ಸಿಂಗಾಪುರದಲ್ಲಿರುವ 'ದ ರಿಸರ್ವ್' ಎಂಬ ಖಾಸಗಿ ಭದ್ರತಾ ಭಂಡಾರವು ಶ್ರೀಮಂತರಿಗೆ ಹೊಸ ಚಿನ್ನದ ಸಂಗ್ರಹಣಾ ಕೇಂದ್ರವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಅಪನಂಬಿಕೆ ಮತ್ತು ನೈಜ ಚಿನ್ನದ ಮೇಲಿನ ನಂಬಿಕೆ ಈ ಬದಲಾವಣೆಗೆ ಕಾರಣವಾಗಿದೆ.

ಸಿಂಗಾಪುರ (ಜೂನ್ 4): ವಿಶ್ವದ ಅತ್ಯಂತ ಶ್ರೀಮಂತರಿಗೆ ನಂಬಿಕೆಯಾಗುತ್ತಿರುವ ಹೊಸ ಚಿನ್ನದ ಭಂಡಾರ ಈಗ ಭಾರತದ ಪಕ್ಕದಲ್ಲಿಯೇ ಇದೆ. ಅಂದರೆ ಇದು ಸಿಂಗಪೂರಿನಲ್ಲಿ ಇದೆ. ರಾಜಕೀಯ ಸ್ಥಿರತೆ, ಭದ್ರತೆಯ ದೃಢ ಮೂಲಸೌಕರ್ಯ ಮತ್ತು ಆರ್ಥಿಕ ಭದ್ರತೆಗೆ ಹೆಸರಾದ ಸಿಂಗಾಪುರ ಈಗ ಬಂಗಾರವನ್ನು ಸಂಗ್ರಹಣೆ ಮಾಡುವ ಹೊಸ 'ಸ್ವಿಟ್ಜರ್‌ಲ್ಯಾಂಡ್' ಆಗಿ ರೂಪುಗೊಂಡಿದೆ.

ಸಿಂಗಾಪುರದ 'ಚಾಂಗೀ' ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಕಟ್ಟಡ 'ದ ರಿಸರ್ವ್' (The Reserve) ಎಂಬ ಹೆಸರಿನ 6 ಅಂತಸ್ತಿನ ಭದ್ರತಾ ಭಂಡಾರದಲ್ಲಿ ಈಗ ಸುಮಾರು ₹12,500 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಹೂಡಿಕೆಗಳನ್ನು ಭದ್ರವಾಗಿ ಇಡಲಾಗಿದೆ. ಈ ಕಟ್ಟಡದಲ್ಲಿ ಅತ್ಯಾಧುನಿಕ ಸಿಸಿಟಿವಿ, ನಿಗಾ ತಂತ್ರಜ್ಞಾನ, ಸಾವಿರಾರು ಡಿಪಾಸಿಟ್ ಬಾಕ್ಸ್‌ಗಳು ಮತ್ತು ಭಾರಿ ಸಂಗ್ರಹ ಕೋಣೆಗಳಿವೆ.

ಬ್ಯಾಂಕ್‌ಗಳ ಮೇಲೆ ನಂಬಿಕೆ ಇಲ್ಲದ ಶ್ರೀಮಂತರ ಹೊಸ ಆಯ್ಕೆ:

'ದ ರಿಸರ್ವ್' ಸ್ಥಾಪಕರಾದ ಗ್ರೆಗರ್ ಗ್ರೆಗರ್ಸನ್ ಅವರ ಮಾತುಗಳ ಪ್ರಕಾರ, ಜನವರಿ 2025ರಿಂದ ಏಪ್ರಿಲ್‌ವರೆಗೆ ಚಿನ್ನ ಮತ್ತು ಬೆಳ್ಳಿ ಸಂಗ್ರಹದ ಬೇಡಿಕೆ 88% ಹೆಚ್ಚಾಗಿದೆ. ಇದಕ್ಕೆ ಜೊತೆಗೆ ಚಿನ್ನದ ಬಾರ್‌ಗಳ ಮಾರಾಟ 200% ಏರಿಕೆಯಾಗಿದೆ. ಇದು ಇತ್ತೀಚಿನ ಯುಎಸ್ ಬ್ಯಾಂಕಿಂಗ್ ಸಂಕಷ್ಟಗಳ ಪರಿಣಾಮವಾಗಿದೆ. ವಿಶೇಷವಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವಾದ ಬಳಿಕ ಈ ಭಯ ಹೆಚ್ಚಾಗಿದೆ.

ಯಾಕೆ ಬ್ಯಾಂಕ್‌ಗಳ ಬದಲು ಖಾಸಗಿ ಭಂಡಾರ?

ಲೇಬನಾನ್, ಅಲ್ಜೀರಿಯಾ ಮತ್ತು ಈಜಿಪ್ಟ್‌ ಮುಂತಾದ ದೇಶಗಳ ಶ್ರೀಮಂತರಿಗೆ ತಮ್ಮದೇ ದೇಶದ ಬ್ಯಾಂಕ್ ವ್ಯವಸ್ಥೆಯ ಮೇಲೆ ನಂಬಿಕೆ ಕುಂದಿದೆ. ಇವರು ಈಗ ETF ಅಥವಾ ಮ್ಯೂಚುವಲ್ ಫಂಡ್‌ಗಳಂತಹ 'ಪೇಪರ್ ಗೋಲ್ಡ್' ಬದಲು ನೈಜ ಚಿನ್ನವನ್ನು ಖಾಸಗಿ ಭಂಡಾರಗಳಲ್ಲಿ ಇಡುವುದು ಹೆಚ್ಚು ಸುರಕ್ಷಿತವೆಂದು ನಂಬುತ್ತಿದ್ದಾರೆ. ನೈಜ ಚಿನ್ನದಲ್ಲಿ 'ಕೌಂಟರ್‌ಪಾರ್ಟಿ ರಿಸ್ಕ್' ಕಡಿಮೆಯಿದೆ. ಅಂದರೆ ಯಾರಾದರೂ ಮೂರನೇ ವ್ಯಕ್ತಿಯ ವಿಫಲತೆಗೆ ಹಣ ನಷ್ಟವಾಗುವ ಸಾಧ್ಯತೆ ಕಡಿಮೆ ಇದೆ.

ಸಿಂಗಾಪುರದ ಪ್ರಮುಖ ಆಕರ್ಷಣೆಗಳು:

  • ರಾಜಕೀಯವಾಗಿ ಸ್ಥಿರ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರ
  • ಚಿನ್ನದ ಆಮದು–ರಫ್ತುಗೆ ಅನುಕೂಲಕರವಾದ ಪ್ರಮುಖ ವಿಮಾನ ಸಾರಿಗೆ ಕೇಂದ್ರ
  • ವಿಶ್ವದ ಶ್ರೀಮಂತರಿಗೆ ಹೊಸ ಭದ್ರತಾ ಗುರಿ
  • ಬ್ಯಾಂಕ್‌ಗಳಿಗೆ ಮಿಕ್ಕಂತೆ ನೇರವಾಗಿ ಚಿನ್ನವನ್ನೇ ನಿಗದಿತ ಸ್ಥಳದಲ್ಲಿ ಇರಿಸಿಕೊಳ್ಳುವ ಸುರಕ್ಷತೆ

ವಿಶ್ವ ಚಿನ್ನ ಪರಿಷತ್‌ನ ಜಾನ್ ರೀಡ್ ಹೇಳುವಂತೆ, 'ಜಾಗತಿಕ ಮಟ್ಟದ ಶ್ರೀಮಂತ ಹೂಡಿಕೆದಾರರು ಈಗ ಬ್ಯಾಂಕ್‌ಗಳಿಗಿಂತ ಖಾಸಗಿ ಭಂಡಾರಗಳತ್ತ ಓಡುತ್ತಿದ್ದಾರೆ. ಇದು ಜಾಗತಿಕ ವಿಶ್ವಾಸ ಬದಲಾವಣೆಯ ಸೂಚನೆ' ಆಗಿದೆ. ಬ್ಯಾಂಕ್‌ಗಿಂತ ಹೆಚ್ಚಾಗಿ ಈ ಭಂಡಾರದಲ್ಲಿ ತಮ್ಮ ಚಿನ್ನಕ್ಕೆ ಭದ್ರತೆ ಸಿಗಲಿದೆ ಎಂಬ ಆಶಾವಾದವನ್ನು ಹೊಂದಿದ್ದಾರೆ.

ಭದ್ರತೆ, ನಂಬಿಕೆ ಮತ್ತು ಸ್ವತಂತ್ರ ಸಂಪತ್ತಿನ ನಿಯಂತ್ರಣ, ಇವು ಸಿಂಗಪೂರನ್ನು ಜಾಗತಿಕ ಶ್ರೀಮಂತರ ಚಿನ್ನ ಸಂಗ್ರಹದ ಕೇಂದ್ರವಾಗಿಸಿವೆ. ವಿಶ್ವದ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆ ನಡುವೆ, 'ದ ರಿಸರ್ವ್' ಮಾದರಿಯ ಭದ್ರತಾ ಭಂಡಾರಗಳು ಶ್ರೀಮಂತರ ಹೊಸ ಆಶ್ರಯ ಸ್ಥಳವಾಗಿವೆ.