ಮಂತ್ರಿ ಡೆವಲಪರ್ಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಖರೀದಿದಾರರು; ತಕ್ಷಣ ಮನೆ ಹಸ್ತಾಂತರಿಸಲು ಸೂಚನೆ
ಬೆಂಗಳೂರಿನಲ್ಲಿ ವಿಳಂಬಗೊಂಡ ಪ್ರಾಜೆಕ್ಟ್ ವೊಂದರಲ್ಲಿ ಮಂತ್ರಿ ಡೆವಲಪರ್ಸ್ 48 ಖರೀದಿದಾರರಿಗೆ ಇನ್ನೂ ಮನೆ ಹಸ್ತಾಂತರಿಸಿಲ್ಲ. ಈ ಸಂಬಂಧ ಖರೀದಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತಕ್ಷಣ ಮನೆಯನ್ನು ಖರೀದಿದಾರರ ಸುರ್ಪದಿಗೆ ನೀಡುವಂತೆ ಆದೇಶಿಸಿದೆ.
ನವದೆಹಲಿ (ನ.17): ಬೆಂಗಳೂರಿನಲ್ಲಿ ಮಂತ್ರಿ ಸೆರೆನಿಟಿ ಪ್ರಾಜೆಕ್ಟ್ ನಲ್ಲಿ ಮನೆ ಖರೀದಿಸೋರಿಗೆ ಅದರ ಒಡೆತನ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್ ಗೆ (ಮಂತ್ರಿ ಡೆವಲಪರ್ಸ್) ಸೂಚಿಸಿದೆ. ಒಪ್ಪಂದದ ಮೊತ್ತವನ್ನು ಶೇ.100ರಷ್ಟು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಪಾವತಿಸಿದ್ದರೂ ಖರೀದಿದಾರರಿಗೆ ಈ ತನಕ ಮನೆಯ ಒಡೆತನ ಹಸ್ತಾಂತರಿಸಿಲ್ಲ. ಈ ಹಿನ್ನೆಲೆಯಲ್ಲಿ ಖರೀದಿದಾರರು ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಸಂಬಂಧಪಟ್ಟ ಪ್ಲ್ಯಾಟ್ ಅಥವಾ ಆಸ್ತಿಯನ್ನು ಸಂಬಂಧಪಟ್ಟ ಖರೀದಿದಾರರ ಸುರ್ಪದಿಗೆ ಒಂದು ವಾರದೊಳಗೆ ನೀಡುವಂತೆ ಆದೇಶಿಸಿದೆ. ಮುಂದಿನ ವಿಚಾರಣೆಗಿಂತ ಮುನ್ನ ಈ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಫೆಬ್ರವರಿ 14ಕ್ಕೆ ನಿಗದಿಪಡಿಸಲಾಗಿದೆ. ಈ ಪ್ರಕರಣದಲ್ಲಿ 48 ಖರೀದಿದಾರರಿದ್ದು, ಅವರ ಪರವಾಗಿ ವಕೀಲರಾದ ಬಿಸ್ವಜಿತ್ ಭಟ್ಟಾಚಾರ್ಯ ವಾದ ಮಂಡಿಸಿದ್ದರು.
ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಕ್ಯಾಸಲ್ಸ್ ವಿಸ್ತಾ ಪ್ರೈವೇಟ್ ಲಿಮಿಟೆಡ್ ಎಂದು ಕೂಡ ಕರೆಯಲಾಗುತ್ತದೆ. ಯಾವಾಗ ಡೆವಲಪರ್ ಮನೆಯನ್ನು ನಿಗದಿಪಡಿಸಿರುವ ದಿನಾಂಕದಂದು ನೀಡಲಿಲ್ಲವೋ ಆಗ ಖರೀದಿದಾರರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ (NCDRC) ದೂರು ನೀಡಿದರು. ಆದರೆ, ಅಲ್ಲಿ ಪ್ರಕರಣ ವಜಾಗೊಂಡಿತು. ಹೀಗಾಗಿ 48 ಮಂದಿ ಖರೀದಿದಾರರು ಸುಪ್ರೀಂ ಕೋರ್ಟ್ ಮೊರೆ ಹೋದರು. 48 ಖರೀದಿದಾರರು 2013ರ ಬಳಿಕ 75-95ಲಕ್ಷ ರೂ.ಗೆ ಪ್ಲ್ಯಾಟ್ ಗಳನ್ನು ಬುಕ್ ಮಾಡಿದ್ದರು. ಡೆವಲಪರ್ ಗಳು ಇತರರಿಗೆ ಪ್ಲ್ಯಾಟ್ ನೀಡಿದ್ದರೂ ಈ 48 ಕುಟುಂಬಗಳಿಗೆ ಮಾತ್ರ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ನಿಯಮ ಇನ್ನಷ್ಟು ಬಿಗಿ!
ಕಾಮನ್ ಏರಿಯಾ ನಿವಾಸಿಗಳಿಗೆ ಹಸ್ತಾಂತರಿಸಬೇಕು
ಸಾಮಾನ್ಯ ಪ್ರದೇಶ ಅಥವಾ ಕಾಮನ್ ಏರಿಯಾವನ್ನು ಬಿಲ್ಡರ್ ಗಳು ನಿವಾಸಿಗಳಿಗೆ ಹಸ್ತಾಂತರಿಸಬೇಕು ಎಂದು ಪ್ರಕರಣವೊಂದರಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆರೇರಾ) ಕೆಲವು ತಿಂಗಳ ಹಿಂದೆ ತೀರ್ಪು ನೀಡಿದೆ. ನಿವಾಸಿಗಳ ಅಥವಾ ಖರೀದಿದಾರರ ಸಂಘ ಸ್ಥಾಪಿಸಿದ ತಕ್ಷಣವೇ ಕಾಮನ್ ಏರಿಯಾವನ್ನು ಸಂಘಕ್ಕೆ ಹಸ್ತಾಂತರಿಸುವಂತೆ ಕೆರೇರಾ ತಿಳಿಸಿದೆ. ಸಿಗ್ನೇಚರ್ ಡ್ವೆಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಸಂಸ್ಥೆ ವಿರುದ್ಧ ಸಂದೀಪ್ ಜಿಡಬ್ಲ್ಯು ಹಾಗೂ ಜೊನಾಲಿ ದಾಸ್ ಎಂಬುವರು ದೂರು ನೀಡಿದ್ದರು. ರಿಯಲ್ ಎಸ್ಟೇಟ್ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ 2016ರ ಸೆಕ್ಷ್ 18 ಅಡಿಯಲ್ಲಿ ಈ ತೀರ್ಪು ನೀಡಲಾಗಿದೆ. ಇದರ ಜೊತೆಗೆ ಬಿಬಿಎಂಪಿ ಬಿಲ್ಡಿಂಗ್ ಉಪನಿಯಮಗಳಿಗೆ ಅನುಗುಣವಾಗಿ ಕಾರು ಪಾರ್ಕಿಂಗ್ ಸ್ಥಳವನ್ನು ದೂರುದಾರರಿಗೆ ನೀಡುವಂತೆ ಕೆರೇರಾ ಬಿಲ್ಡರ್ ಗೆ ನಿರ್ದೇಶನ ನೀಡಿದೆ. ಈ ತೀರ್ಪು ಮನೆ ಖರೀದಿದಾರರ ಪಾಲಿಗೆ ಮಹತ್ವದಾಗಿದೆ. ಏಕೆಂದರೆ ಇಲ್ಲಿಯ ತನಕ ಅನೇಕ ಬಿಲ್ಡರ್ ಗಳು ಅಪಾರ್ಟ್ ಮೆಂಟ್ ಗಳ ಕಾಮನ್ ಏರಿಯಾವನ್ನು ಖರೀದಿದಾರರ ಸಂಘಕ್ಕೆ ನೀಡದೆ ಅದರ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.
ಯುಪಿಐ ಬಳಕೆದಾರರೇ ಎಚ್ಚರ: ನೀವು ಇದನ್ನು ಮಾಡದಿದ್ದರೆ ನಿಮ್ಮ ಯುಪಿಐ ಐಡಿ ಶೀಘ್ರದಲ್ಲೇ ಬಂದ್ ಆಗುತ್ತೆ!
ಇನ್ನು ಪ್ರಾಧಿಕಾರ ಖರೀದಿದಾರರ ಸಂಘ ರಚಿಸುವಂತೆ ಡೆವಲಪರ್ ಗೆ ಆದೇಶ ನೀಡಿದೆ. ರಿಯಲ್ ಎಸ್ಟೇಟ್ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ ಅಡಿಯಲ್ಲಿ ನೋಂದಣಿಯಾಗದ ಯೋಜನೆಯೊಂದರ ಡೆವಲಪರ್ ಗೆ ಕರ್ನಾಟಕ ಸಹಕಾರ ಸೊಸೈಟಿ ಕಾಯ್ದೆ 1959ರ (ಕೆಎಸ್ ಸಿಎ) ಅನ್ವಯ ಖರೀದಿದಾರರ ಸಂಘ ಸ್ಥಾಪಿಸುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ (ಕೆರೇರಾ) ಸೂಚನೆ ನೀಡಿದೆ. ಅಲ್ಲದೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡುವಂತೆ ಸೂಚಿಸಿದೆ.