ನು ಮಾಡುತ್ತಲೇ ಇದೆ.
ಇದೇ ಕಾರಣಕ್ಕೆ ಸರ್ಕಾರ ಆಯಿಲ್ ಬಾಂಡ್ ಗಳನ್ನು ವಿತರಿಸುವ ನಿರ್ಧಾರ ಕೈಗೊಂಡಿದೆ. ನನಗೆ ಗೊತ್ತು ಆಯಿಲ್ ಬಾಂಡ್ ಗಳನ್ನು ವಿತರಿಸುವ ನಿರ್ಧಾರ ಶಾಶ್ವತ ಪರಿಹಾರಕ್ಕಾಗಿ ಅಲ್ಲ. ನಾವು ನಮ್ಮ ಸಾಲವನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದೇವೆ ಅಷ್ಟೇ.’
ಇಂದು ಧರ್ಮೇಂದ್ರ ಪ್ರಧಾನ್ ಮಾಡಿದ್ದಿಷ್ಟು:
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಯುಪಿಎ ಸಕಾರ್ಕಾರದ ಅವಧಿಯಲ್ಲಿ ವಿತರಿಸಲಾಗಿದ್ದ ಆಯಿಲ್ ಬಾಂಡ್ ಗಳ ಸುಮಾರು 2 ಲಕ್ಷ ಕೋಟಿ ರೂ. ಸಾಲವನ್ನು ಮರುಪಾವತಿಸಿದ್ದಾರೆ. ಅಂದರೆ ಅಂದು ಡಾ. ಸಿಂಗ್ ಹೇಳಿದ್ದ ಮಾತು ಇಂದು ನಿಜವಾಗಿದೆ. ಸಿಂಗ್ ಹೇಳಿದಂತೆ ನಮ್ಮ ಮಕ್ಕಳು ನಾವು ಇಂದು ಮಾಡಿರುವ ಸಾಲವನ್ನು ಪಾವತಿಸಬೇಕಾಗುತ್ತದೆ. ಅದರಂತೆ ಪ್ರಧಾನ್ ಈ ಸಾಲವನ್ನು ಇಂದು ತೀರಿಸಿದ್ದಾರೆ.
ಒಟ್ಟಾರೆ ಯುಪಿಎ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ಆರ್ಥಿಕ ನಿರ್ಣಯಗಳು, ಇಂದಿನ ತೈಲದರ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಆಯಿಲ್ ಬಾಂಡ್ ಮುಂದೊಂದು ದಿನ ದೇಶದ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸಲಿದೆ ಎಂಬುದು ಗೊತ್ತಿದ್ದರೂ ಡಾ. ಸಿಂಗ್ ನೇತೃತ್ವದ ಯುಪಿಎ ಸಕಾರ್ಕಾರ ಆಯಿಲ್ ಬಾಂಡ್ ಗಳ ಜೊತೆ ಆಟ ಆಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತಿರಿಸೋದು ಯಾರು?.
ಈ ಎಲ್ಲಾ ವಿಷಯ ಅರಿತೇ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿದ್ದು, ಈ ಕ್ಲಿಷ್ಟಕರ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವ ಬದಲು ಸಮಸ್ಯೆ ಬಗೆಹರಿಸುವತ್ತ ಪ್ರಧಾನಿ ಮೋದಿ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದು ಅವರನ್ನು ಹತ್ತಿರದಿಂಧ ಬಲ್ಲವರ ಮಾತು.
