ಮುಂಬೈ[ಜು.20]: ಕಾರ್ಪೋರೆಟ್‌ ಕಂಪನಿಗಳ ಲಾಭ ಕುಸಿತ ಹಾಗೂ ವಿದೇಶಿ ಹೂಡಿಕೆದಾರರಿಗೆ ಸಂಬಂಧಿಸಿದ ಕಳವಳಗಳ ಹಿನ್ನೆಲೆಯಲ್ಲಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 560 ಅಂಕಗಳಷ್ಟುಕುಸಿತ ದಾಖಲಿಸಿದೆ. ಇದು ಈ ವರ್ಷದ ಎರಡನೇ ಮಹಾ ಕುಸಿತವಾಗಿದೆ. ಬಜೆಟ್‌ ಮಂಡನೆಯ ಬಳಿಕ ಜು.8ರಂದು ಸೆನ್ಸೆಕ್ಸ್‌ 792 ಅಂಕ ಕುಸಿದಿದ್ದು, ಈ ವರ್ಷದ ಗರಿಷ್ಠ ಪ್ರಮಾಣದ ಇಳಿಕೆ.

ಗುರುವಾರ 318 ಅಂಕ ಇಳಿಕೆ ದಾಖಲಿಸಿದ್ದ ಸೂಚ್ಯಂಕ ಶುಕ್ರವಾರವೂ ಕುಸಿತ ಕಂಡಿತು. ಈ ಎರಡು ದಿನಗಳಲ್ಲಿ ಸೆನ್ಸೆಕ್ಸ್‌ 879 ಅಂಕಗಳಷ್ಟುಕುಸಿದಂತಾಗಿದ್ದು, ಹೂಡಿಕೆದಾರರಿಗೆ 3.79 ಲಕ್ಷ ಕೋಟಿ ರು. ಕೈಬಿಟ್ಟಿದೆ.

560.45 ಅಂಕಗಳ ಇಳಿಕೆಯೊಂದಿಗೆ ಸೆನ್ಸೆಕ್ಸ್‌ 38,337.01ರಲ್ಲಿ ವಹಿವಾಟು ಮುಗಿಸಿದೆ. ಇದೇ ವೇಳೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ176.65 ಅಂಕ ಇಳಿದು, 11,419.25ರಲ್ಲಿ ಅಂತ್ಯಗೊಂಡಿದೆ.

ಸೂಪರ್‌ ರಿಚ್‌ ತೆರಿಗೆಯನ್ನು ಹೆಚ್ಚಳ ಮಾಡುವ ಬಜೆಟ್‌ ಪ್ರಸ್ತಾಪದಿಂದ ವಿದೇಶಿ ಹೂಡಿಕೆದಾರರ ಮೇಲೆ ಪ್ರಭಾವ ಉಂಟಾಗುತ್ತದೆ ಎಂಬ ವಾದವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಅಲ್ಲಗಳೆದಿದ್ದರು. ಇದರಿಂದಾಗಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿತ್ತು.