ಮುಂಬೈ[ಮಾ.06]: ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಯಸ್‌ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್‌ಬಿಐ ಅಮಾನತು ಮಾಡಿದೆ.

ಮುಂದಿನ 30 ದಿನಗಳವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಆರ್‌ಬಿಐ ಆದೇಶ ಹೊರಡಿಸಿದೆ. ಸದ್ಯ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಮತ್ತು ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಮತ್ತು ಬ್ಯಾಂಕ್‌ ಪುನರುಜ್ಜೀವನದ ನಿಟ್ಟಿನಲ್ಲಿ ಈ ತುರ್ತು ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಜೊತೆಗೆ ಎಸ್‌ಬಿಐನ ಸಿಎಫ್‌ಒ ಪ್ರಶಾಂತ್‌ ಕುಮಾರ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

ಇದೆ ವೇಳೆ ಮುಂದಿನ ಆದೇಶದವರೆಗೂ ಬ್ಯಾಂಕ್‌ನ ಗ್ರಾಹಕರಿಗೆ ಗರಿಷ್ಠ 50000 ರು.ವರೆಗೆ ಮಾತ್ರ ಹಣ ಹಿಂಪಡೆಯುವ ಅವಕಾಶವನ್ನು ನೀಡಿದೆ. ಅಲ್ಲದೆ ಸಾಲ ವಿತರಣೆಯಲ್ಲೂ ಆರ್‌ಬಿಐ ಸೂಚಿಸಿರುವ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ಯಸ್‌ ಬ್ಯಾಂಕ್‌ ಎಸ್‌ಬಿಐ ನೇತೃತ್ವದ ಬ್ಯಾಂಕ್‌ ತೆಕ್ಕೆಗೆ? ಯಸ್‌ ಬ್ಯಾಂಕ್‌ ಷೇರು ಖರೀದಿಸಲು ಬ್ಯಾಂಕ್‌ಗಳ ಒಕ್ಕೂಟಕ್ಕೆ ಕೇಂದ್ರದ ಗ್ರೀನ್‌ಸಿಗ್ನಲ್‌

ಭಾರೀ ಪ್ರಮಾಣದ ಅನುತ್ಪಾದಕ ಆಸ್ತಿಯ ಹೊರೆ ಮತ್ತು ಹೊಸ ಬಂಡವಾಳ ಸಂಗ್ರಹಿಸಲು ವಿಫಲವಾಗಿ ಸಂಕಷ್ಟಎದುರಿಸುತ್ತಿರುವ ಖಾಸಗಿ ವಲಯದ ‘ಯಸ್‌ ಬ್ಯಾಂಕ್‌’ ಶೀಘ್ರವೇ ಎಸ್‌ಬಿಐ ನೇತೃತ್ವದ ಸರ್ಕಾರಿ ಬ್ಯಾಂಕ್‌ಗಳ ಒಕ್ಕೂಟದ ಪಾಲಾಗುವ ಸಾಧ್ಯತೆ ಇದೆ.

3.71 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಮುಂಬೈ ಮೂಲದ ಬ್ಯಾಂಕ್‌ನಲ್ಲಿನ ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ, ಯಸ್‌ ಬ್ಯಾಂಕ್‌ನ ನಿಯಂತ್ರಣ ಪ್ರಮಾಣದ ಷೇರು ಖರೀದಿ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಅನುಮೋದನೆ ನೀಡಿದೆ ಎನ್ನಲಾಗಿದೆ. ಗುರುವಾರ ಮುಂಬೈನಲ್ಲಿ ಎಸ್‌ಬಿಐನ ಆಡಳಿತ ಮಂಡಳಿ ಸಭೆ ಇದ್ದು, ಅದರಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯೋಜನೆ ಅನ್ವಯ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಚಿಲ್ಲರೆ ಹೂಡಿಕೆದಾರರಿಂದ ಷೇರುಗಳನ್ನು ಖರೀದಿ ಮಾಡಲಿದೆ. ಇದು ಯಸ್‌ ಬ್ಯಾಂಕ್‌ಗೆ ಅಗತ್ಯವಾದ ಬಂಡವಾಳ ಹೂಡಿಕೆಯನ್ನು ಒದಗಿಸಲಿದೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಎಸ್‌ಬಿಐ ಮತ್ತು ಎಲ್‌ಐಸಿ, ಯಸ್‌ ಬ್ಯಾಂಕ್‌ನ ಶೇ.49ರಷ್ಟುಆದ್ಯತಾ ಷೇರುಗಳನ್ನು ತಲಾ 2 ರು.ನಂತೆ ಖರೀದಿ ಮಾಡಲಿವೆ.

ಯಸ್‌ ಬ್ಯಾಂಕ್‌ನ ಮುಖ್ಯ ಪ್ರವರ್ತಕರಾದ ರಾಣಾ ಕಪೂರ್‌ ಸೆಬಿ ಸೂಚನೆ ಅನ್ವಯ 2019ರ ಜ.31ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಬ್ಯಾಂಕ್‌ನಲ್ಲಿದ್ದ ತಮ್ಮ ಅಷ್ಟೂಷೇರು ಪಾಲು ಮಾಡಿದ್ದರು. ಪ್ರಸಕ್ತ ಶೇ.48ರಷ್ಟುಷೇರು ಚಿಲ್ಲರೆ ಹೂಡಿಕೆದಾರರ ಬಳಿ ಇದೆ.