ನಾವು ಸಂಪಾದಿಸಿದ ಆಸ್ತಿ ಸತ್ತ ನಂತರ ಯಾರಿಗೆ ಸೇರಬೇಕು? ವಿಲ್ ರಿಜಿಸ್ಟರ್ ಮಾಡಿಸೋದು ಹೇಗೆ?
ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ ಮಾಡಿರುವ ಪೋಷಕರು, ಅದನ್ನು ಯಾರಿಗೆ ಸೇರಬೇಕೆಂದು ವಿಲ್ ಮಾಡಿ ಇಡೋದು ಹೇಗೆ? ವಿಲ್ ನೋಂದಣಿ ಮಾಡಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಕ್ಕಳ ಭವಿಷ್ಯ ಚೆನ್ನಾಗಿರಲೆಂದು ಪೋಷಕರು ಆಸ್ತಿ, ಮನೆ, ದುಡ್ಡು ಮಾಡಿರುತ್ತಾರೆ. ಆದರೆ, ಅನಿಶ್ಚತತೆಯಿಂದ ಕೂಡಿದ ಈ ಬದುಕಲ್ಲಿ ಯಾರಿಗೆ, ಯಾವಾಗ ಏನಾಗುತ್ತೆ ಅಂತ ಹೇಳಲಾಗುವುದಿಲ್ಲ. ಹಾಗಾಗಿ, ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ವಿಲ್ ಮಾಡಿ ಇಡೋದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ಜೀವನದ ಕೊನೆಯ ಆಶಯಯವನ್ನು ವ್ಯಕ್ತಪಡಿಸುವ, ಮಾಡಿದ ಆಸ್ತಿಯನ್ನು ಹಸ್ತಾಂತರಿಸಲು ಮಾಡುವ ಕಾನೂನು ಪ್ರಕ್ರಿಯಗೆ ವಿಲ್ ಎನ್ನುತ್ತಾರೆ. ಆಸ್ತಿ ಹಂಚಿಕೆ, ಆಸ್ತಿ ಉತ್ತರಾಧಿಕಾರ ಹಾಗೂ ಮತ್ತಷ್ಟು ವಿಷಯಗಳ ಬಗ್ಗೆ ಅಂತಿಮ ಇಚ್ಛೆಯ ಅಧಿಕೃತ ದಾಖಲೆಯನ್ನು ರಚಿಸಲು ಸೂಕ್ತ ಅಧಿಕಾರಿಗಳೊಂದಿಗೆ ವಿಲ್ ದಾಖಲಿಸಿರಬೇಕು. ವಿಲ್ ನೋಂದಣಿ ನಿಮ್ಮ ಆಸ್ತಿ ಹಂಚಿಕೆ ಯೋಜನೆಗಳಿಗೆ ಸೂಕ್ತ ಭದ್ರತೆ ಒದಗಿಸುತ್ತದೆ. ಆಸ್ತಿ ವಿವಾದಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಯಾರಿಗೆ ಆಸ್ತಿ ಕೊಡಬೇಕು ಎಂದುಕೊಂಡಿರುತ್ತೀರೋ ಅವರಿಗೆ ಆಸ್ತಿ ಹಕ್ಕುಪತ್ರ ಹಂಚಿಕೆಯ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ.
ವಿಲ್‌ಗಳನ್ನು ನೋಂದಣಿ ಕಾಯಿದೆ, 1908ರ ಅಡಿಯಲ್ಲಿ ಭಾರತದಲ್ಲಿ ನೋಂದಾಯಿಸಬೇಕು. ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ಈ ಕಾಯಿದೆಯು ವಿಲ್‌ಗಳನ್ನು ಸಂಬಂಧಿಸಿದ ನೋಂದಣಾ ಅಧಿಕಾರಿಯಿಂದ ದಾಖಲಿಸಬೇಕು. ಉತ್ತರಾಧಿಕಾರಿಗೆ ವಿಲ್ ಮಾಡಿಡಲೇ ಬೇಕೆಂಬ ಕಡ್ಡಾಯ ಕಾನೂನು ಇಲ್ಲದಿದ್ದರೂ, ವಿಲ್ ರಿಜಿಸ್ಟರ್ ಆಗಿಬಿಟ್ಟರೆ ಭವಿಷ್ಯದ ಹಾದಿ ಸುಗಮವಾಗುತ್ತದೆ. ಇದರಿಂದ ಹಲವು ಪ್ರಯೋಜನಗಳೂ ಇವೆ. ಕೌಟುಂಬಿಕ ಪರಂಪರೆಯನ್ನು ರಕ್ಷಿಸಲು ಹಾಗೂ ಅನಗತ್ಯ ತೊಂದರೆಗಳಿಲ್ಲದೆ ಉತ್ತರಾಧಿಕಾರಿಗಳು ಆಸ್ತಿಯನ್ನು ಪಡೆಯುವುದನ್ನು ವಿಲ್ ಖಚಿತಪಡಿಸುತ್ತದೆ. ಇದು ವ್ಯಕ್ತಿಯೊಬ್ಬ ಜೀವನದ ಕೊನೆಯ ದಿನಗಳಲ್ಲಿ ಇಡಬಹುದಾದ ಜಾಣತನದ ಹೆಜ್ಜೆಯಾಗಿದೆ.
ವಿಲ್ ನೋಂದಣಿ ಮಾಡಿಸುವುದು ಹೇಗೆ?
ಭಾರತದಲ್ಲಿ ನಿಮ್ಮ ವಿಲ್ ನೋಂದಾಯಿಸಲು ನೀವು ವಾಸಿಸುವ ಅಧಿಕಾರ ವ್ಯಾಪ್ತಿಯಲ್ಲಿರುವ ಸ್ಥಳೀಯ ಉಪ-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ವಿಲ್ ನೋಂದಣಿ ಪ್ರಕ್ರಿಯೆ ಕೆಳಗಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದನ್ನು ಒಳಗೊಂಡಿದೆ. ಸಣ್ಣ ಮೊತ್ತದ ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಜನ್ಮ ದಿನಾಂಕ ಪ್ರಮಾಣಪತ್ರ ಪಡೆಯುವುದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ!
ವಿಲ್ ಮಾಡಿಸಲು ಬೇಕಾಗುವ ದಾಖಲೆಗಳು:
- - ವಿಲ್ ಮಾಡಿಸುವ ವ್ಯಕ್ತಿಯ ಎರಡು ಪಾಸ್‌ಪೋರ್ಟ್-ಅಳತೆಯ ಭಾವಚಿತ್ರಗಳು. ಕೆಲವು ಕಡೆ ಭಾವಚಿತ್ರಗಳು ಮತ್ತು ಹೆಬ್ಬೆರಳಚ್ಚನ್ನು ಎಲೆಕ್ಟ್ರಾನಿಕ್ ಆಗಿ ಸೆರೆ ಹಿಡಿಯಲಾಗುತ್ತದೆ
- - ವಿಲ್ ಮಾಡಿಸುವ ವ್ಯಕ್ತಿ ಮಾನಸಿಕವಾಗಿ ಸದೃಢವಾಗಿದ್ದಾರೆಂದು ಹಾಗೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೂರ್ಣ ಸಮರ್ಥರಾಗಿದ್ದಾರೆಂದು ಪ್ರಮಾಣೀಕರಿಸುವ MBBS/MD ವೈದ್ಯರಿಂದ ಲಿಖಿತ ರೂಪದ ವೈದ್ಯಕೀಯ ಪ್ರಮಾಣಪತ್ರ ಬೇಕು.
- - ವಿಲ್ ಮಾಡಿಸುವ ವ್ಯಕ್ತಿ ಸಹಿ ಮಾಡಿದ ಮೂಲ ವಿಲ್.
- - ಎರಡು ಸಾಕ್ಷಿ ನೀಡುವವರು ಸಹಿ ಮಾಡಲು ಉಪ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಾಜರಿರಬೇಕು. ಅವರು ತಮ್ಮ ಫೋಟೋ ಪುರಾವೆಯನ್ನು ಸಹ ಒದಗಿಸಬೇಕು.
- - ವಿಲ್ ಮಾಡಿಸುವ ವ್ಯಕ್ತಿ ಮತ್ತು ಎರಡು ಸಾಕ್ಷಿಗಳ ಗುರುತಿನ ಪುರಾವೆ ಒದಗಿಸಬೇಕು.
- - ವಿಲ್ ಮಾಡಿಸುವ ವ್ಯಕ್ತಿಯ ವಿಳಾಸದ ಪುರಾವೆ ನೀಡಬೇಕು.
- - ವಿಲ್ ಮಾಡಿಸುವ ವ್ಯಕ್ತಿ ಮತ್ತು ಎರಡು ಸಾಕ್ಷಿಗಳ PAN ಕಾರ್ಡ್ ಕೂಡ ಹಾಜರುಪಡಿಸಬೇಕು.
ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಉಪ ರಿಜಿಸ್ಟ್ರಾರ್‌ರಿಂದ ನೋಂದಣಿ ಪ್ರಮಾಣಪತ್ರ ಪಡೆಯಬಹುದು. ಪ್ರಮಾಣ ಪತ್ರವನ್ನು ಸುರಕ್ಷಿತವಾಗಿಟ್ಟು, ಉಲ್ಲೇಖಕ್ಕಾಗಿ ಕುಟುಂಬದ ಸದಸ್ಯರಿಗೆ ಮತ್ತು ನೇಮಕಗೊಂಡ ಕಾರ್ಯನಿರ್ವಾಹಕರಿಗೆ ಪ್ರತಿಗಳನ್ನು ನೀಡಿದರೆ ಒಳಿತು.
ಇದನ್ನೂ ಓದಿ: ಯಾವುದಾದ್ರೂ ಮಹತ್ವದ ಡಾಕ್ಯುಮೆಂಟ್ ಕಳೆದಿದ್ಯಾ? ಮರಳಿ ಪಡೆಯೋದು ಹೇಗೆ?
ನೋಂದಾಯಿತ ವಿಲ್‌ನ ಪ್ರಯೋಜನ:
ಭಾರತದಲ್ಲಿ ವಿಲ್ ನೋಂದಣಿಯಿಂದ ಹಲವು ಪ್ರಯೋಜನಗಳಿವೆ. ಜೀವನಮಾನ ಪೂರ್ತಿ ಕಷ್ಟ ಪಟ್ಟು ಒಗ್ಗೂಡಿಸಿದ ಆಸ್ತಿ ತಮ್ಮ ಕಾಲಾನಂತರ ಅನ್ಯರ ಪಾಲಾಗಾದೇ ಸೂಕ್ತರ ಪಾಲಾಗುವುದನ್ನು ಈ ವಿಲ್ ಖಚಿತಪಡಿಸುತ್ತದೆ.
- ವಿವಾದಗಳನ್ನು ತಪ್ಪಿಸುವುದು: ನೋಂದಾಯಿತ ವಿಲ್ ಫಲಾನುಭವಿಗಳ ನಡುವೆ ವಿವಾದಗಳನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ. ನಿಮ್ಮ ಉದ್ದೇಶಗಳ ಸ್ಪಷ್ಟ ಮತ್ತು ಕಾನೂನುಬದ್ಧ ದಾಖಲೆಯನ್ನು ಒದಗಿಸುತ್ತದೆ. ವಿಲ್ ಸ್ಪಷ್ಟವಾಗಿದ್ದರೆ ಅದರ ಮೇಲೆ ಕಾನೂನು ಹೋರಾಟ ಕಷ್ಟವಾಗುತ್ತದೆ.
- ಆಸ್ತಿ ಹಸ್ತಾಂತರ ಸುಲಭ: ಪ್ರೊಬೇಟ್ ಎಂಬುದು ನ್ಯಾಯಾಲಯದಲ್ಲಿ ವಿಲ್ ಅನ್ನು ಮಾನ್ಯಗೊಳಿಸುವ ಕಾನೂನು ಪ್ರಕ್ರಿಯೆ. ನೋಂದಾಯಿತ ವಿಲ್ ಸಾಮಾನ್ಯವಾಗಿ ನೋಂದಾಯಿಸದ ವಿಲ್‌ಗೆ ಹೋಲಿಸಿದರೆ ವೇಗ ಹಾಗೂ ಸುಗಮವಾದ ಪ್ರೊಬೇಟ್ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಉತ್ತರಾಧಿಕಾರಿಗೆ ಆಸ್ತಿ ಹಸ್ತಾಂತರಕ್ಕೆ ತೆಗದುಕೊಳ್ಳುವ ಸಮಯ ಹಾಗೂ ಕಾನೂನು ವೆಚ್ಚಗಳನ್ನು ಉಳಿಸುತ್ತದೆ.
- ಆಸ್ತಿ ರಕ್ಷಣೆ: ವಿಲ್ ನೋಂದಣಿಯು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ರಕ್ಷಿಸುತ್ತದೆ. ಅವನ್ನು ನಿಮ್ಮ ಇಚ್ಛೆಯಂತೆಯೇ ಹಂಚಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಆಸ್ತಿ ಪ್ರಮಾಣ ಗಣನೀಯವಾಗಿದ್ದರೆ, ಅಥವಾ ಇರೋ ಆಸ್ತಿ ಬಗ್ಗೆ ಗೊಂದಲಗಳಿದ್ದರೆ ಇಂಥ ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿದೆ.
- ದಾಖಲೆಗಳ ಸಂರಕ್ಷಣೆ: ನೋಂದಣಿಯು ವಿಲ್‌ನ ಅಧಿಕೃತ ದಾಖಲೆಯನ್ನು ರಚಿಸುತ್ತದೆ. ಇದನ್ನು ನಂತರ ರಿಜಿಸ್ಟ್ರಾರ್‌ನೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಇದು ವಿಲ್ ಕಳೆದು ಹೋಗುವ, ನಾಶವಾಗುವ ಅಥವಾ ಅದು ಮಿಸ್ ಯೂಸ್ ಆಗುವ ಅಪಾಯವನ್ನು ತಡೆಯುತ್ತದೆ.
- ಆಸ್ತಿ ವರ್ಗಾವಣೆ ಸುಲಭ: ನೋಂದಾಯಿತ ವಿಲ್ ನಿಮ್ಮ ಕಾನೂನು ಉತ್ತರಾಧಿಕಾರಿಗಳು ಮತ್ತು ಫಲಾನುಭವಿಗಳಿಗೆ ಹೆಚ್ಚು ಲಭ್ಯ. ದೀರ್ಘ ಕಾನೂನು ಪ್ರಕ್ರಿಯೆಗೆ ಒಳಗಾಗದೇ ಅಧಿಕಾರಿಗಳಿಂದ ವಿಲ್‌ನ ಪ್ರಮಾಣೀಕೃತ ಪ್ರತಿ ಪಡೆದು, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು.
- ಮನಃಶಾಂತಿ: ನಿಮ್ಮ ವಿಲ್ ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟಿದೆ ಎಂದು ತಿಳಿದಿರುವುದು ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಮನಃಶಾಂತಿಯನ್ನು ನೀಡುತ್ತದೆ. ಇದು ಆಸ್ತಿಯನ್ನು ನಿಮ್ಮ ಇಚ್ಛೆಗಳ ಪ್ರಕಾರ ನಿರ್ವಹಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ನಿಮ್ಮ ಆಸ್ತಿಯ ಉತ್ತರಾಧಿಕಾರಗಳ ಭವಿಷ್ಯದ ಹಿತದೃಷ್ಟಿಯಿಂದ ಇದು ಅತ್ಯಗತ್ಯ. ಅವರ ಸೆಕ್ಯೂರಡ್ ಲೈಫ್ ಲೀಡ್ ಮಾಡಲು ಈ ವಿಲ್ ಬೇಕೇ ಬೇಕು.