ಬೆಂಗಳರು(ನ.09):  ಕೇಂದ್ರ ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ), ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ರೂ 517 ಕೋಟಿ  ನಿವ್ವಳ ಲಾಭ ಗಳಿಸಿದೆ.

ಮೊದಲ ತ್ರೈಮಾಸಿಕದಲ್ಲಿನ ರೂ 333 ಕೋಟಿ ಮೊತ್ತದ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 55.3ರಷ್ಟು ಹೆಚ್ಚಳ ದಾಖಲಿಸಿದೆ. ನಿವ್ವಳ ಬಡ್ಡಿ ವರಮಾನವು ದ್ವಿತೀಯ ತ್ರೈಮಾಸಿಕದಲ್ಲಿ  ಶೇ 6.1ರಷ್ಟು ಹೆಚ್ಚಳಗೊಂಡು ರೂ 6,933 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಅರ್ಧವಾರ್ಷಿಕ ಅವಧಿಯಲ್ಲಿನ ರೂ 615 ಕೋಟಿ ನಷ್ಟಕ್ಕೆ ಹೋಲಿಸಿದರೆ ಈ ಬಾರಿ ಸೆಪ್ಟೆಂಬರ್‍ಗೆ ಕೊನೆಗೊಂಡ ಅರ್ಧವಾರ್ಷಿಕ ಅವಧಿಯಲ್ಲಿ ರೂ 849 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬಡ್ಡಿ ವರಮಾನವು ಹಿಂದಿನ ವರ್ಷದ ಇದೇ ಅವಧಿಯಲ್ಲಿನ ರೂ 11,402 ಕೋಟಿಗೆ ಹೋಲಿಸಿದರೆ  ಶೇ 11.4ರಷ್ಟು ಹೆಚ್ಚಳಗೊಂಡು ರೂ 12,696 ಕೋಟಿಗೆ ತಲುಪಿದೆ.

ಬ್ಯಾಂಕ್‍ನ ಒಟ್ಟಾರೆ ವಹಿವಾಟು ವಾರ್ಷಿಕ ಶೇ 3.1ರಷ್ಟು ಏರಿಕೆಯಾಗಿ ಈಗ ರೂ 15,37,160 ಕೋಟಿಗಳಿಗೆ ತಲುಪಿದೆ. ಠೇವಣಿಗಳು ಶೇ 4ರಷ್ಟು ಹೆಚ್ಚಳಗೊಂಡು ರೂ 8,86,098 ಕೋಟಿಗಳಿಗೆ ತಲುಪಿದೆ. ರಿಟೇಲ್ ಮುಂಗಡಗಳು ವಾರ್ಷಿಕ ಶೇ 7.8ರಷ್ಟು ಹೆಚ್ಚಳ ಸಾಧಿಸಿ ರೂ 1,17,21 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಸಾಲ ನೀಡಿಕೆಯಲ್ಲಿನ ರಿಟೇಲ್, ಕೃಷಿ ಮತ್ತು ‘ಎಂಎಸ್‍ಎಂಇ’ಗಳ ಪಾಲು ವಾರ್ಷಿಕ ಶೇ 1.61ರಷ್ಟು ಹೆಚ್ಚಳಗೊಂಡು ಈಗ ಶೇ 55.7ಕ್ಕೆ ತಲುಪಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬ್ಯಾಂಕ್‍ನ ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್‍ಎನ್‍ಪಿಎ) ವರ್ಷದ ಹಿಂದಿನ ಶೇ 6.40ರಿಂದ ಶೇ 4.13ಕ್ಕೆ ಇಳಿದಿದೆ. ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‍ಪಿಎ) ವರ್ಷದ ಹಿಂದಿನ ಶೇ 15.75 ರಿಂದ ಶೇ 14.71ಕ್ಕೆ ಇಳಿದಿದೆ. ಇದರಿಂದ ಭವಿಷ್ಯದ ವೆಚ್ಚಗಳಿಗಾಗಿ ತೆಗೆದು ಇರಿಸಬೇಕಾದ ಮೊತ್ತವು ಕಡಿಮೆಯಾಗಿದೆ ಎಂದು ಬ್ಯಾಂಕ್‍ನ ನಿರ್ದೇಶಕ ಮಂಡಳಿಯು ತಿಳಿಸಿದೆ.

ಬ್ಯಾಂಕ್‍ನ ನಿರ್ದೇಶಕ ಮಂಡಳಿಯು, 2020-21ನೇ ಹಣಕಾಸು ವರ್ಷದ ಅರ್ಧ ವಾರ್ಷಿಕ ಮತ್ತು ದ್ವಿತೀಯ ತ್ರೈಮಾಸಿಕದ ಲೆಕ್ಕಪತ್ರಗಳಿಗೆ ಶುಕ್ರವಾರ ಇಲ್ಲಿ ಅನುಮೋದನೆ ನೀಡಿದೆ.