ಪಾತಾಳ ತಲುಪಿದ ಮುಂಬೈ ಷೇರು ಮಾರುಕಟ್ಟೆ! ಸೆನ್ಸೆಕ್ಸ್‌ 806 ಅಂಕಗಳ ದಾಖಲೆ ಕುಸಿತ! ಕಚ್ಚಾ ತೈಲದರ, ರೂಪಾಯಿ ಮೌಲ್ಯ ಕುಸಿತ ಕಾರಣ! ಆಗಸ್ಟ್‌ನಿಂದ ಷೇರು ಸೂಚ್ಯಂಕ ಶೇ.10 ರಷ್ಟು ಇಳಿಕೆ!ಜಾಗತಿಕ ಷೇರು ಮಾರುಕಟ್ಟೆ ಕೂಡ ಇಳಿಕೆ ಹಾದಿಯಲ್ಲಿ

ಮುಂಬೈ(ಅ.5): ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 806 ಅಂಕ ಕುಸಿತಕ್ಕೀಡಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸೆನ್ಸೆಕ್ಸ್‌ 35,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಇಳಿದಿದೆ. 

ಇದೇ ರೀತಿ ನಿಫ್ಟಿ 10,600 ಅಂಕಗಳ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿತು. ಏಷ್ಯಾ ಮತ್ತು ಯುರೋಪ್‌ನಲ್ಲೂ ಷೇರು ಮಾರುಕಟ್ಟೆಗಳು ಮುಗ್ಗರಿಸಿವೆ. ಡಾಲರ್‌ ಎದುರು ರೂಪಾಯಿ ಮೌಲ್ಯ 73.71ಕ್ಕೆ ಕುಸಿದಿದ್ದರೆ, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 86 ಡಾಲರ್‌ಗೆ ಏರಿಕೆಯಾಗಿದೆ. ಈ ಬೆಳವಣಿಗೆ ವಿತ್ತೀಯ ಕೊರತೆಗೆ ಕಾರಣವಾಗಿ, ಆರ್ಥಿಕತೆಯ ಮೇಲೆ ಕ್ಲಿಷ್ಟಕರ ಸವಾಲೊಡ್ಡುವ ಆತಂಕ ಎದುರಾಗಿದೆ. 

ಆರೋಗ್ಯ, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ಬ್ಯಾಂಕಿಂಗ್‌, ರಿಯಾಲ್ಟಿ, ಮತ್ತು ಆಟೊಮೊಬೈಲ್‌ ವಲಯದ ಷೇರುಗಳು ತೀವ್ರ ಕುಸಿತ ಕಂಡಿವೆ. ಸತತ ಎರಡು ದಿನಗಳಿಂದ ಸೂಚ್ಯಂಕ ನಷ್ಟದಲ್ಲಿದ್ದು, 806 ಅಂಕ ಕಳೆದುಕೊಂಡು 35,169ಕ್ಕೆ ಸ್ಥಿರವಾಗಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟಾರೆ ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ. ಷೇರು ಮೌಲ್ಯ ನಷ್ಟವಾಗಿದೆ.

ಕಳೆದ ಆಗಸ್ಟ್‌ನಿಂದ ಷೇರು ಸೂಚ್ಯಂಕ ಶೇ.10 ರಷ್ಟು ಇಳಿದಿದೆ. ರೂಪಾಯಿ ಮೌಲ್ಯ ಮತ್ತು ತೈಲ ದರದಲ್ಲಿ ಅಸ್ಥಿರತೆ ಮುಂದುವರೆದಿರುವುದರಿಂದ, ಷೇರು ಪೇಟೆಯಲ್ಲಿ ಏರುಪೇರು ಕೂಡ ಮತ್ತಷ್ಟು ದಿನ ಮುಂದುವರಿಯುವ ನಿರೀಕ್ಷೆ ಇದೆ. 

ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,550 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,402 ಕೋಟಿ ರೂ. ಬೆಲೆಯ ಷೇರುಗಳನ್ನು ಖರೀದಿಸಿದರು. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ ಶೇ.7ರಷ್ಟು ಇಳಿಯಿತು. 

ಟಿಸಿಎಸ್‌ (ಶೇ.4.54), ಅದಾನಿ ಪೋಟ್ಸ್‌ (ಶೇ.4.17), ಒಎನ್‌ಜಿಸಿ (ಶೇ.3.74), ಸನ್‌ ಫಾರ್ಮಾ (ಶೇ.3.70), ಎಚ್‌ಡಿಎಫ್‌ಸಿ ಬ್ಯಾಂಕ್‌ (ಶೇ.3.46) ಷೇರುಗಳು ನಷ್ಟಕ್ಕೀಡಾಯಿತು. ಹಾಂಕಾಂಗ್‌, ಜಪಾನ್‌, ತೈವಾನ್‌, ಫ್ರಾಂಕ್‌ಫರ್ಟ್‌, ಪ್ಯಾರಿಸ್‌ ನಲ್ಲಿ ಷೇರು ಸೂಚ್ಯಂಕಗಳು ಕುಸಿಯಿತು.