ಮುಂಬೈ(ಅ.17): ರಿಲಯನ್ಸ್ ಸಂಸ್ಥೆ ತನ್ನ ದ್ವಿತೀಯ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ ತೋರಿಸಿದೆ. ರಿಲಯನ್ಸ್ ಸಂಸ್ಥೆ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ತ್ರೈಮಾಸಿಕ ಲಾಭ ಎನ್ನಲಾಗಿದೆ.

ಕಂಪನಿಯ ನಿವ್ವಳ ಲಾಭದಲ್ಲಿ ಶೇ. 17.35 ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ  9,516 ಕೋಟಿ ರೂ. ಗಳಿಸಿದೆ ಎಂದು ವರದಿ ತಿಳಿಸಿದೆ. ಹಾಥ್ ವೇ ಮತ್ತು ಡೆನ್ ನೆಟವರ್ಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್, ಎರಡು ಕಂಪನಿಗಳಿಂದ ತಲಾ ಶೇ. 25 ರಷ್ಟು ಲಾಭ ಪಡೆಯುತ್ತಿದೆ.

ಇನ್ನು ಕಂಪನಿಯ ಏಕೀಕೃತ ಆದಾಯದಲ್ಲೂ ಭಾರೀ ಹೆಚ್ಚಳವಾಗಿದ್ದು, ಶೇ. 54.5ರಷ್ಟು ಹೆಚ್ಚಿನ ಆದಾಯ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೆಟ್ರೋಕೆಮಿಕಲ್ ಮತ್ತು ರಿಫೈನರಿ ಉತ್ಪನ್ನಗಳ ಬೆಲೆ ಹೆಚ್ಚಳ ಕೂಡ ತ್ರೈಮಾಸಿಕ ಲಾಭಕ್ಕೆ ಕೊಡುಗೆ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.