Muslim Businessman in India: ಭಾರತದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಅನೇಕ ಮುಸ್ಲಿಂ ಕುಟುಂಬಗಳಿವೆ. ಕಠಿಣ ಪರಿಶ್ರಮ ಮತ್ತು ವ್ಯಾಪಾರ ಕೌಶಲ್ಯದಿಂದಾಗಿ ಅವರು ಈ ಸ್ಥಾನಮಾನವನ್ನು ಗಳಿಸಿದ್ದಾರೆ. ಈ ಲೇಖನದಲ್ಲಿ ಭಾರತದ ಟಾಪ್ 5 ಶ್ರೀಮಂತ ಮುಸ್ಲಿಂ ಕುಟುಂಬಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ನವದೆಹಲಿ: ಭಾರತದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುತ್ತಾರೆ. ಭಾರತ ಎಲ್ಲಾ ಧರ್ಮದ ಜನತೆಗೆ ಆಸರೆ ನೀಡಿದೆ. ಭಾರತದ ಅನೇಕ ಮುಸ್ಲಿಂ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಿದ್ದು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ವ್ಯವಹಾರ ಕೌಶಲ್ಯದ ಆಧಾರದ ಮೇಲೆ ಮುಸ್ಲಿಂ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿದ್ದಾರೆ. ಭಾರತದಲ್ಲಿರುವ ಈ ಮುಸ್ಲಿಂ ಕುಟುಂಬಗಳು ಜಾಗತೀಕ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡು ಸಾವಿರಾರು ಕೋಟಿ ರೂ. ಸಂಪತ್ತಿನ ಮಾಲೀಕರಾಗಿದ್ದಾರೆ. ಈ ಲೇಖನದಲ್ಲಿ ಭಾರತದ ಟಾಪ್ ಐದು ಶ್ರೀಮಂತ ಮುಸ್ಲಿಂ ಕುಟುಂಬಗಳು ಯಾವವು ಎಂದು ಹೇಳುತ್ತಿದ್ದೇವೆ.

1. ಅಜೀಂ ಪ್ರೇಮ್‌ಜಿ

ಭಾರತದ ಪ್ರತಿಯೊಬ್ಬರಿಗೂ ಅಜೀಂ ಪ್ರೇಮ್‌ಜಿ ಯಾರು ಎಂಬ ವಿಷಯ ಗೊತ್ತಿದೆ. ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿದ ಅಜೀಂ ಪ್ರೇಮ್‌ಜಿ ಪ್ರಸಿದ್ಧರಾಗಿದ್ದಾರೆ. ವಿಪ್ರೋ ಲಿಮಿಟೆಡ್‌ನ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಅಜೀಂ ಪ್ರೇಮ್‌ಜಿ ಅವರನ್ನು ದೇಶದ ಲೋಕೋಪಕಾರಿ ಎಂದು ಕರೆಯಲಾಗುತ್ತದೆ. ವಿಪ್ರೋ ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿದ್ದು, ತಮ್ಮ ಆದಾಯದ ಅತಿದೊಡ್ಡ ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಾರೆ. ವಿಶೇಷವಾಗಿ ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಮೀಸಲಿಡುತ್ತಾರೆ. ಫೋರ್ಬ್ಸ್ ವರದಿ ಪ್ರಕಾರ, ಅಜೀಂ ಪ್ರೇಮ್‌ಜಿ ಅವರ ಒಟ್ಟು ಸಂಪತ್ತು 12.2 ಬಿಲಿಯನ್ ಯುಎಸ್ ಡಾಲರ್‌ಗಳು ಅಂದರೆ 1 ಲಕ್ಷ ಕೋಟಿ ರೂ. ಆಗಿದೆ. ಹುರುನ್ ಇಂಡಿಯಾದ 2021ರ ಪಟ್ಟಿ ಪ್ರಕಾರ, ಅಜೀಂ ಪ್ರೇಮ್‌ಜಿ 9713 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ವರದಿಗಳ ಪ್ರಕಾರ, ಅಜೀಂ ಪ್ರೇಮ್‌ಜಿ ದಿನಕ್ಕೆ 27 ಕೋಟಿ ರೂ. ಹಣವನ್ನು ದಾನದ ರೂಪದಲ್ಲಿ ನೀಡುತ್ತಾರೆ.

2. ಎಂ.ಎ. ಯೂಸುಫ್ ಅಲಿ ಕುಟುಂಬ (ಲುಲು ಗ್ರೂಪ್)

ಲುಲು ಗ್ರೂಪ್ ಇಂಟರ್ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಎ. ಯೂಸುಫ್ ಅಲಿ ಕುಟುಂಬ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಕೇರಳ ಮೂಲದ ಯೂಸುಫ್ ಅಲಿ ತಮ್ಮ ಕಂಪನಿಯನ್ನು ಅಬುಧಾಬಿಯಲ್ಲಿ ಆರಂಭಿಸುತ್ತಾರೆ. ನಂತರ ಮಧ್ಯಪ್ರಾಚ್ಯ, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಲುಲು ಗ್ರೂಪ್ ಉದ್ಯಮವನ್ನು ವಿಸ್ತರಿಸಿದ್ದಾರೆ. ಫೋರ್ಬ್ಸ್ ಪ್ರಕಾರ, ಯೂಸುಫ್ ಅಲಿ ಅವರ ನಿವ್ವಳ ಮೌಲ್ಯ $7.4 ಬಿಲಿಯನ್ (ಸುಮಾರು ರೂ. 65,150 ಕೋಟಿ) ಆಗಿದೆ. ಕೇರಳದಲ್ಲಿ ದೊಡ್ಡ ಶಾಪಿಂಗ್ ಮಾಲ್‌ ನಿರ್ಮಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ಯೂಸುಫ್‌ ಅಲಿ ಕುಟುಂಬ ಕಲ್ಪಿಸಿದೆ.

3. ಯೂಸುಫ್ ಹಮೀದ್

ಸಿಪ್ಲಾ ಫಾರ್ಮಾಸ್ಯುಟಿಕಲ್ಸ್‌ ಭಾರತದ ಪ್ರಮುಖ ಔಷಧ ಕಂಪನಿಗಳಲ್ಲಿ ಒಂದಾಗಿದೆ. ಸಿಪ್ಲಾ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ಮಾಲೀಕರೇ ಈ ಯೂಸುಫ್ ಹಮೀದ್. ಕೈಗೆಟುಕುವ ಔಷಧಿಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಯೂಸುಫ್ ಹಮೀದ್, ವಿಜ್ಞಾನಿ ಮತ್ತು ಕೈಗಾರಿಕೋದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಎಚ್‌ಐವಿ/ಏಡ್ಸ್ ಚಿಕಿತ್ಸೆಗೆ ಕೊಡುಗೆ ನೀಡಿದ್ದಾರೆ. ಸಿಪ್ಲಾ ಫಾರ್ಮಾಸ್ಯುಟಿಕಲ್ಸ್‌ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ವಿಶ್ವದಾದ್ಯಂತ ಮಾರುಕಟ್ಟೆಯನ್ನು ಹೊಂದಿದೆ. ವರದಿಗಳ ಪ್ರಕಾರ, ಯೂಸುಫ್ ಹಮೀದ್ ಅವರ ನಿವ್ವಳ ಮೌಲ್ಯ ಸುಮಾರು $2.6 ಬಿಲಿಯನ್ (ಸುಮಾರು ರೂ.21,000 ಕೋಟಿ) ಎಂದು ಅಂದಾಜಿಸಲಾಗಿದೆ. 2005ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಯೂಸುಫ್‌ ಹಮೀದ್ ಅವರನ್ನು ಗೌರವಿಸಿತ್ತು.

4. ರಫೀಕ್ ಮಲಿಕ್

ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ರಫೀಕ್ ಮಲೀಕ್, ಮೆಟ್ರೋ ಬ್ರಾಂಡ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಮೆಟ್ರೋ ಶೂಸ್‌ ಭಾರತದ ಪಾದರಕ್ಷೆಗಳ ದೈತ್ಯ ಕಂಪನಿಯಾಗಿದೆ. ಮೆಟ್ರೋ, ಮೋಚಿ, ವಾಕ್‌ವೇ, ಡಾ ವಿನ್ಸಿ ಮತ್ತು ಫಿಟ್‌ಫ್ಲಾಪ್‌ನಂತಹ ಬ್ರ್ಯಾಂಡ್‌ಗಳಿಗೆ ರಫೀಕ್ ಮಲೀಕ್ ಅವರ ಕಂಪನಿ ಹೆಸರುವಾಸಿಯಾಗಿದೆ. ಫೋರ್ಬ್ಸ್ ಪ್ರಕಾರ, ರಫೀಕ್ ಮಲಿಕ್ ಅವರ ನಿವ್ವಳ ಮೌಲ್ಯ $2.1 ಬಿಲಿಯನ್ (ಸುಮಾರು ರೂ. 17,160 ಕೋಟಿ) ಆಗಿದೆ. 2023ರಲ್ಲಿ ರಫೀಕ್ ಮಲೀಕ್ ಅವರು ಫೋರ್ಬ್ಸ್‌ನ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1434 ನೇ ಸ್ಥಾನದಲ್ಲಿದ್ದರು. 2022 ರಲ್ಲಿ ಭಾರತದ 89 ನೇ ಶ್ರೀಮಂತ ವ್ಯಕ್ತಿಯಾಗಿದ್ದರು.

5. ಡಾ. ಆಜಾದ್ ಮೂಪೆನ್

ದುಬೈನಲ್ಲಿ ವಾಸವಾಗಿರುವ ಡಾ. ಅಜಾದ್ ಮೂಪೆನ್, ಭಾರತೀಯ ಮೂಲದ ಉದ್ಯಮಿ ಮತ್ತು ವೈದ್ಯರಾಗಿದ್ದಾರೆ. 1953ರಲ್ಲಿ ಕೇರಳದ ಕಲ್ಪಕಂಚೇರಿಯಲ್ಲಿ ಜನಿಸಿದ ಅಜಾದ್ ಮೂಪೆನ್ ಕ್ಯಾಲಿಕಟ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದುಕೊಂಡಿದ್ದಾರೆ. 1987ರಲ್ಲಿ ಕೆಲಸಕ್ಕಾಗಿ ದುಬೈಗೆ ತೆರಳಿದ ಡಾ. ಅಜಾದ್ ಮೂಪೆನ್ ಜೀವನವೇ ಬದಲಾಯ್ತು. ಫೋರ್ಬ್ಸ್ ಪ್ರಕಾರ, 2024ರಲ್ಲಿ ಅಜಾದ್ ಮೂಪೆನ್ ನಿವ್ವಳ ಆದಾಯ 1 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಅಂದ್ರೆ ಸುಮಾರು 8300 ರಿಂದ 8400 ಕೋಟಿ ರೂ. ಆಗುತ್ತದೆ.