*ಎನ್‌ಎಸ್‌ಇ ಅಧ್ಯಕ್ಷೆ ಆಗಿದ್ದ ವೇಳೆ ಭಾರೀ ಅಕ್ರಮ ನಡೆಸಿದ ಆರೋಪ*ಮಾಜಿ ಸಿಇಒ ಚಿತ್ರಾ ರಾಮಕೃಷ್ಣ, ಅಧಿಕಾರಿ ಸುಬ್ರಮಣಿಯನ್‌ ಮನೆ ಮೇಲೆ ದಾಳಿ 

ನವದೆಹಲಿ/ಮುಂಬೈ (ಫೆ.18): 300 ಲಕ್ಷ ಕೋಟಿ ರು.ಮಾರುಕಟ್ಟೆಮೌಲ್ಯ ಹೊಂದಿರುವ ರಾಷ್ಟ್ರೀಯ ಷೇರುಪೇಟೆ (NSE)ಯನ್ನು ಹಿಮಾಲಯದಲ್ಲಿದ್ದ ‘ನಿಗೂಢ ಯೋಗಿ’ಯ ಅಣತಿಯಂತೆ ಮುನ್ನಡೆಸುತ್ತಿದ್ದ ಗಂಭೀರ ಆರೋಪಕ್ಕೆ ತುತ್ತಾಗಿರುವ ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ (Chitra Ramkrishna) ಮತ್ತು ಗ್ರೂಪ್‌ ಆಪರೇಟಿಂಗ್‌ ಆಫೀಸರ್‌ ಆನಂದ್‌ ಸುಬ್ರಮಣಿಯನ್‌ಗೆ ಆದಾಯ ತೆರಿಗೆ ಇಲಾಖೆ ಶಾಕ್‌ ನೀಡಿದೆ. ಅವರ ಮುಂಬೈ ಮನೆ ಮನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.ಈ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್‌, ‘ನಿಗೂಢ ಬಾಬಾ ಅಣತಿಯಂತೆ ನಡೆಯುತ್ತಿದ್ದ ಎನ್‌ಎಸ್‌ಇ ಕಾರ್ಯನಿರ್ವಹಣೆ ಬಗ್ಗೆ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಶ್ವೇತಪತ್ರ ಹೊರಡಿಸಿ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದೆ.

ಇದನ್ನೂ ಓದಿ: Avantha Fraud Case : ಯೆಸ್ ಬ್ಯಾಂಕ್‌ನ ರಾಣಾ ಕಪೂರ್, ಗೌತಮ್ ಥಾಪರ್‌ಗೆ ಜಾಮೀನು

ಪ್ರಕರಣ ಹಿನ್ನೆಲೆ: 2013-16ರ ಅವಧಿಯಲ್ಲಿ ಎನ್‌ಎಸ್‌ಇದ ಸಿಇಒ ಆಗಿದ್ದ ಚಿತ್ರಾ ಕೃಷ್ಣಮೂರ್ತಿ, ಗಂಭೀರ ಆರೋಪವೊಂದು ಕೇಳಿಬಂದ ಬಳಿಕ ದಿಢೀರನೆ ವೈಯಕ್ತಿಕ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರು ಭಾರೀ ತೆರಿಗೆ ವಂಚನೆ, ಅಕ್ರಮ ನಡೆಸಿದ್ದಾರೆ. ಅಕ್ರಮ ನೇಮಕಾತಿ ಮಾಡಿದ್ದಾರೆ. 

ಸಂಸ್ಥೆಯ ರಹಸ್ಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಿದ್ದ ಷೇರುಮಾರುಕಟ್ಟೆನಿಯಂತ್ರಣಾ ಸಂಸ್ಥೆಯಾದ ಸೆಬಿ ಇತ್ತೀಚೆಗೆ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿHuawei Income Tax Raids: ಬೆಂಗಳೂರು ಸೇರಿದಂತೆ ಚೀನಾ ಟೆಲಿಕಾಂ ಕಂಪನಿಯ ಭಾರತದ ಕಚೇರಿಗಳ ಮೇಲೆ ಐಟಿ ದಾಳಿ!

ಹಿಮಾಲಯ ಬಾಬಾ ಅಣತಿಯಂತೆ ಷೇರುಪೇಟೆ ನಡೆಸಿದ್ದ ಚಿತ್ರಾ!: ‘ಚಿತ್ರಾ ಕೃಷ್ಣಮೂರ್ತಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಿಮಾಲಯದಲ್ಲಿ ನೆಲೆಸಿರುವ ಯೋಗಿಯ ಪ್ರಭಾವ ಒಳಗಾಗಿ, ಅವರ ಅಣತಿಯಂತೆ ಎನ್‌ಎಸ್‌ಸಿ ಮುನ್ನಡೆಸುತ್ತಿದ್ದರು’ ಎಂದು ಮಾರುಕಟ್ಟೆನಿಯಂತ್ರಕ ಸೆಬಿ ಇತ್ತೀಚೆಗೆ ಹೇಳಿತ್ತು.ಎನ್‌ಎಸ್‌ಇನ ಕೆಲ ಆಂತರಿಕ ರಹಸ್ಯ ಮಾಹಿತಿ, ಎನ್‌ಎಸ್‌ಇದ ಹಣಕಾಸು ಮತ್ತು ಉದ್ಯಮ ಯೋಜನೆ, ಡಿವಿಡೆಂಡ್‌ ಪ್ರಮಾಣ, ಹಣಕಾಸು ಫಲಿತಾಂಶಗಳ ಕುರಿತ ಮಾಹಿತಿಯನ್ನು ಯೋಗಿ ಜೊತೆ ಹಂಚಿಕೊಂಡಿದ್ದರು. ಜೊತೆಗೆ ಸಂಸ್ಥೆಯ ಸಿಬ್ಬಂದಿಗಳ ಸಾಧನೆ ಕುರಿತೂ ಯೋಗಿ ಜೊತೆ ಚರ್ಚಿಸಿದ್ದರು.

ಅಲ್ಲದೆ ಯೋಗಿ ಸೂಚನೆಯಂತೆ ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದ ಆನಂದ್‌ ಸುಬ್ರಮಣಿಯನ್‌ ಅವರನ್ನು ಮುಖ್ಯ ವ್ಯೂಹಾತ್ಮಕ ಸಲಹೆಗಾರರಾಗಿ ನೇಮಿಸಿಕೊಂಡು ಬಳಿಕ ಗ್ರೂಪ್‌ ಆಪರೇಟಿಂಗ್‌ ಆಫೀಸರ್‌ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸಲಹೆಗಾರ ಹುದ್ದೆ ನೀಡಿದ್ದರು. ಯಾವುದೇ ಸಾಧನೆ ಇಲ್ಲದ ಹೊರತಾಗಿಯೂ ಆನಂದ್‌ಗೆ ವೇತನ ಹೆಚ್ಚಳ ಸೇರಿದಂತೆ ನಾನಾ ಸೌಕರ್ಯ ಕೊಟ್ಟಿದ್ದರು. ಎನ್‌ಎಸ್‌ಇಯನ್ನು ಪೂರ್ಣವಾಗಿ ಬಾಬಾ ನಿಯಂತ್ರಿಸುತ್ತಿದ್ದರು. ಚಿತ್ರಾ ಕೇವಲ ಅವರ ಕೈಗೊಂಬೆಯಾಗಿದ್ದರು’ ಎಂದು ಸೆಬಿ ಹೇಳಿತ್ತು.

ಅಲ್ಲದೆ ‘ನಿಗೂಢ ಯೋಗಿಯ ಜೊತೆ ಚಿತ್ರಾ ಅವರು ಇ ಮೇಲ್‌ ಮೂಲಕವೇ ಎಲ್ಲಾ ವ್ಯವಹಾರವನ್ನು ನಡೆಸುತ್ತಿದ್ದರು’ ಎಂಬ ಮಾಹಿತಿಯನ್ನು ನೀಡಿತ್ತು.
ಜೊತೆಗೆ ಚಿತ್ರಾ ರಾಮಕೃಷ್ಣಗೆ 3 ಕೋಟಿ, ಆನಂದ್‌ ಸುಬ್ರಮಣಿಯನ್‌ಗೆ 2 ಕೋಟಿ ಮತ್ತು ಎನ್‌ಎಸ್‌ಇದ ಮಾಜಿ ಎಂಡಿ ಮತ್ತು ಸಿಇಒ ರವಿ ನಾರಾಯಣ್‌ಗೆ 2 ಕೋಟಿ ದಂಡ ವಿಧಿಸಿತ್ತು. ಅಲ್ಲದೆ ಮುಂದಿನ ಮೂರು ವರ್ಷ ಎನ್‌ಎಸ್‌ಇದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗ ಕೂಡದು ಎಂದು ನಿರ್ಬಂಧಿಸಿತ್ತು. ಜೊತೆಗೆ ಚಿತ್ರಾಗೆ ನೀಡಿದ್ದ 1.54 ಕೋಟಿ ರು. ಲೀವ್‌ ಎನ್‌ಕ್ಯಾಷ್‌ಮೆಂಟ್‌ ಮತ್ತು 2.83 ಕೋಟಿ ರು. ವಿಳಂಬಿತ ಬೋನಸ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಎನ್‌ಎಸ್‌ಇಗೆ ಸೂಚಿಸಿತ್ತು.