ನವದೆಹಲಿ(ಮಾ.05): ನಿಮ್ಮ ಬ್ಯಾಂಕ್‌ ಅಕೌಂಟ್ ಗೆ ಪ್ಯಾನ್ ಲಿಂಕ್ ಇನ್ನೂ ಮಾಡಿಲ್ವಾ?. ಬೇಗ ಮಾಡಿ ಯಾಕಂದ್ರೆ ಇದ್ರಿಂದ ನಿಮಗೆ ಭಾರೀ ಲಾಭವಾಗಲಿದೆ.

ಏನು ಲಾಭ ಅಂತೀರಾ? ಬ್ಯಾಂಕ್ ಅಕೌಂಟ್ ಗೆ ಪ್ಯಾನ್ ಲಿಂಕ್ ಮಾಡುವುದರಿಂದ ನಿಮಗೆ ಆದಾಯ ತೆರಿಗೆ ಹಣ ಮರುಪಾವತಿಯಾಗುತ್ತದೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬ್ಯಾಂಕ್ ಖಾತೆಗಳಿಗೆ ಪ್ಯಾನ್ ಸಂಖ್ಯೆಯನ್ನು ನೇರವಾಗಿ ಸಂಪರ್ಕಿಸಿ ತೆರಿಗೆ ಮರುಪಾವತಿಯನ್ನು ಪಡೆಯಬಹುದು ಎಂದು ಹೇಳಿದೆ.

ಮಾರ್ಚ್ 1ರಿಂದ ಈ ನಿಯಮ ಜಾರಿಗೆ ಬಂದಿದ್ದು, ಆದಾಯ ತೆರಿಗೆ ಮೊತ್ತ ಬ್ಯಾಂಕ್ ಖಾತೆಗೆ ಇ-ವರ್ಗಾವಣೆ ಮೂಲಕ ಮರುಪಾವತಿಯಾಗಲಿದ್ದು, ಅದಕ್ಕೆ ಪ್ಯಾನ್ ಸಂಖ್ಯೆಯನ್ನು ನೀಡಬೇಕು ಎಂದು ಇಲಾಖೆ ಹೇಳಿದೆ.

ಆದಾಯ ತೆರಿಗೆ ವಿವರ ಸಲ್ಲಿಸಲು ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಕಡ್ಡಾಯ ಮಾಡಿದ್ದು, ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಜೋಡಿಸಲು ಮಾ.೩೧ ಕೊನೆಯ ದಿನಾಂಕ ಎಂದು ಹೇಳಿದೆ.

SMS ಮೂಲಕ ಜೋಡಣೆ: 

ಎಸ್ಎಂಎಸ್ ಸೌಲಭ್ಯಗಳ ಮೂಲಕ ಬಳಕೆದಾರರು ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬಹುದಾಗಿದೆ. ಐ ಟಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಬಳಕೆದಾರರು 567678 ಅಥವಾ 56161 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬಹುದು. ಎಸ್ಎಂಎಸ್ UIDPAN <12-digit Aadhaar> <10-digit PAN> ರೂಪದಲ್ಲಿರಬೇಕು.