ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು ಎಂಬುದನ್ನು ತಿಳಿಯಿರಿ. ಉತ್ತಮ ಕ್ರೆಡಿಟ್ ಸ್ಕೋರ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳಿ.

ಸಾಲ ಇಲ್ಲದೇ, ದುಡಿದಿದ್ದನ್ನು ಇಎಂಐಗೆ ಸ್ಪೆಂಡ್ ಮಾಡದವರೇ ಇಲ್ಲ. ಆದರೆ, ಸಾಲ ತೆಗೆದುಕೊಳ್ಳಲು ನಿಮಗೆಷ್ಟಿದೆ ಅರ್ಹತೆ ಅಂತ ಕಂಡು ಹಿಡಿಯಲು ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ಅಷ್ಟಕ್ಕೂ ಕ್ರೆಡಿಟ್ ಸ್ಕೋರ್ ಮೆಂಟೈನ್ ಮಾಡೋದು ಹೇಗೆ? 


ಕ್ರೆಡಿಟ್ ಸ್ಕೋರ್ ಎಂದರೇನು?: ಎಲ್ಲರೂ ಪಡೆದ ಸಾಲದ ಇತಿಹಾಸದ 3-ಅಂಕಿಯ ಸಂಖ್ಯಾತ್ಮಕ ಸಾರಾಂಶವಾಗಿದ್ದು,ಹಿಂದೆ ಮಾಡಿರುವ ಸಾಲ ಹಾಗೂ ಅದನ್ನು ತೀರಿಸಿದ ಬಗೆ ಮತ್ತು ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌, ಗೃಹ, ವ್ಯಾಪಾರ, ವಾಹನ ಸಾಲಗಳು, ಓವರ್‌ಡ್ರಾಫ್ಟ್‌ಗಳು, ಕ್ರೆಡಿಟ್ ಲೈನ್‌ಗಳು ಸೇರಿ ಬಗೆ ಬಗೆಯ ಸಾಲವನ್ನು ಹೇಗೆ ನಿರ್ವಹಿಸಿದ್ದೀರಿ ಎಂಬುದನ್ನು ವಿವರಿಸುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಸಾಮಾನ್ಯವಾಗಿ CIBIL ಸ್ಕೋರ್ ಎಂದೂ ಕರೆಯುತ್ತಾರೆ. ಇದು ಪ್ರಾಥಮಿಕವಾಗಿ ಬ್ಯಾಂಕುಗಳು ಮತ್ತು NBFC ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಸಾಮರ್ಥ್ಯದ ಮಾನದಂಡ. CIBIL ಸ್ಕೋರ್ ಅನ್ನು ತಿಂಗಳಿಗೊಮ್ಮ ಸಾಲ ಕೊಟ್ಟ ಹಣಕಾಸು ಸಂಸ್ಥೆಗಳು ಕ್ರೆಡಿಟ್ ಬ್ಯೂರೋಗಳಿಗೆ ನೀಡುತ್ತವೆ. ಗ್ರಾಹಕರ ಕ್ರೆಡಿಟ್ ಮಾಹಿತಿ ಆಧಾರದ ಮೇಲೆ ಲೆಕ್ಕಹಾಕಿ, ಈ ಸ್ಕೋರನ್ನು ಲೆಕ್ಕ ಹಾಕಲಾಗುತ್ತದೆ.

ಸರಳವಾಗಿ ಹೇಳುವುದಾದರೆ, ಈ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಸಾಲದಾತರಿಗೆ ಯಾವುದೇ ರಿಸ್ಕ್ ಇಲ್ಲದೆ, ನಿಮಗೆ ಸಾಲ ಕೊಡಬಹುದೇ? ಕೊಟ್ಟರೆ ತೀರಿಸುವ ಸಾಮರ್ಥ್ಯ ಇದೆಯೇ? ಎಂಬುದನ್ನು ನಿರ್ಧರಿಸಿ ಸಾಲು ನೀಡಲು ಮುಂದಾಗುವಂತೆ ಮಾಡುತ್ತದೆ. ಹೊಸ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಸಾಧ್ಯತೆಯನ್ನೂ ಈ ಸ್ಕೋರ್ ತೋರಿಸುತ್ತದೆ. ನೀವು ಯಾವುದೇ ರೀತಿಯ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಸಾಲದಾತರು ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ಕ್ರೆಡಿಟ್ ಯೋಗ್ಯತೆ ತಿಳಿಯಲು ಕ್ರೆಡಿಟ್ ಬ್ಯೂರೋದಿಂದ ಕ್ರೆಡಿಟ್ ವರದಿಯನ್ನು ತರಿಸಿಕೊಳ್ಳುತ್ತವೆ. 

CIBIL ಸ್ಕೋರ್ 300-900 ವ್ಯಾಪ್ತಿಯಲ್ಲಿರುತ್ತದೆ, ಇದರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ದಷ್ಟೂ, ಸಾಲ ನೀಡುವ ಸಂಸ್ಥೆಗಳು ನಿಮಗೆ ಹೊಸ ಸಾಲ ನೀಡಲು ಅನುಮೋದಿಸಬಲ್ಲದು. ಸಾಮಾನ್ಯವಾಗಿ, 760 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಪ್ರಮಾಣಿತ ಮಾನದಂಡವೆಂದು ಪರಿಗಣಿಸಲಾಗುತ್ತದೆ. ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅನುಮೋದನೆಗಾಗಿ ಸಾಲ ನೀಡುವ ಸಂಸ್ಥೆಗಳು ಕಾಯುತ್ತವೆ. ಕೆಲವು ಬ್ಯಾಂಕುಗಳು/NBFC ಗಳಿಗೆ, 700+ ಕ್ರೆಡಿಟ್ ಸ್ಕೋರ್ ಅನ್ನು ಸಹ ಕ್ರೆಡಿಟ್ ಕಾರ್ಡ್ ಅನುಮೋದನೆಗಳಿಗೆ ಪರಿಗಣಿಸಲಾಗುತ್ತದೆ.

ನೀವು ಆಗಾಗ್ಗೆ ನಿಮ್ಮ ಸಾಲಗಳ EMI ಗಳನ್ನು ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ಮಿಸ್ ಮಾಡಿದರೆ ಅಥವಾ ತಡ ಮಾಡಿದರೆ, ಸ್ಕೋರ್ ನಕಾರಾತ್ಮಕವಾಗಿ ಪ್ರಭಾವಿತವಾಗುತ್ತದೆ. ಇನ್ನೊಂದೆಡೆ, EMI ಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳ ಮರು ಪಾವತಿಗಳಲ್ಲಿ ಶಿಸ್ತಬದ್ಧರಾಗಿದ್ದರೆ, ಪದೇ ಪದೇ ಕ್ರೆಡಿಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಯಾವುದೇ ಸಾಲ ತೀರಿಸುವಲ್ಲಿ ತಡ ಮಾಡದೇ ಹೋದಲ್ಲಿ, ಕ್ರೆಡಿಟ್ ಸ್ಕೋರ್ ಹೆಚ್ಚಾಗಿ, ಮತ್ತೆ ಸಾಲ ಪಡೆಯಲು ನೆರವಾಗುತ್ತದೆ. 

ಕ್ರೆಡಿಟ್ ಸ್ಕೋರ್‌ ಪ್ರಯೋಜನ: ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಮೌಲ್ಯಮಾಪನ ಮಾಡುವಾಗ ಸಾಲ ನೀಡುವ ಸಂಸ್ಥೆಗಳು ಅಥವಾ ಬ್ಯಾಂಕ್ ಅಥವಾ NBFC ಪರಿಶೀಲಿಸುವ ಮೊದಲ ವಿಷಯಗಳಲ್ಲಿ ಕ್ರೆಡಿಟ್ ಸ್ಕೋರ್ ಒಂದು. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ಅದನ್ನು ಆದಷ್ಟು ಬೇಗ ಸುಧಾರಿಸಲು ಸೂಚಿಸಬಹುದು. ಈ ಹಿನ್ನೆಲೆಯಲ್ಲಿ ಸಾಲ ನೀಡಲು ನಿರಾಕರಿಸಬಹುದು ಅಥವಾ ತಡ ಮಾಡಬಹುದು. 

ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ, ಹಣಕಾಸು ಸಂಸ್ಥೆಗಳು ನಿಮ್ಮ ಕ್ರೆಡಿಟ್ ಯೋಗ್ಯತೆ ಮತ್ತು ಮರುಪಾವತಿ ಸಾಮರ್ಥ್ಯದಂತಹ ಇತರೆ ವಿವರಗಳನ್ನು ನಿರ್ಧರಿಸುತ್ತಾರೆ. ಹೀಗಾಗಿ, ಒಳ್ಳೆ ಕ್ರೆಡಿಟ್ ಸ್ಕೋರ್ ನಿಮ್ಮ ಸಾಲ ಅಪ್ಲಿಕೇಶನ್ ಅನ್ನು ಅನುಮೋದಿಸುತ್ತದೆ ಹಾಗೂ ಸುಲಭವಾಗಿ ಸಾಲ ಪಡೆಯಬಹುದು.

ಆದರೂ ಕ್ರೆಡಿಟ್ ಸ್ಕೋರ್ ಹೊಸ ಸಾಲ ಪಡೆಯಲು ವ್ಯಕ್ತಿಯ ಸಾಮರ್ಥ್ಯಕ್ಕೆ ಪರಿಗಣಿಸಲಾಗುವ ಏಕೈಕ ಅಂಶವಲ್ಲ. ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಮೊದಲು ಹಣಕಾಸು ಸಂಸ್ಥೆಗಳು ಸಾಲ ಪಡೆಯಲು ಬಯಸುವವರ ಆದಾಯ, ಮರುಪಾವತಿಯ ಸಾಮರ್ಥ್ಯ, ಸಾಲ-ಆದಾಯ ಅನುಪಾತ, ಉದ್ಯೋಗ ಇತಿಹಾಸ, ವೃತ್ತಿ ಇತ್ಯಾದಿಗಳನ್ನೂ ಪರಿಗಣಿಸುತ್ತವೆ. 

ಒಳ್ಳೆಯ CIBIL ಸ್ಕೋರ್ ಅಗತ್ಯ ಸಾಲ ಪಡೆಯಲು ಮಾತ್ರವಲ್ಲ, ಸಾಲಕ್ಕೆ ಬಡ್ಡಿಯನ್ನೂ ಕಡಿಮೆ ಮಾಡಲೂ ನೆರವಾಗಬಹುದು. ಅನೇಕ ಬ್ಯಾಂಕುಗಳು/NBFC ಗಳು ಒಳ್ಳೆಯ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸವನ್ನು ಹೊಂದಿರುವ ಅರ್ಜಿದಾರರಿಗೆ ಆದ್ಯತೆ ಮೇರೆಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುತ್ತವೆ.

ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?: ಹೆಚ್ಚಿನ ಹಣಕಾಸು ಸಂಸ್ಥೆಗಳು CIBIL ಅಥವಾ ಯಾವುದೇ ಕ್ರೆಡಿಟ್ ಬ್ಯೂರೋದಿಂದ 760 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸುತ್ತವೆ. ನೀವು CIBIL ಸ್ಕೋರ್ 760 ಅಥವಾ ಅದಕ್ಕಿಂತ ಹೆಚ್ಚು ಮತ್ತು 900ಕ್ಕೆ ಹತ್ತಿರವಾಗಿದ್ದರೆ ಅಥವಾ ಕಾಪಾಡಿಕೊಂಡರೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನುಮೋದನೆ ಪಡೆಯುವುದು ಸುಲಭ. CIBIL ಸ್ಕೋರ್ 760 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅಥವಾ ಅದೇ ಸಮಯದಲ್ಲಿ ಮತ್ತೊಂದು ಬ್ಯೂರೋದಿಂದ 700ಕ್ಕಿಂತ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಬಹುದು. ಆದ್ದರಿಂದ, ನೀವೂ ಬಹು ಬ್ಯೂರೋಗಳಿಂದ ಕ್ರೆಡಿಟ್ ಸ್ಕೋರ್‌ ಮೇಲೆ ಕಣ್ಣಿಡಬೇಕು. ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಒಳ್ಳೇ ಅಭ್ಯಾಸ. 

ಕ್ರೆಡಿಟ್ ಸ್ಕೋರ್ ವ್ಯಾಪ್ತಿ ಮತ್ತು ಅರ್ಥ: ಸಾಲಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಮೌಲ್ಯಮಾಪನ ಮಾಡುವಾಗ ಹೆಚ್ಚಿನ ಹಣಕಾಸು ಸಂಸ್ಥೆಗಳು ಮತ್ತು ಬ್ಯೂರೋಗಳು ಪರಿಗಣಿಸುವ ಕ್ರೆಡಿಟ್ ಸ್ಕೋರ್ ವ್ಯಾಪ್ತಿ ಹೇಗಿರುತ್ತದೆ? 

<300 No Score/No History ನೀವು ಎಂದಿಗೂ ಸಾಲ ಅಥವಾ ಕ್ರೆಡಿಟ್ ಕಾರ್ಡ್ ತೆಗೆದು ಕೊಂಡಿಲ್ಲ ಮತ್ತು ಸಾಲದ ಇತಿಹಾಸವನ್ನು ಹೊಂದಿಲ್ಲವೆಂದರ್ಥ. ಮುಂದಿನ ದಿನಗಳಲ್ಲಿ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಅತ್ಯುತ್ತಮ ಕೊಡುಗೆಗಳಿಗಾಗಿ, ಕ್ರೆಡಿಟ್ ಸ್ಕೋರ್ ಹೆಚ್ಚುವಂತೆ ನೋಡಿಕೊಳ್ಳಬೇಕು. 

300-550 ತುಂಬಾ ಕಡಿಮೆ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎಂದರ್ಥ. ಆದರೆ, ಈ ಬಗ್ಗೆ ಸ್ಪಷ್ಟ ಜ್ಞಾನ ಹಾಗೂ ಶಿಸ್ತಿನೊಂದಿಗೆ, ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಿಕೊಂಡು ಬಲಪಡಿಸಿಕೊಳ್ಳಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಏಕೆ ಕಡಿಮೆ ಇದೆ ಎಂಬುದನ್ನು ನಿರ್ಧರಿಸಲು ನಿಮ್ಮ ಕ್ರೆಡಿಟ್ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಕ್ರಮ ತೆಗೆದುಕೊಳ್ಳಬೇಕು. 

551-620 ಸ್ಕೋರ್ ಇದ್ದರೆ ನೀವು ಇದುವರೆಗೆ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆದು, ಸಕಾಲಕ್ಕೆ ಮರು ಪಾವತಿಸಿ, ಒಳ್ಳೆಯ ವರ್ತನೆ ತೋರಿದ್ದೀರಿ ಎಂದರ್ಥ. ಇದರಿಂದ ಮತ್ತೆ ಸಾಲ ಪಡೆಯಲು ಹೆಲ್ಪ್ ಆಗುತ್ತೆ. 

621-700 ಸ್ಕೋರ್ ಇದ್ದರದು ಓಕೆ ಓಕೆ ಕ್ರೆಡಿಟ್ ಸ್ಕೋರ್. ಅಷ್ಟೇನೂ ಸ್ಟ್ರಾಂಗ್ ಅಲ್ಲವೆಂದರ್ಥ. ಅತ್ಯುತ್ತಮ ಕೊಡುಗೆಗಳಿಗೆ ಅರ್ಹರಾಗಲು, ನೀವು ನಿಮ್ಮ ಸ್ಕೋರ್ ಸುಧಾರಿಸುವಂತೆ ನೋಡಿಕೊಳ್ಳಬೇಕು. 

701-759 | ಒಳ್ಳೆಯ ಕ್ರೆಡಿಟ್ ಸ್ಕೋರ್. ಪಡೆದ ಸಾಲವನ್ನು ಅವದಿಯೊಳಗೆ ಪಾವತಿಸಿ, ನಿಷ್ಠೆ ತೋರಿದ್ದೀರಿ ಎಂದರ್ಥ. ಈ ಸ್ಕೋರ್ ಮೆಂಟೈನ್ ಮಾಡಿ ಬಿಟ್ಟರೆ ಹೆಚ್ಚಿನ ಬ್ಯಾಂಕುಗಳು ಮತ್ತು NBFC ಗಳು ನಿಮಗೆ ಸಾಲ ನೀಡಲು ಹೆಚ್ಚು ಯೋಚಿಸುವುದಿಲ್ಲ. 

760+ | ಅತ್ಯುತ್ತಮ ಕ್ರೆಡಿಟ್ ಸ್ಕೋರ್ . ಕ್ರೆಡಿಟ್‌ನೊಂದಿಗೆ ನಿಮ್ಮ ಟ್ರ್ಯಾಕ್ ರೆಕಾರ್ಡ್ ಅತ್ಯುತ್ತಮವಾಗಿದೆ ಎಂದರ್ಥ. ಈ ಸ್ಕೋರ್‌ನೊಂದಿಗೆ, ನೀವು ಹೆಚ್ಚಿನ ಬ್ಯಾಂಕುಗಳು ಮತ್ತು NBFC ಗಳ ಅರ್ಹತಾ ಮಾನದಂಡಗಳು ಪೂರೈಸುವುದು ಸುಲಭ. ಅತ್ಯುತ್ತಮ ಲಾಭವನ್ನೂ ಸುಲಭವಾಗಿ ಪಡೆಯಬಹುದು. ಈ ನಂಬರ್ ಮೆಂಟೈನ್ ಮಾಡಿದವರಿಗೆ ಸಾಲ ನೀಡಲು ಹಣಕಾಸು ಸಂಸ್ಥೆಗಳು ಹಿಂದು ಮುಂದು ನೋಡುವುದಿಲ್ಲ. 

ಮೇಲೆ ತಿಳಿಸಿದ ಕ್ರೆಡಿಟ್ ಸ್ಕೋರ್ ವ್ಯಾಪ್ತಿಯು ಕೇವಲ ನಿಮ್ಮ ತಿಳುವಳಿಕೆಗೆ ಮಾತ್ರ. ಆದರೆ, ಸಾಲ ನೀಡುವ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕಿನಿಂದ ಬ್ಯಾಂಕಿಗೆ ಅಥವಾ ಬ್ಯೂರೋದಿಂದ ಬ್ಯೂರೋಗೆ ಈ ಸಂಖ್ಯೆ ಬೇರೆ ಬೇರೆ ಆಗಿರುವ ಸಾಧ್ಯತೆ ಇದೆ.

ಕ್ರೆಡಿಟ್ ಸ್ಕೋರ್ ಲೆಕ್ಕಚಾರ ಹೇಗೆ?: ಈ ಕ್ರೆಡಿಟ್ ಸ್ಕೋರ್ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇವನ್ನು ಕ್ರೆಡಿಟ್ ಬ್ಯೂರೋ ಅಥವಾ ಕ್ರೆಡಿಟ್ ಮಾಹಿತಿ ಕಂಪನಿಗಳು (CIC) CIBIL ಸ್ಕೋರ್ ಲೆಕ್ಕಾಚಾರ ಮಾಡುವಾಗ ಮಾತ್ರ ಪರಿಗಣಿಸುತ್ತವೆ. ಈ ಅಂಶಗಳು ನಿಮ್ಮ ಹಿಂದಿನ ಕ್ರೆಡಿಟ್ ವರ್ತನೆಯನ್ನು ಅವಲಂಬಿಸಿರುತ್ತದೆ. ಪ್ರತಿಬಾರಿಯೂ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕುಗಳು ಮತ್ತು NBFCಗಳಿಗೆ ವರದಿ ಮಾಡಲಾಗುತ್ತದೆ.

ಕ್ರಿಡೆಟ್ ಸ್ಕೋರನ್ನು ಪ್ರಭಾವಿಸುವ ಅಂಶಗಳು:

1. ಸಾಲ ತೀರಿಸಿದ ಇತಿಹಾಸ: ಸಮಯಕ್ಕೆ ಸರಿಯಾದ ಪಾವತಿ ಕ್ರೆಡಿಟ್ ಸ್ಕೋರನ್ನು ಹೆಚ್ಚಿಸಬಹುದು ಹಾಗೂ ಅದನ್ನು ಗಮನಾರ್ಹವಾಗಿ ಸುಧಾರಿಸುವಂತೆ ಮಾಡುತ್ತದೆ. ಕಾಲ ಕಾಲಕ್ಕೆ EMIಗಳನ್ನು ಕಟ್ಟದಿರುವುದು ಅಥವಾ ತಡವಾಗಿ ಕಟ್ಟುವುದು CIBIL ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪ್ರಭಾವ ಬೀರುತ್ತದೆ. ನಿಮ್ಮ ಸಾಲ ಮರುಪಾವತಿ ಇತಿಹಾಸವು ನಿಮ್ಮ CIBIL ಸ್ಕೋರ್ ಲೆಕ್ಕಾಚಾರದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಮೊದಲ ಅಂಶ.

2. ಸಾಲ ಪಾವತಿಸುವ ಅವಧಿ: ಇಎಂಐ ಕಟ್ಟಲು ನೀವು ತೆಗೆದುಕೊಳ್ಳುವ ಸಮಯವೂ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನವೇ ಇಲ್ಲ. ನೀವು ದೀರ್ಘ ಅವಧಿಗೆ ಕ್ರೆಡಿಟ್ ಕಾರ್ಡ್ ಬಳಿಸಿದರೆ ಆಥವಾ ಸಾಲ ಕಟ್ಟಲು ಹೆಚ್ಚಿನ ಅವಧಿ ತೆಗೆದುಕೊಂಡರೆ, ಅದನ್ನು ಸೂಕ್ತ ಸಮಯದಲ್ಲಿ ಕಟ್ಟಿದರೆ, ಇದು ಶಿಸ್ತುಬದ್ಧ ಶಿಸ್ತಬದ್ಧ ಕ್ರೆಡಿಟ್ ವರ್ತನೆಯ ಸಂಕೇತೆ. ಆದರಿದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅಲ್ಪ ಸ್ವಲ್ಪ ಪ್ರಭಾವ ಬೀರೋದು ಗ್ಯಾರಂಟಿ. 

3. ಹಾರ್ಡ್ ಇನ್ಕ್ವೈರಿಗಳ ಸಂಖ್ಯೆ: ನೀವು ಪ್ರತಿಬಾರಿ ಹೊಸ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ, ಸಾಲ ಕೊಡುವ ಸಂಸ್ಥೆ ಅಥವಾ ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಬಗ್ಗೆ ವಿಚಾರಿಸುತ್ತಾರೆ. ಇಂಥ ವಿಚಾರಣೆಗಳನ್ನು ಹಾರ್ಡ್ ಇನ್ಕ್ವೈರಿ ಎನ್ನುತ್ತಾರೆ. ಹಾರ್ಡ್ ಇನ್ಕ್ವೈರಿ ಹೆಚ್ಚಾದರೆ ಕ್ರೆಡಿಟ್ ಸ್ಕೋರ್ ಮೇಲೆ ನಕರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಇದು ನಿಮಗೆ ಸಾಲದ ಅಗತ್ಯವೆಷ್ಟೆಂಬುದನ್ನು ತೋರಿಸುತ್ತದೆ. ಒಟ್ಟೊಟ್ಟಿಗೆ ಹಾರ್ಡ್ ಇನ್ಕ್ವೈರಿಗಳು ಕ್ರೆಡಿಟ್ ಸ್ಕೋರ್ ಮೇಲೆ ಗಮನಾರ್ಹವಾದ ಅಲ್ಪಾವಧಿಯ ಪ್ರಭಾವ ಬೀರಬಹುದು. ಆದರೂ, ಕ್ರೆಡಿಟ್ ವರದಿಯನ್ನು ಪರಿಶೀಲಿಸಿದರೆ ಅಥವಾ ಡೌನ್‌ಲೋಡ್ ಮಾಡಿದರೆ, ಅದನ್ನೂ ಸಾಫ್ಟ್ ಇನ್ಕ್ವೈರಿ ಎಂದು ಪರಿಗಣಿಸುತ್ತಾರೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

4. ಸಾಲದ ಬಳಕೆ: ಖರ್ಚು ಮಾಡುವ ಕ್ರೆಡಿಟ್ ಮೊತ್ತಕ್ಕೆ ಲಭ್ಯವಿರುವ ಸಾಲ ಮೊತ್ತವನ್ನು ಕ್ರೆಡಿಟ್ ಬಳಕೆ (Credit Utulity Ration-CUR) ಅನುಪಾತವೆನ್ನುತ್ತಾರೆ. ನಿಮ್ಮ CUR ಅನ್ನು ಲಭ್ಯವಿರುವ ಕ್ರೆಡಿಟ್ ಮಿತಿ ಶೇ.30ಕ್ಕಿಂತ ಕಡಿಮೆ ಇಡಲು ಶಿಫಾರಸು ಮಾಡುತ್ತಾರೆ. ಆದರೂ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರೆಗೆ ಹೆಚ್ಚಿನ CUR ಸಹ ಕ್ರೆಡಿಟ್ ಸ್ಕೋರ್ ಮೇಲೆ ತುಸು ಪ್ರಭಾವ ಬೀರಬಲ್ಲದು. ಆದಾಗ್ಯೂ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಆಗಾಗ್ಗೆ ಗರಿಷ್ಠಗೊಳಿಸುವುದು ಕ್ರೆಡಿಟ್ ಮೇಲಿನ ಹೆಚ್ಚಿನ ಅವಲಂಬನೆಯನ್ನು ಸೂಚಿಸುತ್ತದೆ. ಇದು ಕ್ರೆಡಿಟ್ ಸ್ಕೋರ್ ಮೇಲೆ ನೆಗಟಿವ್ ಇಂಪ್ಯಾಕ್ಟ್ ಬೀರಬಹುದು. 

5. ಕ್ರೆಡಿಟ್ ಮಿಕ್ಸ್: ವೈಯಕ್ತಿಕ, ಆಟೋ ಅಥವಾ ಗೃಹ ಸಾಲಗಳಂತಹ ವಿಭಿನ್ನ ರೀತಿಯ ಸಾಲಗಳನ್ನು ತೆಗೆದುಕೊಂಡಿದ್ದರೆ ಹಾಗೂ ಜವಾಬ್ದಾರಿಯುತವಾಗಿ ಸಾಲವನ್ನು ಮರುಪಾವತಿಸಿದ್ದರೆ, ಅದು ವಿಭಿನ್ನ ರೀತಿಯ ಕ್ರೆಡಿಟ್ ನಿಭಾಯಿಸುವ ಸಾಮರ್ಥ್ಯವನ್ನು ತೋರಿಸುತ್ತದೆ. ಕಾಲಾಂತರದಲ್ಲಿ ಒಳ್ಳೆಯ ಕ್ರೆಡಿಟ್ ಮಿಕ್ಸ್ ನಿರ್ಮಿಸುವುದು ಕ್ರೆಡಿಟ್ ಪ್ರೊಫೈಲ್ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಅಲ್ಲದೇ, ವೈಯಕ್ತಿಕ ಸಾಲಗಳಂತಹ ಹೆಚ್ಚಿನ ಭದ್ರತೆ ಇಲ್ಲದ ಸಾಲಗಳನ್ನು ತೆಗೆದುಕೊಂಡಿದ್ದರೆ, ಅದು ನಿಮಗೆ ಸಾಲದ ಅಗತ್ಯವನ್ನು ಮತ್ತು ಅದರ ಮೇಲೆ ಅತಿಯಾಗಿ ಅವಲಂಬಿತರು ಎಂದು ತೋರಿಸುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರಬಹುದು. ಆದರೆ ನಿಮ್ಮ ಮರುಪಾವತಿ ದಾಖಲೆ ಬಲವಾಗಿದ್ದರೆ, ಇದು ಗಮನಾರ್ಹವಾಗಿರುವ ಸಾಧ್ಯತೆ ಕಡಿಮೆ.

ಗಮನಿಸಿ, ಏಕಕಾಲದಲ್ಲಿ ಹೆಚ್ಚಿನ ಸಕ್ರಿಯ ಸಾಲಗಳನ್ನು ಹೊಂದಿರುವುದು ಹೆಚ್ಚಿನ 'EMI to NMI ಅನುಪಾತ'ಕ್ಕೆ ಕಾರಣವಾಗಬಹುದು, ಇದು ಹೆಚ್ಚಿನ ಕ್ರೆಡಿಟ್ ಪಡೆಯುವ ನಿಮ್ಮ ಅವಕಾಶಗಳನ್ನು ಕಡಿಮೆ ಮಾಡಬಹುದು. ಆದರೂ ಕ್ರೆಡಿಟ್ ಮಿಕ್ಸ್ ಕ್ರೆಡಿಟ್ ಸ್ಕೋರ್ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ. ಸಾಲ ತೀರಿಸಿದ ಹಿಸ್ಟರಿ ಚೆನ್ನಾಗಿದೆ ಅಂದ್ರೆ ಸಾಲ ನೀಡುವ ಸಂಸ್ಥೆಗಳು ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ.

ಇತರೆ ಅಂಶಗಳು: ನಿಮ್ಮ CIBIL ಸ್ಕೋರ್ ಲೆಕ್ಕಾಚಾರ ಮಾಡುವಲ್ಲಿ ಪ್ರಾಥಮಿಕವಾಗಿರುವ ಮೇಲಿನ 5 ಅಂಶಗಳ ಹೊರತಾಗಿ, ನಿಮ್ಮ ಕ್ರೆಡಿಟ್ ವರದಿಯಲ್ಲಿರುವ ದೋಷಗಳು, ಕ್ರೆಡಿಟ್ ಇತಿಹಾಸದ ಕೊರತೆ ಮತ್ತು ಸಾಲದ ಶೂರಿಟಿಯಾಗಿ ನಿಮ್ಮ ಪಾತ್ರವನ್ನು ನಿಭಾಯಿಸಲು ಅಸಮರ್ಥರಾಗುವುದು ಸೇರಿ ಇತರೆ ಅಂಶಗಳು ಕ್ರೆಡಿಟ್ ಸ್ಕೋರ್ ಮೇಲೆ ನಕರಾತ್ಮಕ ಪ್ರಭಾವ ಬೀರುವುದಿಲ್ಲ.

ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೇನು ಲಾಭ? : ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ಪರಿಗಣಿಸುವಾಗ ಸಾಲ ನೀಡುವ ಹಣಕಾಸು ಸಂಸ್ಥೆಗಳು ಪರಿಶೀಲಿಸುವ ಏಕೈಕ ಅಂಶ ಕ್ರೆಡಿಟ್ ಸ್ಕೋರ್ ಅಲ್ಲದಿದ್ದರೂ, ಇದು ಅತ್ಯಂತ ಅಗತ್ಯವಾದದ್ದು. ಉತ್ತಮ ಕ್ರೆಡಿಟ್ ಸ್ಕೋರ್ ಮೆಂಟೈನ್ ಮಾಡಿಕೊಳ್ಳುವುದು ಹಲವು ರೀತಿಯಲ್ಲಿ ನೆರವಾಗುತ್ತದೆ. ಅವುಗಳೆಂದರೆ:

  • ನಿಮ್ಮ ಸಾಲದ ಅರ್ಜಿಗಳನ್ನು ಅನುಮೋದಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ CIBIL ಸ್ಕೋರ್ ಹೆಚ್ಚಿನ ಸಾಲ ಅರ್ಹತೆ ಮತ್ತು ಸಾಲದಾತರಿಗೆ ಕಡಿಮೆ ಅಪಾಯವನ್ನು ಸೂಚಿಸುತ್ತದೆ
  • ನೀವು ಸಾಲಗಳ ಮೇಲೆ ಕಡಿಮೆ ಬಡ್ಡಿದರ ಪಡೆಯಬಹುದು.
  • ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಹಣಕಾಸು ಸಂಸ್ಥೆಗಳು ತ್ವರಿತವಾಗಿ ಅನುಮೋದಿಸುತ್ತವೆ.
  • ಅರ್ಹತೆ ಆಧಾರದ ಮೇಲೆ ಪೂರ್ವ-ಅನುಮೋದಿತ ಸಾಲ ಪಡೆಯಬಹುದು.
  • ಕ್ರೆಡಿಟ್ ಕಾರ್ಡ್‌ಗಳಲ್ಲಿ ಹೆಚ್ಚಿನ ಮಿತಿ ಪಡೆಯಬಹುದು
  • ಪ್ರಕ್ರಿಯೆ ಶುಲ್ಕ ಮತ್ತು ಇತರೆ ಶುಲ್ಕಗಳ ಮೇಲಿನ ರಿಯಾಯಿತಿ ಪಡೆಯೋದು ಸುಲಭ.

ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಹತೆ ಮೇಲೆ CIBIL ಸ್ಕೋರ್‌ನ ಪರಿಣಾಮ: ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಹತೆಯನ್ನು ನಿರ್ಣಯಿಸುವಾಗ ಕ್ರೆಡಿಟ್ ಸ್ಕೋರ್ ಒಂದು ಪ್ರಮುಖ ಅಂಶ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಉತ್ತಮ ನಿಯಮಗಳಲ್ಲಿ ಪಡೆಯುವ ಸಾಧ್ಯತೆ ಹೆಚ್ಚಿಸಿದರೆ, ಕಳಪೆ ಕ್ರೆಡಿಟ್ ಸ್ಕೋರ್ ಕ್ರೆಡಿಟ್ ಅನುಮೋದನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಸಾಮಾನ್ಯವಾಗಿ, ಅನೇಕ ಹಣಕಾಸು ಹಾಗೂ ಸಾಲ ನೀಡುವ ಸಂಸ್ಥೆಗಳು ಮತ್ತು ಕ್ರೆಡಿಟ್ ಕಾರ್ಡ್ ಪೂರೈಕೆದಾರರು 760 ಮತ್ತು ಅದಕ್ಕಿಂತ ಹೆಚ್ಚಿನ CIBIL ಸ್ಕೋರ್ ಇದ್ದರೆ ಅಗತ್ಯ ನಿಯತಾಂಕಗಳನ್ನು ಪೂರೈಸಲಾಗಿದೆ ಎಂದು ಪರಿಗಣಿಸಿ, ಹೆಚ್ಚಿನ ಅರ್ಜಿಗಳನ್ನು ಅನುಮೋದಿಸಲು ಉತ್ತಮವೆಂದು ಪರಿಗಣಿಸುತ್ತಾರೆ.

ಆದರೂ ಸ್ಕೋರ್ 900ಕ್ಕೆ ಹತ್ತಿರವಾದಷ್ಟೂ, ಕ್ರೆಡಿಟ್ ಅನುಮೋದನೆ ಸಾಧ್ಯತೆ ಹೆಚ್ಚು. ಹೆಚ್ಚಿನ ಸ್ಕೋರ್ ನಿಮಗೆ ತುಲನಾತ್ಮಕವಾಗಿ ಕಡಿಮೆ ದರಗಳಲ್ಲಿ ಮತ್ತು ಉತ್ತಮ ಸಾಲ ನಿಯಮಗಳಲ್ಲಿ ಸಾಲು ಪಡೆಯಲು ನೆರವಾಗುತ್ತದೆ. 

ಮರುಪಾವತಿಯಲ್ಲಿನ ಅಶಿಸ್ತು ಮತ್ತು ಸಾಲದ ಡೀಫಾಲ್ಟ್‌ಗಳಿಂದ ಕಳಪೆ ಕ್ರೆಡಿಟ್ ಸ್ಕೋರ್ ಭವಿಷ್ಯದಲ್ಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿಗಳು ತಿರಸ್ಕೃತವಾಗುವಂತೆ ಮಾಡಬಹುದು. ಕ್ರೆಡಿಟ್ ವರದಿಯಲ್ಲಿ ಸಮಸ್ಯೆ ಹೆಚ್ಚಾಗಿ, ಕ್ರೆಡಿಟ್ ಸ್ಕೋರ್ ಕಡಿಮೆಯಾಗಿ, ಕ್ರೆಡಿಟ್ ಅನುಮೋದನೆಯ ಸಾಧ್ಯತೆ ಕುಂದಬಹುದು.

ಸ್ಕೋರ್ ಕಡಿಮೆಯಾದಾಗ, ಮೊದಲು ಅದನ್ನು ಸುಧಾರಿಸುವತ್ತ ಗಮನಹರಿಸಬೇಕು. ಸ್ಕೋರ್ ಆರೋಗ್ಯಕರವಾದಾಗ ಮಾತ್ರ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಒಳ್ಳೇದು.

ಭಾರತದಲ್ಲಿ ಕ್ರೆಡಿಟ್ ಬ್ಯೂರೋಗಳು: ಟ್ರಾನ್ಸ್‌ಯೂನಿಯನ್ ಸಿಬಿಲ್ ಲಿಮಿಟೆಡ್ (ಹಿಂದೆ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಇದು ಸಿಬಿಲ್ ಸ್ಕೋರ್ ಅನ್ನು ಕೌಂಟ್ ಮಾಡುವ, ನಿರ್ವಹಿಸುವ ಮತ್ತು ಲೆಕ್ಕಾಚಾರ ಮಾಡುವ ಕ್ರೆಡಿಟ್ ಬ್ಯೂರೋ. ಟ್ರಾನ್ಸ್‌ಯೂನಿಯನ್ CIBIL ಹಳೆಯದಾಗಿದ್ದರೂ, ಭಾರತದ ಇತರೆ ಮೂರು ಕ್ರೆಡಿಟ್ ಬ್ಯೂರೋಗಳು ಎಕ್ಸ್‌ಪೀರಿಯನ್, CRIF ಹೈ ಮಾರ್ಕ್ ಮತ್ತು ಈಕ್ವಿಫ್ಯಾಕ್ಸ್‌ ಕ್ರೆಡಿಟ್ ವರದಿ ಸೇವೆಗಳನ್ನು ನೀಡುತ್ತವೆ. ಪ್ರತಿಯೊಂದು ಕ್ರೆಡಿಟ್ ಬ್ಯೂರೋ ಬ್ಯಾಂಕುಗಳು/NBFC ಗಳು ನಿಯಮಿತವಾಗಿ ಒದಗಿಸುವ ಕ್ರೆಡಿಟ್ ಮಾಹಿತಿ ಆಧಾರದ ಮೇಲೆ ಕ್ರೆಡಿಟ್ ಸ್ಕೋರ್ ಅನ್ನು ಸ್ವತಂತ್ರವಾಗಿ ಲೆಕ್ಕಾಚಾರ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಪ್ರತಿಯೊಂದು ಕ್ರೆಡಿಟ್ ಬ್ಯೂರೋ ತನ್ನದೇ ಆದ ಮಾದರಿ ಅಥವಾ ಅಲ್ಗಾರಿದಮ್ ಹೊಂದಿದೆ. ಆದ್ದರಿಂದ, ಪ್ರತಿ ಕ್ರೆಡಿಟ್ ಬ್ಯೂರೋದಲ್ಲಿಯೂ ಸ್ಕೋರ್ ಬದಲಾಗುತ್ತದೆ.

NRI ಗಳಿಗೆ ಕ್ರೆಡಿಟ್ ಸ್ಕೋರ್: NRI PAN ಕಾರ್ಡ್‌ಗಳನ್ನು ಹೊಂದಿರುವ ಮತ್ತು ಹಿಂದೆ ಕ್ರೆಡಿಟ್ ಸೌಲಭ್ಯಗಳನ್ನು ಪಡೆದಿರುವವರು ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತಾರೆ. ಇದರ ಲೆಕ್ಕಾಚಾರವು ಭಾರತೀಯ ಸಾಲಗಾರರಿಗೆ ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಮಾಡಲು ಬಳಸುವ ಅಲ್ಗಾರಿದಮ್ ಅನ್ನೇ ಆಧರಿಸಿದೆ. ಭವಿಷ್ಯದಲ್ಲಿ ಕ್ರೆಡಿಟ್ ಸೌಲಭ್ಯಗಳನ್ನು ಪಡೆಯಲು ಉದ್ದೇಶಿಸಿರುವ NRI ಗಳು ತಮ್ಮ ಸ್ಕೋರ್‌ನೊಂದಿಗೆ ನವೀಕೃತವಾಗಿರಬಹುದು ಮತ್ತು ಅಗತ್ಯವಿದ್ದರೆ ಅದನ್ನು ಸುಧಾರಿಸಲು ಕೆಲಸ ಮಾಡಬಹುದು. ಭಾರತದಲ್ಲಿ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್, ಇತರೆ ಮಾನದಂಡಗಳನ್ನು ಪೂರೈಸಿದರೆ ಸಾಲದ ಅರ್ಜಿಗಳನ್ನು ತೊಂದರೆಯಿಲ್ಲದೆ ಅನುಮೋದಿಸಬಹುದು.

ಕ್ರೆಡಿಟ್ ಸ್ಕೋರ್‌ಗಳನ್ನು ದೇಶಗಳ ನಡುವೆ ವರ್ಗಾಯಿಸಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಉದಾಹರಣೆಗೆ, ನೀವು ಭಾರತದಲ್ಲಿ 750 ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, USA ನಲ್ಲಿ ಬೇರೆ ಕ್ರೆಡಿಟ್ ಸ್ಕೋರ್ ಹೊಂದಿರಬಹುದು. ಸ್ಕೋರಿಂಗ್ ನಿರ್ದಿಷ್ಟ ದೇಶದ ಕ್ರೆಡಿಟ್ ನಡವಳಿಕೆಯನ್ನು ಆಧರಿಸಿದೆ ಮತ್ತು ಎಲ್ಲ ದೇಶಗಳ ಸಾಮೂಹಿಕ ಕ್ರೆಡಿಟ್ ನಡವಳಿಕೆಯನ್ನು ಆಧರಿಸಿಲ್ಲ. ಆದ್ದರಿಂದ, ನೀವು ನಿರ್ದಿಷ್ಟ ದೇಶದಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಭಾರತದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಬೇಕು. 

ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಲು 6 ಕಾರಣಗಳು

  • ಕಡಿಮೆ ಕ್ರೆಡಿಟ್ ಸ್ಕೋರ್‌ಗೆ ಹಲವಾರು ಕಾರಣಗಳಿರಬಹುದು. ಏನೇನಿರಬಹುದು?
  • ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಾಲದ EMI ಗಳ ತಪ್ಪಿದ ಅಥವಾ ತಡ ಪಾವತಿಗಳು
  • ನಿಯಮಿತವಾಗಿ ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದು ಅಥವಾ ಹೆಚ್ಚಿನ ಕ್ರೆಡಿಟ್ ಬಳಕೆ ಅನುಪಾತ ಹೊಂದಿರುವುದು
  • ಕ್ರೆಡಿಟ್ ವರದಿ ದೋಷಗಳು ಸ್ಕೋರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು
  • ಸಾಲಕ್ಕಾಗಿ ಆಗಾಗ್ಗೆ ಅಥವಾ ಬಹು ಹಾರ್ಡ್ ಎಂಕ್ವೈರಿ ಕ್ರೆಡಿಟ್ ಸ್ಕೋರ್ ಅನ್ನು ಹಾನಿಗೊಳಿಸಬಹುದು
  • ಇತರೆ ಸಾಲದ ಖಾತೆಗಳು ತುಲನಾತ್ಮಕವಾಗಿ ಹೊಸದಾಗಿದ್ದರೆ ಹಳೆಯ ಕ್ರೆಡಿಟ್ ಖಾತೆಯನ್ನು ಮುಚ್ಚುವುದು (ಇದು ಕ್ರೆಡಿಟ್ ಇತಿಹಾಸದ ಅವಧಿಯನ್ನು ಕಡಿತಗೊಳಿಸುತ್ತದೆ)
  • ಸಾಲ ಅಥವಾ ಕ್ರೆಡಿಟ್ ಕಾರ್ಡ್ ಖಾತೆಯನ್ನು ಪೂರ್ಣವಾಗಿ ಪಾವತಿಸುವ ಮತ್ತು ಖಾತೆಯನ್ನು ಮುಚ್ಚುವ ಬದಲು ಅದನ್ನು ಇತ್ಯರ್ಥಪಡಿಸುವುದು

ಕ್ರೆಡಿಟ್ ಸ್ಕೋರ್ ಸುಧಾರಿಸುವುದು ಹೇಗೆ?: ಕಡಿಮೆ ಕ್ರೆಡಿಟ್ ಸ್ಕೋರ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಅನುಮೋದಿಸಲು ಕಷ್ಟವಾಗಬಹುದು. ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡು, ಕಟ್ಟುನಿಟ್ಟಾಗಿ ಪಾಲಿಸಬೇಕು:

  • ಸಾಲದ ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಎಂಥದ್ದೇ ಸಂದರ್ಭ ಬಂದರೂ ಸಾಲ ಪಾವತಿ ತಪ್ಪಿಸಿಕೊಳ್ಳಬಾರದು. 
  • ಕ್ರೆಡಿಟ್ ಮೇಲಿನ ಅತಿ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಸಾಲ ಬಳಕೆಯ ಅನುಪಾತವನ್ನು ಕಡಿಮೆ ಮಾಡಿಕೊಳ್ಳಬೇಕು. ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ನಿಯಮಿತವಾಗಿ ಗರಿಷ್ಠಗೊಳಿಸಿದರೆ, ಕ್ರೆಡಿಟ್ ವರದಿಯಲ್ಲಿ ದೋಷಗಳಿದ್ದಲ್ಲಿ, ಕ್ರೆಡಿಟ್ ಬ್ಯೂರೋದಿಂದ ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕು. 
  • ನಿಯಮಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಕುಸಿತವಿದ್ದರೆ, ದೋಷಗಳಿಗಾಗಿ ವರದಿಯನ್ನು ಪರಿಶೀಲಿಸಿ.
  • ಬಹು ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಆಗಾಗ್ಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ. ನೀವು ಮತ್ತೆ ಕ್ರೆಡಿಟ್‌ಗೆ ಅರ್ಜಿ ಸಲ್ಲಿಸುವ ಮೊದಲು ಇತ್ತೀಚಿಗೆ ಪಡೆದ ಸಾಲದ ಲಾಭ ಪಡೆಯಲು ಇನ್ನಾರು ತಿಂಗಳಾದರೂ ಕಾಯುವುದೊಳ್ಳೆಯದು. 
  • ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಕ್ಲೋಸ್ ಆಗದಂತೆ ನೋಡಿಕೊಳ್ಳಿ. ದೀರ್ಘ ಕ್ರೆಡಿಟ್ ಇತಿಹಾಸವು ಸಾಲ ನೀಡುವ ಸಂಸ್ಥೆಗಳು ಹೆಚ್ಚಿನ ವಿಶ್ವಾಸದಿಂದ ಕ್ರೆಡಿಟ್-ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳುತ್ತದೆ. 
  • ಸುರಕ್ಷಿತ (ಗೃಹ ಸಾಲ, ಕಾರು ಸಾಲ, ಇತ್ಯಾದಿ) ಮತ್ತು ಅಸುರಕ್ಷಿತ ಕ್ರೆಡಿಟ್ (ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್, ಇತ್ಯಾದಿ) ಗಳ ಬ್ಯಾಲೆನ್ಸ್ ಇರುವಂತೆ ಎಚ್ಚರ ವಹಿಸಿ. 
  • ಕ್ರೆಡಿಟ್ ಸ್ಕೋರ್ ಅನ್ನು ಗಮನಾರ್ಹವಾಗಿ ಸುಧಾರಿಸಲು ಕ್ರೆಡಿಟ್ ಅಡ್ವೈಸರಿ ಸರ್ವೀಸಸ್‌ ತಜ್ಞರ ಸಲಹೆಯನ್ನು ಪಡೆದರೊಳಿತು.
  • CIBIL ಸ್ಕೋರ್ ಅನ್ನು ಏಕೆ ಪರಿಶೀಲಿಸಬೇಕು?: ಎಕ್ಸ್‌ಪೀರಿಯನ್, CRIF ಹೈ ಮಾರ್ಕ್ ಮತ್ತು ಈಕ್ವಿಫ್ಯಾಕ್ಸ್‌ನಂತಹ ಇತರ ಕ್ರೆಡಿಟ್ ಬ್ಯೂರೋಗಳಿಂದ ಕ್ರೆಡಿಟ್ ಸ್ಕೋರ್‌ಗಳನ್ನು ಪರಿಶೀಲಿಸಿ, ಮೇಲ್ವಿಚಾರಣೆ ಮಾಡಬಹುದು ಮತ್ತು ಹೋಲಿಸಬಹುದು. 

ಕಸ್ಟಮೈಸ್ ಕೊಡುಗೆ ಪಡೆಯಿರಿ: ಆರೋಗ್ಯಕರ ಕ್ರೆಡಿಟ್ ಪ್ರೊಫೈಲ್‌ಗಳನ್ನು ಹೊಂದಿರುವವರು ಭಾರತದ ಉನ್ನತ ಬ್ಯಾಂಕುಗಳು ಮತ್ತು NBFC ಗಳಿಂದ ಉತ್ತಮ ಪೂರ್ವ-ಅನುಮೋದಿತ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಕೊಡುಗೆಗಳನ್ನು ಪರಿಶೀಲಿಸಬಹುದು ಮತ್ತು ಪಡೆಯಬಹುದು. ಈ ಕೊಡುಗೆಗಳು ಕನಿಷ್ಠ ದಾಖಲೆಗಳನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ತ್ವರಿತ ವಿತರಣೆ ಮತ್ತು ವಿತರಣೆಯನ್ನು ಹೊಂದಿರುತ್ತವೆ. 

FAQ ಗಳು

1.ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸುವುದು ಹೇಗೆ?

ವಿವಿಧ ಕ್ರೆಡಿಟ್ ಬ್ಯೂರೋಗಳಿಂದ ಆನ್‌ಲೈನ್‌ನಲ್ಲಿ ಕ್ರೆಡಿಟ್ ಸ್ಕೋರ್ ಪರಿಶೀಲಿಸಬಹುದು. ಪ್ರತಿ ತಿಂಗಳೂ ಕ್ರೆಡಿಟ್ ಸ್ಕೋರ್ ಅನ್ನು ಪರೀಶಿಲಿಸುವುದು ಅತ್ಯುತ್ತಮವಾದ ಅಭ್ಯಾಸ. RBI ನಿರ್ದೇಶನದಂತೆ, ಕ್ರೆಡಿಟ್ ಬ್ಯೂರೋಗಳು ತಮ್ಮ ಕ್ರೆಡಿಟ್ ಮಾಹಿತಿಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ವರ್ಷಕ್ಕೊಮ್ಮೆ FFCR (ಸಂಪೂರ್ಣ ಉಚಿತ ಕ್ರೆಡಿಟ್ ವರದಿ) ಗೆ ಪ್ರವೇಶ ನೀಡುತ್ತವೆ. CIBIL ನ ಅಧಿಕೃತ ವೆಬ್‌ಸೈಟ್‌ನಿಂದ ವರ್ಷಕ್ಕೊಮ್ಮೆ ಉಚಿತ ಕ್ರೆಡಿಟ್ ವರದಿ ಕೇಳಬಹುದು. 

750 ರ CIBIL ಸ್ಕೋರ್ ಉತ್ತಮವೆಂದು ಪರಿಗಣಿಸಲಾಗಿದೆಯೇ?
750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸುವುದು ಸಾಮಾನ್ಯವಾಗಿ ಉತ್ತಮವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ನಿಮ್ಮ ಹಣಕಾಸನ್ನು ನಿರ್ವಹಿಸುವಾಗ ನೀವು ಶಿಸ್ತನ್ನು ತೋರಿಸಿದ್ದೀರಿ ಮತ್ತು ಅದು ನಿಮ್ಮನ್ನು ಕ್ರೆಡಿಟ್‌ಗೆ ಅರ್ಹ ಗ್ರಾಹಕರನ್ನಾಗಿ ಮಾಡುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಉತ್ತಮ CIBIL ಸ್ಕೋರ್ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ಕ್ರೆಡಿಟ್ ಉತ್ಪನ್ನಗಳಿಗೆ ಅನುಮೋದನೆ ಪಡೆಯುವ ಅವಕಾಶಗಳನ್ನು ಸುಧಾರಿಸುತ್ತದೆ.

ಕ್ರೆಡಿಟ್ ಸ್ಕೋರ್ ಏಕೆ ಮುಖ್ಯ?
ಕ್ರೆಡಿಟ್ ಸ್ಕೋರ್ ಸಾಲ ನೀಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುತ್ತವೆ. ಕ್ರೆಡಿಟ್ ಸ್ಕೋರ್ ಆಧರಿಸಿ, ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ಅನುಮೋದಿಸುವ ಅಪಾಯವನ್ನು ನಿರ್ಣಯಿಸುವುದು ಅವರಿಗೆ ಸ್ಪಷ್ಟವಾಗುತ್ತದೆ. 900 ಕ್ಕಿಂತ ಹತ್ತಿರದ ಸ್ಕೋರ್ ನಆದ್ಯತೆಯ ಅರ್ಜಿದಾರರನ್ನಾಗಿ ಮಾಡುತ್ತದೆ, ಆದರೆ 700 ಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ಸಾಲ ಸಿಗುವುದು ಸ್ವಲ್ಪ ಕಷ್ಟವಾಗಬಹುದು. 

ವಿದ್ಯಾರ್ಥಿಗಳು ಮತ್ತು ಯುವ ವಯಸ್ಕರು ಕ್ರೆಡಿಟ್ ಇತಿಹಾಸ ಮೆಂಟೈನ್ ಮಾಡೋದು ಹೇಗೆ?
18 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಯುವ ವಯಸ್ಕರು ಕ್ರೆಡಿಟ್ ಇತಿಹಾಸವನ್ನು ಹೊಂದಿಲ್ಲದಿರಬಹುದು. ಒಂದನ್ನು ನಿರ್ಮಿಸಲು, ಅವರು ಸ್ಥಿರ ಠೇವಣಿ ಬೆಂಬಲಿತ ಸುರಕ್ಷಿತ ಕ್ರೆಡಿಟ್ ಕಾರ್ಡ್ ಅಥವಾ ಸುಲಭವಾಗಿ ಪಡೆಯಬಹುದಾದ ಸಾಲದೊಂದಿಗೆ ಪ್ರಾರಂಭಿಸಬಹುದು. ಶಿಸ್ತುಬದ್ಧ ಕ್ರೆಡಿಟ್ ನಡವಳಿಕೆಯನ್ನು ಅನುಸರಿಸುವುದು ಭವಿಷ್ಯದಲ್ಲಿ ಸ್ಟ್ರಾಂಗ್ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸುವಂತೆ ಮಾಡುತ್ತದೆ.

ವೈಯಕ್ತಿಕ ಸಾಲಕ್ಕೆ ಕನಿಷ್ಠ CIBIL ಸ್ಕೋರ್ ಎಷ್ಟಿರಬೇಕು?
ವೈಯಕ್ತಿಕ ಸಾಲ ಅಥವಾ ವ್ಯಾಪಾರ ಸಾಲಗಳಂತಹ ಅಸುರಕ್ಷಿತ ಸಾಲಗಳಿಗೆ ಅನುಮೋದನೆಗೆ ಅಗತ್ಯವಿರುವ ವೈಯಕ್ತಿಕ ಸಾಲಕ್ಕೆ ಕನಿಷ್ಠ CIBIL ಸ್ಕೋರ್ ಒಬ್ಬ ಸಾಲದಾತರಿಂದ ಇನ್ನೊಬ್ಬರಿಗೆ ಬದಲಾಗುತ್ತದೆ.

ಆದಾರೂ CIBIL ಸ್ಕೋರ್ 750 ಮತ್ತು ಅದಕ್ಕಿಂತ ಹೆಚ್ಚಿನದಾಗಿದ್ದರೆ, ಸಾಲವನ್ನು ಅನುಮೋದಿಸುವುದು ಸುಲಭ. CIBIL ಸ್ಕೋರ್ 700 ಆಗಿದ್ದರೂ ಅನೇಕ ಸಾಲದಾತರು ವೈಯಕ್ತಿಕ ಸಾಲ ಅರ್ಜಿಗಳನ್ನು ಅನುಮೋದಿಸುತ್ತಾರೆ. ಆದರೆ ಅವರು ಸಾಲದ ಮೇಲೆ ಹೆಚ್ಚಿನ ಬಡ್ಡನು ಪಾವತಿಸಬೇಕಾಗಬಹುದು.

ಬೆೇರೆಯವರ CIBIL ಸ್ಕೋರ್ ಪರಿಶೀಲಿಸಬಹುದೇ?
ಇಲ್ಲ. ನಿಮ್ಮ CIBIL ಸ್ಕೋರ್ ಗೌಪ್ಯ ವೈಯಕ್ತಿಕ ಮಾಹಿತಿಯಾಗಿದ್ದು, ನೀವು ಅಥವಾ ಕೆಲವು ಅಧಿಕೃತ ಸಂಸ್ಥೆಗಳು (ನಿಮ್ಮ ಒಪ್ಪಿಗೆ ಮೇರೆಗೆ) ಮಾತ್ರ ಅದನ್ನು ಪರಿಶೀಲಿಸಬಹುದು. ಈ ಅಧಿಕೃತ ಸಂಸ್ಥೆಗಳು ನಿಮ್ಮ ಕ್ರೆಡಿಟ್ ವರದಿಯನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಪಡೆದುಕೊಳ್ಳಬಹುದು. ಉದಾಹರಣೆಗೆ, ನೀವು ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ. ನಿಮ್ಮ CIBIL ಸ್ಕೋರ್/ವರದಿಯನ್ನು ಪ್ರವೇಶಿಸಬಹುದಾದ ಕೆಲವು ಅಧಿಕೃತ ಘಟಕಗಳಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಸೇರಿವೆ, ಅವರು ವಿಶ್ವಾಸಾರ್ಹ CIBIL ಸದಸ್ಯರೂ ಹೌದು.