ರಾಯ್‌ಪುರ[ಜು.20]: ಕಳೆದ ವರ್ಷ ದೇಶದಲ್ಲೇ 2ನೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಛತ್ತೀಸ್‌ಗಢದ ಅಂಬಿಕಾಪುರ ಇದೀಗ, ದೇಶದಲ್ಲೇ ಮೊದಲ ಗಾರ್ಬೇಜ್‌ ಹೋಟೆಲ್‌ ಆರಂಭಿಸಲು ಮುಂದಾಗಿದೆ.

ನಗರದಲ್ಲಿನ ತ್ಯಾಜ್ಯದ ಸೂಕ್ತ ನಿರ್ವಹಣೆ ನಿಟ್ಟಿನಲ್ಲಿ ಸ್ವತಃ ಅಂಬಿಕಾಪುರ ಪಾಲಿಕೆಯೇ, ನಗರದ ಬಸ್‌ ನಿಲ್ದಾಣದ ಬಳಿ ಹೋಟೆಲ್‌ ಆರಂಭಿಸಲು ನಿರ್ಧರಿಸಿದೆ.. ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು, ಕಸ ತಂದುಕೊಟ್ಟವರಿಗೆ ತಿಂಡಿ, ಊಟ ನೀಡಲಾಗುವುದು. 500 ಗ್ರಾಂ ಕಸ ತಂದುಕೊಟ್ಟರೆ ತಿಂಡಿ ಮತ್ತು 1 ಕೆಜಿ ಕಸ ತಂದುಕೊಟ್ಟರೆ ಊಟ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಂದ ಹಾಗೆ ಸದ್ಯಕ್ಕೆ ಈ ಯೋಜನೆ ನಗರದಲ್ಲಿ ಚಿಂದಿ ಆಯುವವರಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಚಿಂದಿ ಆಯುವವರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶವನ್ನೂ ಪಾಲಿಕೆ ಹೊಂದಿದೆ.

ಕಳೆದ ವರ್ಷ ದೇಶದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಇಂದೋರ್‌ ನಂತರದ ಸ್ಥಾನವನ್ನು ಅಂಬಿಕಾಪುರ ಪಡೆದುಕೊಂಡಿತ್ತು. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆಯನ್ನೂ ನಿರ್ಮಿಸುವ ಮೂಲಕ ಇತರೆ ನಗರಗಳಿಗೆ, ತ್ಯಾಜ್ಯ ನಿರ್ವಹಣೆಗೆ ಹೊಸ ದಾರಿಯನ್ನು ಅಂಬಿಕಾಪುರ ತೋರಿಸಿಕೊಟ್ಟಿದೆ.