ಈ ಹಠ ಬೇಡ ಟ್ರಂಪ್ ಎಂದ ಅಮೆರಿಕ ಕಂಪನಿಗಳು! ಹೊಸ ವಲಸೆ ನೀತಿ ಮರುಪರಾಮರ್ಶೆಗೆ ಆಗ್ರಹ! ಅಮೆರಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುವ ಎಚ್ಚರಿಕೆ! ಟ್ರಂಪ್ ಗೆ 59 ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪತ್ರ

ವಾಷಿಂಗ್ಟನ್(ಆ.24): ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಾರಿಗೆ ತಂದಿರುವ ಕಠಿಣ ವಲಸೆ ನೀತಿಯಿಂದ ದೇಶದ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಅಮೆರಿಕದ ಪ್ರತಿಷ್ಠಿತ ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಆ್ಯಪಲ್‌ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿಮ್‌ ಕುಕ್‌, ಜೆಪಿ ಮಾರ್ಗನ್‌ ಚೇಸ್‌ ಮತ್ತು ಕಂಪನೀಸ್‌ನ ಜ್ಯಾಮಿ ಡೈಮನ್‌, ಅಮೆರಿಕನ್ ಏರ್‌ಲೈನ್ಸ್‌ನ ಡಗ್‌ ಪಾರ್ಕರ್‌ ಸೇರಿದಂತೆ ಇತರ 59 ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನೂತನ ಕಠಿಣ ವಲಸೆ ನೀತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಸಂಬಂಧ ಪತ್ರ ಬರೆದು ತಮ್ಮ ಆತಂಕವನ್ನು ವಿವರಿಸಿದ್ದು, ಟ್ರಂಪ್ ಈ ವಲಸೆ ನೀತಿ ಕುರಿತು ಮರುಪರಾಮರ್ಶೆ ಮಾಡಿದ್ದರೆ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರಸಕ್ತ ಟ್ರಂಪ್ ವಲಸೆ ನೀತಿಯಿಂದಾಗಿ ಅಮೆರಿಕದ ಕಂಪನಿಗಳಿಗೆ ಮಾನವ ಸಂಪನ್ಮೂಲದ ಕೊರತೆಯಾಗುತ್ತಿದ್ದು, ಇದರಿಂದ ಕಂಪನಿಗಳ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಈ ಪತ್ರದಲ್ಲಿ ಅಳಲು ತೋಡಿಕೊಳ್ಳಲಾಗಿದೆ.

ಬಹುತೇಕ ಭಾರತೀಯ ಉದ್ಯೋಗಿಗಳ ಮೇಲೆಯೇ ಅವಲಂಬಿತವಾಗಿರುವ ಈ ಬೃಹತ್ ಖಾಸಗಿ ಕಂಪನಿಗಳು, ಹೊಸ ವಲಸೆ ನೀತಿಯಿಂದಾಗಿ ಇವರನ್ನು ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ 59 ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಟ್ರಂಪ್ ಗೆ ಪತ್ರ ಬರೆದು ತಮ್ಮ ವಲಸೆ ನೀತಿ ಮರುಪರಾಮರ್ಶೆ ನಡೆಸುವಂತೆ ಕೋರಿದ್ದಾರೆ.