Asianet Suvarna News Asianet Suvarna News

ಅತೀ ಕಡಿಮೆ ಅವಧಿಯಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದ 'ಭಾರತ್ ದಾಲ್'; ಈ ಬ್ರ್ಯಾಂಡ್ ಕಡಲೆಬೇಳೆಗೆ ಭಾರೀ ಡಿಮ್ಯಾಂಡ್

ಕೇಂದ್ರ ಸರ್ಕಾರ ಇತ್ತೀಚೆಗೆ ಕಡಿಮೆ ದರದಲ್ಲಿ 'ಭಾರತ್ ಅಕ್ಕಿ' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೆಲವು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದಿರುವ 'ಭಾರತ್ ದಾಲ್' ಬ್ರ್ಯಾಂಡ್ ಕಡಿಮೆ ಅವಧಿಯಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಈ ಬ್ರ್ಯಾಂಡ್ ಕಡಲೆಬೇಳೆಗೆ ಹೆಚ್ಚಿನ ಬೇಡಿಕೆ ಕೂಡ ಇದೆ. 

What is Bharat Dal This Modi government initiative becomes the best selling pulse brand check details here anu
Author
First Published Feb 7, 2024, 5:20 PM IST

ನವದೆಹಲಿ (ಫೆ.7): ಹೆಚ್ಚುತ್ತಿರುವ ಆಹಾರ ಧಾನ್ಯಗಳ ಬೆಲೆ ನಿಯಂತ್ರಿಸುವ ಪ್ರಯತ್ನದ ಅಂಗವಾಗಿ ಕೇಂದ್ರ ಸರ್ಕಾರ 'ಭಾರತ್ ದಾಲ್' ಬ್ರ್ಯಾಂಡ್ ಹೆಸರಿನಲ್ಲಿ ಕಡಲೆ ಬೇಳೆಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು. ಒಂದು ಕೆಜಿ ಕಡಲೆ ಬೇಳೆ ಪ್ಯಾಕ್ ಗೆ 60ರೂ. ಹಾಗೂ 30ಕೆಜಿ ಪ್ಯಾಕ್ ಗೆ ಪ್ರತಿ ಕೆಜಿಗೆ 55ರೂ. ದರದಲ್ಲಿ ಮಾರಾಟ ಮಾಡುತ್ತಿದೆ. ಅತೀ ಕಡಿಮೆ ಅವಧಿಯಲ್ಲಿ 'ಭಾರತ್ ದಾಲ್' ದೇಶದ ಅತ್ಯಧಿಕ ಮಾರಾಟವಾಗುವ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿದೆ. ಎನ್ ಎಎಫ್ ಇಡಿ, ಎನ್ ಸಿಸಿಎಫ್, ಕೇಂದ್ರೀಯ ಭಂಡಾರ್ ಹಾಗೂ ಸಫಲ್ ಮುಂತಾದ ಸಂಸ್ಥೆಗಳು ನಿರ್ವಹಿಸುವ ವಿವಿಧ ರಿಟೇಲ್ ಮಳಿಗೆಗಳಲ್ಲಿ ಭಾರತ್ ದಾಲ್ ಲಭ್ಯವಿದೆ. ಇನ್ನು ವಿವಿಧ ಇ-ಕಾಮರ್ಸ್ ತಾಣಗಳಿಂದ ಕೂಡ ಇದನ್ನು ಖರೀದಿ ಮಾಡಬಹುದಾಗಿದೆ. ಇನ್ನು ಇದು ಸುಲಭವಾಗಿ ಲಭ್ಯವಾಗಬೇಕು ಎಂಬ ಕಾರಣದಿಂದ ರಾಜ್ಯ ಸರ್ಕಾರಗಳಿಗೆ ಇದನ್ನು ಖರೀದಿಸಿ ಸಹಕಾರಿ ಸಂಸ್ಥೆಗಳು ಅಥವಾ ನಿಗಮಗಳ ಮೂಲಕ ಪಡಿತರ ವಿತರಿಸುವ ಕೇಂದ್ರಗಳಲ್ಲೇ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. 

ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಕ್ರಮದ ಭಾಗವಾಗಿ ಸರ್ಕಾರ ಕಡಲೆ ಬೇಳೆ, ತೊಗರಿಬೇಳೆ, ಉದ್ದಿನಬೇಳೆ ಹಾಗೂ ಮಸೂರ್ ದಾಲ್ ಮುಂತಾದ ಬೇಳೆಗಳ ದಾಸ್ತಾನನ್ನು ಸರ್ಕಾರ ಹೊಂದಿದೆ. ಆ ಮೂಲಕ ಬೇಳೆಗಳ ಬೆಲೆಗಳನ್ನು ಸ್ಥಿರವಾಗಿಡಲು ಪ್ರಯತ್ನಿಸುತ್ತಿದೆ. ಇನ್ನು ಈ ದಾಸ್ತಾನನ್ನು ಬೆಲೆಗಳ ನಿಯಂತ್ರಣಕ್ಕೆ ಕ್ರಮಬದ್ಧವಾಗಿ ಬಿಡುಗಡೆ ಮಾಡಲಾಗುತ್ತಿದೆ. ಬೆಲೆಗಳ ಸ್ಥಿರತೆಗೆ ಸರ್ಕಾರ ತೊಗರಿಬೇಳೆ ಹಾಗೂ ಉದ್ದಿನಬೇಳೆ ಮೇಲಿನ ಆಮದು ಸುಂಕನ್ನು 2024ರ ಮಾರ್ಚ್ 31ರ ತನಕ ತೆಗೆದಿದೆ. ಇನ್ನು ಮಸೂರ್ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಕೆ ಮಾಡಿದ್ದು, ಆ ಮೂಲಕ ದೇಶೀಯ ಲಭ್ಯತೆ ಹೆಚ್ಚಿಸುವ ಜೊತೆಗೆ ಬೆಲೆಗಳನ್ನು ಕ್ರಮಬದ್ಧವಾಗಿಡಲು ಪ್ರಯತ್ನಿಸುತ್ತಿದೆ. ಹೆಚ್ಚುವರಿಯಾಗಿ, ತೊಗರಿಬೇಳೆ ಹಾಗೂ ಉದ್ದಿನಬೇಳೆ ದಾಸ್ತಾನು ಮಿತಿಗಳನ್ನು ಅವಶ್ಯ ಸರಕುಗಳ ಕಾಯ್ದೆ 1955ರ ಅಡಿಯಲ್ಲಿ ನಿಯಂತ್ರಣದಲ್ಲಿಡುವ ಮೂಲಕ ಹೆಚ್ಚುವರಿ ಸಂಗ್ರಹಣೆಯನ್ನು ತಪ್ಪಿಸಿದೆ. 

ಬಡ ಜನರಿಗೆ ಕೇಂದ್ರದ ಬಂಪರ್ ಕೊಡುಗೆ: ಭಾರತ್ ಬ್ರಾಂಡ್ ಅಕ್ಕಿ ಕೆಜಿಗೆ 29ರೂ. ತೊಗರಿಬೇಳೆ 60ರೂ.ಗೆ ಮಾರಾಟ!

ಭಾರತ್ ದಾಲ್ ಯಶಸ್ಸಿನ ಕುರಿತು ಸಂತಸ ವ್ಯಕ್ತಪಡಿಸಿರುವ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಸರ್ಕಾರದ 'ಭಾರತ್' ಬ್ರ್ಯಾಂಡ್ ಕಡಲೆ ಬೇಳೆ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿದೆ. 2023ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಕಡಲೆಬೇಳೆ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಯ ಶೇ.25ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇದಕ್ಕೆ ಇತರ ಬ್ರ್ಯಾಂಡ್ ಗಳ ಬೆಲೆಗೆ ಹೋಲಿಸಿದರೆ 'ಭಾರತ್ ಬ್ರ್ಯಾಂಡ್ ' ಬೆಲೆ ಕಡಿಮೆಯಿರೋದೆ ಕಾರಣ. ಭಾರತ್ ಬ್ರ್ಯಾಂಡ್ ಕಡಲೆ ಬೇಳೆ ಬೆಲೆ ಕೆಜಿಗೆ 60ರೂ. ಇದೆ. ಅದೇ ಬೇರೆ ಬ್ರ್ಯಾಂಡ್ ಗಳ ಬೆಲೆ ಕೆಜಿಗೆ 80ರೂ. ಇದೆ. 

ಇನ್ನು ಸಿಂಗ್ ಭಾರತ್ ಬ್ರ್ಯಾಂಡ್ ಕಡಲೆಬೇಳೆ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ದೇಶಾದ್ಯಂತ ಕಡಲೆಬೇಳೆ ತಿಂಗಳ ಬಳಕೆಯ ಬಹುಪಾಲನ್ನು ಭಾರತ್ ಬ್ರ್ಯಾಂಡ್ ಆವರಿಸಿಕೊಂಡಿದೆ. ತಿಂಗಳಿಗೆ ಒಟ್ಟು  1.8 ಲಕ್ಷ ಟನ್ ಕಡಲೆಬೇಳೆ ಬಳಕೆಯಾಗುತ್ತಿದೆ. ಮಾರುಕಟ್ಟೆಗೆ ಬಿಡುಗಡೆಯಾದ ದಿನದಿಂದ ಇಲ್ಲಿಯ ತನಕ ಅಂದಾಜು 2.28 ಲಕ್ಷ ಟನ್ ಭಾರತ್ ಕಡಲೆಬೇಳೆ ಮಾರಾಟವಾಗಿದೆ. ಅಂದರೆ ತಿಂಗಳಿಗೆ ಅಂದಾಜು 45,000 ಟನ್. 

ಭಾರತ್‌ ಬ್ರಾಂಡ್‌ನಡಿ ಕೇಂದ್ರದಿಂದ ಸಿಗಲಿದೆ 29 ರು.ಗೆ 1 ಕೆ.ಜಿ. ಅಕ್ಕಿ

ಪ್ರಾರಂಭದಲ್ಲಿ ಭಾರತ್ ಬ್ರ್ಯಾಂಡ್ ಕಡಲೆಬೇಳೆ ದೇಶದ 100 ರಿಟೇಲ್ ಅಂಗಡಿಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ, ಈಗ ದೇಶದ 21 ರಾಜ್ಯಗಳ 139 ನಗರಗಳಲ್ಲಿನ 13,000 ಮೊಬೈಲ್ ಹಾಗೂ ರಿಟೇಲ್ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಈ ಕ್ರಮವು ಬೇಳೆಕಾಳುಗಳ ಹಣದುಬ್ಬರ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಕೇಂದ್ರ ಸರ್ಕಾರ ಇತ್ತೀಚೆಗೆ 'ಭಾರತ್ ಅಕ್ಕಿ' ಬಿಡುಗಡೆ ಮಾಡಿದೆ. ಪ್ರಾರಂಭದಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 'ಭಾರತ್ ಅಕ್ಕಿ' ಬ್ರ್ಯಾಂಡ್ ಅಡಿಯಲ್ಲಿ ರಿಟೇಲ್ ಅಂಗಡಿಗಳಿಗೆ ವಿತರಿಸಲಾಗಿದೆ. 

Follow Us:
Download App:
  • android
  • ios