GST slab : ಜಿಎಸ್ಟಿ ಸ್ಲ್ಯಾಬ್ ಇಳಿಕೆಗೆ ಸಚಿವರ ಗುಂಪು ಒಪ್ಪಿಗೆ ನೀಡಿದೆ. ನಾಲ್ಕಿದ್ದ ಸ್ಲ್ಯಾಬ್ ಎರಡಕ್ಕೆ ಇಳಿಯಲಿದೆ. ಇದ್ರಿಂದಾಗಿ ಕೆಲ ವಸ್ತುಗಳ ಬೆಲೆ 7 ರಿಂದ 50 ರೂಪಾಯಿ ಇಳಿಯಲಿದೆ. 

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದಂತೆ ನಡೆದುಕೊಳ್ತಿದ್ದಾರೆ. ದೇಶವಾಸಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದಾರೆ. ಜಿಎಸ್ಟಿ (GST)ಯಲ್ಲಿ ಸುಧಾರಣೆ ತರುವ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಇಟ್ಟಾಗಿದೆ. ಮೊದಲು ಕೇಂದ್ರ ಸರ್ಕಾರ, ಜಿಎಸ್ಟಿ ಕೌನ್ಸಿಲ್ಗೆ ಅಸ್ತಿತ್ವದಲ್ಲಿರುವ ನಾಲ್ಕು ಜಿಎಸ್ ಟಿ ಸ್ಲ್ಯಾಬ್ (GST slab)ಗಳನ್ನು ತೆಗೆದುಹಾಕಿ ಕೇವಲ ಎರಡು ಸ್ಲ್ಯಾಬ್ ಜಾರಿಯಲ್ಲಿಡುವಂತೆ ಪ್ರಸ್ತಾಪನೆ ಸಲ್ಲಿಸಿತ್ತು. ಗುರುವಾರ ಸಚಿವರ ಗುಂಪು (GoM) ಇದಕ್ಕೆ ಅನುಮೋದನೆ ನೀಡಿದೆ. ಸದ್ಯ ಜಾರಿಯಲ್ಲಿರುವ ಶೇಕಡಾ 5, ಶೇಕಡಾ 12 , ಶೇಕಡಾ 18 ಮತ್ತು ಶೇಕಡಾ 28ರ ಸ್ಲ್ಯಾಬ್ ನಲ್ಲಿ ಶೇಕಡಾ 5 ಮತ್ತು ಶೇಕಡಾ 18ರ ಸ್ಲ್ಯಾಬ್ ಮಾತ್ರ ಜಾರಿಯಲ್ಲಿರಲಿದೆ. ಶೇಕಡಾ 12ರ ಜಿಎಸ್ ಟಿ ಸ್ಲ್ಯಾಬ್ ನಲ್ಲಿದ್ದ ಅನೇಕ ವಸ್ತುಗಳು ಶೇಕಡಾ 5ರ ಸ್ಲ್ಯಾಬ್ ಗೆ ಬರಲಿದ್ದು, ಬೆಲೆ ಕಡಿಮೆಯಾಗಲಿದೆ. ಹೊಸ ವ್ಯವಸ್ಥೆ ಸಾಮಾನ್ಯ ಜನರು, ರೈತರು, ಮಧ್ಯಮ ವರ್ಗ ಮತ್ತು ಸಣ್ಣ ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ. ಇದು ಜಿಎಸ್ಟಿಯನ್ನು ಹೆಚ್ಚು ಪಾರದರ್ಶಕ ಮತ್ತು ಬೆಳವಣಿಗೆ ಸ್ನೇಹಿಯನ್ನಾಗಿ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರಸ್ತಾವನೆಯ ಮುಖ್ಯಾಂಶ :

• ಪ್ರಸ್ತುತ ಶೇಕಡಾ 12 ಜಿಎಸ್ಟಿ ಸ್ಲ್ಯಾಬ್ನಲ್ಲಿರುವ ಶೇ. 99 ವಸ್ತುಗಳನ್ನು ಶೇ. 5ರ ಸ್ಲ್ಯಾಬ್ಗೆ ಬದಲಾಯಿಸಲಾಗುವುದು

• ಶೇ. 28ರ ಸ್ಲ್ಯಾಬ್ನಲ್ಲಿರುವ ಸುಮಾರು ಶೇ.90 ವಸ್ತುಗಳನ್ನು ಶೇ.18ರ ಸ್ಲ್ಯಾಬ್ಗೆ ಬದಲಾಯಿಸಲಾಗುವುದು

• ಕೇಂದ್ರವು ಪರಿಷ್ಕೃತ ಜಿಎಸ್ ಟಿ ವ್ಯವಸ್ಥೆಯಡಿಯಲ್ಲಿ ಶೇ. 5 ಮತ್ತು ಶೇ. 18 ದರಗಳನ್ನು ಪ್ರಸ್ತಾಪಿಸಿದೆ

• ಪರಿಷ್ಕೃತ ಜಿಎಸ್ಟಿ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ವಸ್ತುಗಳು ಮತ್ತು ದಿನನಿತ್ಯದ ಉತ್ಪನ್ನಗಳಿಗೆ ಶೇ. 5ರ ತೆರಿಗೆ ವಿಧಿಸಲಾಗುವುದು

• ಪೆಟ್ರೋಲಿಯಂ ಉತ್ಪನ್ನಗಳು ಸದ್ಯಕ್ಕೆ ಜಿಎಸ್ ಸಿ ವ್ಯವಸ್ಥೆಯಿಂದ ಹೊರಗುಳಿಯುತ್ತವೆ.

ಎಷ್ಟು ಅಗ್ಗವಾಗಬಹುದು ವಸ್ತುಗಳು? : ಈ ದೊಡ್ಡ ಬದಲಾವಣೆ ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ಪ್ರಸ್ತುತ ಎಲ್ಲಾ ರೀತಿಯ ಬ್ರಾಂಡೆಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳು ಮತ್ತು ಖಾದ್ಯ ತೈಲಗಳು, ಪ್ಯಾಕ್ ಮಾಡಿದ ಜ್ಯೂಸ್ ಮೇಲೆ ಶೇಕಡಾ 12 ರಷ್ಟು ಜಿಎಸ್ಟಿ ವಿಧಿಸಲಾಗ್ತಿದೆ. ಇದನ್ನು ಶೇಕಡಾ 5 ರ ಸ್ಲ್ಯಾಬ್ಗೆ ವರ್ಗಾಯಿಸಿದರೆ, ಅನೇಕ ವಸ್ತುಗಳು 7 ರಿಂದ 50 ರೂಪಾಯಗಳವರೆಗೆ ಅಗ್ಗವಾಗುವ ಸಾಧ್ಯತೆ ಇದೆ.

ಯಾವ ಸ್ಲ್ಯಾಬ್ನಿಂದ ಎಷ್ಟು ಆದಾಯ ಬರುತ್ತಿದೆ? : ಈಗ ಜಾರಿಯಲ್ಲಿರುವ ಸ್ಲ್ಯಾಬ್ ಪ್ರಕಾರ ಎಷ್ಟು ಆದಾಯ ಬರ್ತಿದೆ ಅನ್ನೋದನ್ನು ಗಮನಿಸೋದಾದ್ರೆ, ಒಟ್ಟು 67 ರಷ್ಟು ಜಿಎಸ್ಟಿ ಆದಾಯ ಶೇಕಡಾ 18ರ ಜಿಎಸ್ಟಿ ಸ್ಲ್ಯಾಬ್ ನಿಂದ ಬರ್ತಿದೆ. ಶೇಕಡಾ 11 ರಷ್ಟು ಆದಾಯ ಶೇಕಡಾ 28ರ ಸ್ಲ್ಯಾಬ್ ಅಡಿಯಲ್ಲಿರುವ ಉತ್ಪನ್ನಗಳಿಂದ ಬರ್ತಿದೆ. ಇನ್ನು ಶೇಕಡಾ 5ರಷ್ಟು ಆದಾಯ ಶೇಕಡಾ 12ರ ಅಡಿಯಲ್ಲಿ ಬರುವ ಉತ್ಪನ್ನಗಳಿಂದ ಬರ್ತಿದೆ. ಜಿಎಸ್ಟಿ ಆದಾಯದ ಶೇಕಡಾ 7ರಷ್ಟು ಆದಾಯ ಶೇಕಡಾ 5ರ ಸ್ಲ್ಯಾಬ್ ಉತ್ಪನ್ನಗಳಿಂದ ಬರ್ತಿದೆ.

ಯಾವಾಗ ಬರಲಿದೆ ಅಂತಿಮ ನಿರ್ಧಾರ? : ಸಚಿವರ ಗುಂಪು (GoM) ಈಗಾಗಲೇ ಸ್ಲ್ಯಾಬ್ ಕಡಿತಕ್ಕೆ ಅನುಮೋದನೆ ನೀಡಿದೆ. ಸೆಪ್ಟೆಂಬರ್ 2025 ರಲ್ಲಿ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರ ಬರಲಿದೆ. ಈ ಸಭೆ ಅನುಮೋದನೆ ನೀಡಿದ ತಕ್ಷಣ, ಹೊಸ ಸ್ಲ್ಯಾಬ್ ನೀತಿ ದೇಶಾದ್ಯಂತ ಜಾರಿಗೆ ಬರಲಿದೆ.