ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುವ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 83.5ರು.ನಷ್ಟು ಕಡಿತಗೊಳಿಸಲಾಗಿದೆ.

ನವದೆಹಲಿ: ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುವ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 83.5ರು.ನಷ್ಟು ಕಡಿತಗೊಳಿಸಲಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೀಗೆ ಸತತವಾಗಿ ಮೂರನೇ ತಿಂಗಳು ಇಳಿಕೆ ಮಾಡಲಾಗಿದೆ. ಈ ದರ ಕಡಿತದ ಬಳಿಕ ದೆಹಲಿಯಲ್ಲಿ 1856.5 ರು.ನಷ್ಟಿದ್ದ ಸಿಲಿಂಡರ್‌ ಬೆಲೆ 1773 ರು.ಗೆ ಇಳಿಕೆಯಾಗಿದೆ. ಈ ಹಿಂದೆ ಏ.1ರಂದು 91 ರು. ಮತ್ತು ಮೇ 1ರಂದು 171 ರು.ನಷ್ಟು ಕಡಿತ ಮಾಡಲಾಗಿತ್ತು. ಅಂದರೆ ಮೂರು ತಿಂಗಳಲ್ಲಿ 345 ರು.ನಷ್ಟು ಇಳಿಕೆಯಾಗಿದೆ. ಇದರೊಂದಿಗೆ ಮಾ.1ರಂದು ಒಮ್ಮೆಲೇ ಮಾಡಲಾಗಿದ್ದ 350 ರು. ನಷ್ಟು ಭಾರೀ ಏರಿಕೆ ಪೈಕಿ ಬಹುತೇಕ ಪಾಲು ಇಳಿಕೆಯಾದಂತೆ ಆಗಿದೆ.

ಇನ್ನು ಗೃಹ ಬಳಕೆಯ 14.2 ಕೆಜಿಯ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಈ ಹಿಂದಿನಂತೆ 1103 ರು.ನಲ್ಲೇ ಮುಂದುವರೆದಿದೆ. ಇದೇ ವೇಳೆ ವೈಮಾನಿಕ ಇಂಧನದ ದರವನ್ನೂ ಕೂಡಾ ಶೇ.7ರಷ್ಟು ಇಳಿಕೆ ಮಾಡಲಾಗಿದೆ. ಇದುವರೆಗೆ ದೆಹಲಿಯಲ್ಲಿ 1000 ಲೀ ವೈಮಾನಿಕ ಇಂಧನದ ದರ 89303 ರು.ನಷ್ಟುಇದ್ದು ಅದನ್ನು 6631 ರು.ನಷ್ಟು ಇಳಿಕೆ ಮಾಡಲಾಗಿದೆ.

ಎಲ್‌ಪಿಜಿ ಗ್ರಾಹಕರಿಗೆ ಗುಡ್‌ ನ್ಯೂಸ್‌: 92 ರೂ. ಇಳಿಕೆಯಾದ ಸಿಲಿಂಡರ್‌ ಬೆಲೆ