ನವದೆಹಲಿ(ಮಾ.03): ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಸಿಹಿ ಸುದ್ದಿಯೊಂದನ್ನು ನೀಡಿದ್ದು, ನೌಕರರಿಗೆ ನೀಡುವ ವಿಶೇಷ ಭತ್ಯೆಗಳು ಸಂಬಳದ ಭಾಗವೇ ಆಗಿರುವುದರಿಂದ ಅದನ್ನು ಮೂಲವೇತನ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಮೂಲ ವೇತನದ ಜೊತೆಗೆ ವಿಶೇಷ ಭತ್ಯೆಯನ್ನೂ ಲೆಕ್ಕಹಾಕಿ ಭವಿಷ್ಯ ನಿಧಿಯ ವಂತಿಗೆ ಕಡಿತ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಿಎಫ್ ವಂತಿಗೆ ಕಡಿತ ಕುರಿತಂತೆ ಸಲ್ಲಿಕೆಯಾಗಿದ್ದ ಅನೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಕಾಯಂ ನೌಕರರಿಗೆ ನೀಡುವ ಎಲ್ಲಾ ವಿಧದ ಭತ್ಯೆಗಳನ್ನು ಸೇರಿಸಿ ಸೆಕ್ಷನ್ 6ರ ಅನ್ವಯ ಪಿಎಫ್ ವಂತಿಗೆ ಕಡಿತ ಮಾಡಬೇಕು ಎಂದು ಹೇಳಿದೆ.

ಪ್ರಸ್ತುತ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಮೊತ್ತಕ್ಕೆ ಶೇ. 12ರಷ್ಟು ಪಿಎಫ್ ವಂತಿಗೆ ಕಡಿತ ಮಾಡಲಾಗುತ್ತಿದೆ. ಇಷ್ಟೇ ಮೊತ್ತದ ದೇಣಿಗೆಯನ್ನು ನೌಕರ ಕೆಲಸ ಮಾಡುವ ಸಂಸ್ಥೆಯೂ ಭರಿಸುತ್ತದೆ.

ಕಳೆದ ವಾರವಷ್ಟೆ ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ಪಿಎಫ್ ಮೇಲಿನ ಬಡ್ಡಿ ದರವನ್ನು ಶೇ. 8.55ರಿಂದ ಶೇ. 8.65ಕ್ಕೆ ಏರಿಸಿದೆ. ಇದರಿಂದ ಇಪಿಎಫ್​ಒನ ಆರು ಕೋಟಿ ಚಂದಾದಾರರಿಗೆ ಅನುಕೂಲವಾಗಲಿದೆ.