ನವದೆಹಲಿ(ಸೆ.29): ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ನಿನ್ನೆ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 30ನೇ ಸಭೆಯಲ್ಲಿ, 25 ರಾಜ್ಯಗಳು ಆದಾಯ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರದಿಂದ ಪರಿಹಾರದ ಭರವಸೆ ಪಡೆದಿವೆ. 

ಅನೇಕ ರಾಜ್ಯಗಳು ಅಧಿಕ ಆದಾಯದ ಕೊರತೆಯನ್ನು ಅನುಭವಿಸುತ್ತಿದ್ದು, ಆದರೂ ಕಳೆದ ವರ್ಷಕ್ಕಿಂತ ಈ ವರ್ಷ ಪರಿಸ್ಥಿತಿ ಉತ್ತಮವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಳೆದ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಅದು ರಾಷ್ಟ್ರೀಯ ಸರಾಸರಿ ಆದಾಯ ಕೊರತೆ ಶೇ. 13ಕ್ಕಿಂತ ಕಡಿಮೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರದ ಸರಾಸರಿ ಆದಾಯ ಕೊರತೆ ಶೇ. 16ರಷ್ಟಿತ್ತು. ಅದೀಗ ಶೇ. 13ಕ್ಕೆ ಇಳಿದಿದೆ. ಅದು ಈ ವರ್ಷದ ಕೊನೆಗೆ ಶೇಕಡಾ ಶೇ. 12 ಅಥವಾ ಶೇ. 11ಕ್ಕೆ ಇಳಿಯಲಿದೆ ಎಂಬ ಆಶಾವಾದವಿದೆ ಎಂದು ಜೇಟ್ಲಿ ಭರವಸೆ ವ್ಯಕಕ್ತಪಡಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಿಜೋರಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಲ್ಯಾಂಡ್, ಸಿಕ್ಕಿಂ ಮತ್ತು ಆಂಧ್ರಪ್ರದೇಶ ರಾಜ್ಯಗಳ ಆದಾಯ ನಿರೀಕ್ಷೆಗಿಂತ ಹೆಚ್ಚಾಗಿದೆ. ಹೀಗಾಗಿ ಈ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರದ ಅಗತ್ಯವಿಲ್ಲ. ಉಳಿದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಸಿಗಬೇಕಾಗಿದೆ. 

ಈ ನಿಟ್ಟಿನಲ್ಲಿ ಹಣಕಾಸು ಕಾರ್ಯದರ್ಶಿ ಹಮ್ಸುಖ್ ಆದಿಯಾ ಇದುವರೆಗೆ ಪುದುಚೆರಿ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಚತ್ತೀಸ್ ಗಢ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಆದಾಯದ ಕೊರತೆಗೆ ಕಾರಣವೇನು ಎಂದು ಪರಿಶೀಲಿಸಿದ್ದಾರೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

ಇನ್ನು ಪ್ರವಾಹ ಪೀಡಿತ ಕೇರಳ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂಗ್ರಹಕ್ಕೆ ಶೇಕಡಾ 10ರಷ್ಟು ತೆರಿಗೆ ವಿಧಿಸುವ ಕುರಿತು ನಿರ್ಧರಿಸಲು ಜಿಎಸ್ ಟಿ ಮಂಡಳಿ ನಿನ್ನೆಯ ಸಭೆಯಲ್ಲಿ 7 ಸದಸ್ಯರನ್ನೊಳಗೊಂಡ ಸಚಿವರ ತಂಡ ರಚಿಸಲು ಶಿಫಾರಸು ಮಾಡಿತು.

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ನಿಧಿಯ ಹೊರತಾಗಿ ಕೇರಳ ರಾಜ್ಯಕ್ಕೆ ಅಧಿಕ ಆದಾಯ ಸಂಗ್ರಹಕ್ಕೆ ಯಾಂತ್ರಿಕ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆಯೇ ಎಂದು ಸಚಿವರ ಗುಂಪು ಪರಿಶೀಲಿಸಲಿದೆ. ಇನ್ನು ಕೆಲವು ವಾರಗಳಲ್ಲಿ ಈ ಸಚಿವರ ತಂಡ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸಲಿದೆ ಎನ್ನಲಾಗಿದೆ.