ಕಪ್ಪು ಕುಳಗಳಿಗೆ ಡವ ಡವ ಶುರು, ಅಕೌಂಟ್ ಕ್ಲೋಸ್ ಮಾಡಿದ್ರೂ ತಪ್ಪದು ಕಷ್ಟ!

ಕಪ್ಪು ಕುಳಗಳಿಗೆ ಡವ ಡವ| ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರ ಮಾಹಿತಿ ಇದೇ ತಿಂಗಳು ಭಾರತಕ್ಕೆ| ಸಂಪೂರ್ಣ ಹಣಕಾಸು ವಿವರ ಒದಗಿಸಲಿರುವ ಸ್ವಿಜರ್ಲೆಂಡ್‌ ಸರ್ಕಾರ| ಸರ್ಕಾರಕ್ಕೆ ಹೆದರಿ ಅಕೌಂಟ್‌ ಬಂದ್‌ ಮಾಡಿಸಿದವರ ವಿವರವೂ ಲಭ್ಯ

Swiss banks to provide details of Indian accounts to government

ನವದೆಹಲಿ[ಸೆ.09]: ಅಪಾರ ಪ್ರಮಾಣದ ಕಪ್ಪು ಹಣ ಸಂಪಾದಿಸಿ, ಅದನ್ನು ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಕರೆಯಲಾಗುತ್ತಿದ್ದ ಸ್ವಿಸ್‌ ಬ್ಯಾಂಕುಗಳಲ್ಲಿ ದಾಸ್ತಾನು ಮಾಡುವ ಚಾಳಿ ಹೊಂದಿದ್ದ ಕಾಳಧನಿಕರಿಗೆ ಈಗ ಆತಂಕ ಶುರುವಾಗಿದೆ. ಭಾರತ ಹಾಗೂ ಸ್ವಿಜರ್ಲೆಂಡ್‌ ನಡುವೆ ಏರ್ಪಟ್ಟಿರುವ ಒಪ್ಪಂದದ ಅನುಸಾರ, ತಮ್ಮಲ್ಲಿ ಖಾತೆ ಹೊಂದಿರುವ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಯನ್ನು ಮೊದಲ ಬಾರಿಗೆ ಇದೇ ತಿಂಗಳು ಸ್ವಿಸ್‌ ಬ್ಯಾಂಕುಗಳು ಭಾರತಕ್ಕೆ ಹಸ್ತಾಂತರಿಸಲಿವೆ.

ಕೇಂದ್ರ ಸರ್ಕಾರ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಅಂಜಿಕೆಯಿಂದ ತರಾತುರಿಯಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ಖಾತೆಯನ್ನು ಬರ್ಕಾಸ್ತುಗೊಳಿಸಿರುವವರ ಮಾಹಿತಿಯೇ ಮೊದಲ ಕಂತಿನ ವಿವರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಸ್ವಿಜರ್ಲೆಂಡ್‌ನ ಬ್ಯಾಂಕರ್‌ಗಳು ಹಾಗೂ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಕಡೆಯ ಕ್ಷಣದಲ್ಲಿ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಖಾತೆ ಬಂದ್‌ ಮಾಡಿಸಿದ್ದ ಕಾಳಧನಿಕರು ನಡುಗುವಂತಾಗಿದೆ.

ಸ್ವಿಜರ್ಲೆಂಡ್‌ ಸರ್ಕಾರದ ಸೂಚನೆ ಮೇರೆಗೆ ಈಗಾಗಲೇ ಅಲ್ಲಿನ ಬ್ಯಾಂಕುಗಳು ಭಾರತೀಯ ಗ್ರಾಹಕರಿಗೆ ಸಂಬಂಧಿಸಿದ ದತ್ತಾಂಶವನ್ನು ಸಿದ್ಧಪಡಿಸಿವೆ. ಖಾತೆಗೆ ಬಂದ ಹಣ, ಹೋದ ಹಣ ಸೇರಿದಂತೆ 2018ನೇ ಇಸ್ವಿಯಲ್ಲಿ ಒಂದು ದಿನ ಕೂಡ ಸಕ್ರಿಯವಾಗಿದ್ದ ಖಾತೆಗಳ ವಿವರವನ್ನೂ ಭಾರತೀಯ ಅಧಿಕಾರಿಗಳಿಗೆ ಒದಗಿಸಲಿದ್ದಾರೆ.

ಕಾಳಧನಿಕರ ವಿರುದ್ಧ ಕ್ರಮ ಕೈಗೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಸರ್ಕಾರಕ್ಕೆ ಈ ಮಾಹಿತಿ ಒಂದು ರೀತಿ ಅಮೂಲ್ಯ ಭಂಡಾರದಂತಾಗಿದೆ. ಇದೇ ವಿವರವನ್ನು ಇಟ್ಟುಕೊಂಡು ಕಾಳಧನಿಕರ ವಿರುದ್ಧ ಸರ್ಕಾರ ವಿಚಾರಣೆ ಆರಂಭಿಸಬಹುದಾಗಿದೆ. ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿ ಮಾಡಲಾದ ಹಣ ಜಮೆ, ಅಲ್ಲಿಂದ ನಡೆಸಲಾದ ಹಣ ವರ್ಗಾವಣೆ, ಹೂಡಿಕೆಯಿಂದ ಸಿಕ್ಕ ಗಳಿಕೆ ಮತ್ತಿತರ ಎಲ್ಲ ಮಾಹಿತಿಯೂ ಭಾರತಕ್ಕೆ ಸಿಗಲಿದೆ ಎಂದು ಹೇಳಲಾಗಿದೆ.

ಅನಿವಾಸಿ ಉದ್ಯಮಿಗಳು:

ಮೊದಲ ಕಂತಿನಲ್ಲಿ ಸ್ವಿಸ್‌ ಬ್ಯಾಂಕುಗಳು ಹಸ್ತಾಂತರಿಸುವ ಮಾಹಿತಿ ಆಗ್ನೇಯ ಏಷ್ಯಾ, ಅಮೆರಿಕ, ಬ್ರಿಟನ್‌, ಕೆಲವೊಂದು ಆಫ್ರಿಕಾ, ದಕ್ಷಿಣ ಅಮೆರಿಕ ದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೂ ಸೇರಿದಂತೆ ಬಹುತೇಕ ಉದ್ಯಮಿಗಳಿಗೆ ಸೇರಿದ್ದಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ವಿಸ್‌ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಪ್ಪು ಹಣದ ವಿರುದ್ಧ ಜಾಗತಿಕ ಕಾರ್ಯಾಚರಣೆ ಪ್ರಾರಂಭವಾದ ಬಳಿಕ ಸಾಕಷ್ಟುಪ್ರಮಾಣದ ಹಣ ಸ್ವಿಸ್‌ ಬ್ಯಾಂಕುಗಳಿಂದ ವರ್ಗಾವಣೆಯಾಗಿದೆ. ಅಲ್ಲದೆ ಹಲವಾರು ಖಾತೆಗಳನ್ನು ಮುಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಳಧನಿಕರ ಮಾಹಿತಿಯನ್ನು ಪಡೆಯಲು ಸ್ವಿಜರ್ಲೆಂಡ್‌ ಜತೆ ಭಾರತ ಸ್ವಯಂ ಮಾಹಿತಿ ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದೆ. 2018ರಲ್ಲಿ ಬಂದ್‌ ಮಾಡಲಾದ ಖಾತೆಯ ವಿವರಗಳೂ ಇದರಡಿ ಸಿಗಲಿವೆ. ಇದಲ್ಲದೆ, 2018ಕ್ಕೂ ಮುಂಚೆ ಬಂದ್‌ ಮಾಡಿರುವ ಸಾಧ್ಯತೆಯುಳ್ಳ ಕನಿಷ್ಠ 100 ಖಾತೆಗಳ ಮಾಹಿತಿಯನ್ನೂ ಹಂಚಿಕೊಳ್ಳಲು ಸ್ವಿಜರ್ಲೆಂಡ್‌ ಅಧಿಕಾರಿಗಳು ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಖಾತೆಗಳು ಆಟೋ ಮೊಬೈಲ್‌, ರಾಸಾಯನಿಕ, ಜವಳಿ, ರಿಯಲ್‌ ಎಸ್ಟೇಟ್‌, ವಜ್ರ, ಆಭರಣ ಹಾಗೂ ಉಕ್ಕಿನ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಿಗಳದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios