ಯೂರೋಪ್ ಹಾಗೂ ಏಷ್ಯಾದ ಶೇರು ಮಾರುಕಟ್ಟೆ ಭಾರೀ ಕುಸಿತ ಕಂಡಿದೆ. ಜಪಾನ್, ಚೀನಾ ಹಾಗೂ ದಕ್ಷಿಣ ಕೊರಿಯಾದ ಶೇರು ಮಾರುಕಟ್ಟೆ ಶೇಕಡಾ 2.5ರಷ್ಟು ಕುಸಿದಿದೆ. ಇದು ಭಾರತದ ಶೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಬಿಎಸ್‌ಇ 30 ಶೇರುಗಳ ಪ್ರಮುಖ ಸೂಚ್ಯಂಕವಾಗಿರುವ ಸೆನ್ಸೆಕ್ಸ್ 572.28ರಷ್ಟು ಕುಸಿತ ಕಂಡು 35312.13ರ ಹಂತದಲ್ಲಿ ನಿಂತಿದೆ. ಇತ್ತ ಎನ್‌ಎಸ್‌ಇಯ 50 ಶೇರುಗಳ ಪ್ರಮುಖ ಸೂಚ್ಯಂಕ ನಿಫ್ಟಿ 181.75ಅಂಕಗಳ ಕುಸಿತ ದೊಂದಿಗೆ 10601.15ರ ಹಂತದಲ್ಲಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ತಜ್ಞರು ಕೆನಡಾದಲ್ಲಿ ಚೀನಾಸ್ ಅತಿ ದೊಡ್ಡ ಟೆಲಿಕಾಂ ಕಂಪೆನಿಯಾದ ಹುವಾಯಿ ಟೆಕ್ನಾಲಜೀಸ್‌ನ ಸಿಎಫ್‌ಒರನ್ನು ಬಂಧಿಸಿರುವುದೇ ಈ ಕುಸಿತಕ್ಕೆ ಕಾರಣವೆಂದು ತಿಳಿಸಿದ್ದಾತರೆ. ಯಾಕೆಂದರೆ ಸಿಎಫ್‌ ಬಂಧನದಿಂದ ಮತ್ತೊಮ್ಮೆ ಅಮೆರಿಕಾ ಹಾಗೂ ಚೀನಾ ನಡುವೆ ವ್ಯಾಪಾರ ಯುದ್ಧವೇರ್ಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದರೊಂದಿಗೆ ತೈಲ ರಫ್ತು ಮಾಡುವ OPEC ರಾಷ್ಟ್ರಗಳ ಸಭೆಯ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ.

ಏನಿದು ಪ್ರಕರಣ?

ಚೀನಾದ ಅತಿ ದೊಡ್ಡ ಟೆಲಿಕಾಂ ಕಂಪೆನಿಯಾದ ಹುವಾಯಿಯ ಸಿಎಫ್‌ಒ ರನ್ನು ಕೆನಡಾದಲ್ಲಿ ಬಂಧಿಸಲಾಗಿದೆ. ಮೆಂಜ್ ವಾಯಿಜೂ ಹೆಸರಿನ ಮಹಿಳಾ ಅಧಿಕಾರಿಯನ್ನು ಅಮೆರಿಕಾದಿಂದ ಗಡೀಪಾರು ಮಾಡಲಾಗುತ್ತದೆ. ಬಿಬಿಸಿ ಸುದ್ದಿ ವಾಹಿನಿ ಪ್ರಕಟಿಸಿರುವ ಮಾಹಿತಿ ಅನ್ವಯ ಈ ಅಧಿಕಾರಿ ಹುವಾಯಿ ಕಂಪೆನಿಯ ಸಂಸ್ಥಾಪಕರ ಮಗಳೆಂದು ತಿಳಿದು ಬಂದಿದೆ.

ಈ ಕುರಿತಾಗಿ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ, ಕಂಪೆನಿಯು ಇರಾನ್ ಮೇಲೆ ಅಮೆರಿಕಾ ಹೇರಿರುವ ನಿಷೇಧವನ್ನು ಉಲ್ಲಂಘಿಸುತ್ತಿತ್ತು. ಈ ಆರೋಪದಡಿಯಲ್ಲಿ ವಾಯಿಜೂರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಕೆನಡಾದಲ್ಲಿರುವ ಚೀನಾದ ಉನ್ನತ ಆಯೋಗವು ಸಿಎಫ್‌ಒ ಬಂಧನವನ್ನು ಖಂಡಿಸಿದೆ. ಶುಕ್ರವಾರದಂದು ವಾಯಿಜೂರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಅಮೆರಿಕಾದ ಮಾಧ್ಯಮಗಳ ಅನ್ವಯ ಹಲವಾರು ಸಮಯದಿಂದ ಹುವಾಯಿ ಟೆಲಿಕಾಂ ಕಂಪೆನಿಯ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಏಪ್ರಿಲ್‌ನಲ್ಲಿ ಈ ತನಿಖೆ ಆರಂಭವಾಗಿತ್ತು. ಕಂಪೆನಿಯು ತನ್ನ ಮೊಬೈಲ್‌ಗಳಲ್ಲಿ ಅಮೆರಿಕಾದಲ್ಲಿ ಉತ್ಪಾದಿಸುತ್ತಿದ್ದ ಬಿಡಿ ಭಾಗಗಳನ್ನು ಬಳಸುತ್ತಿತ್ತು ಎನ್ನಲಾಗಿದೆ.

ಇನ್ನು ವಾಯಿಜೂ ಬಂಧನದಿಂದ ಅಮೆರಿಕಾ ಹಾಗೂ ಚೀನಾ ನಡುವಿನ ವ್ಯಾಪಾರ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ. ಹುವಾಯಿ ಕಂಪೆನಿ ನಡೆಸುವ ಅಮೆರಿಕಾ ವಹಿವಾಟು ಸ್ಥಗಿತಗೊಳ್ಳುವ ಸಂಶಯವೂ ವ್ಯಕ್ತವಾಗಿದೆ.