10 ಲಕ್ಷ ವರೆಗಿನ ಸಾಲ, ತುರ್ತು ಆರೋಗ್ಯ ಸೇವೆಗೆ 50,000 ಕೋಟಿ: ಆರ್‌ಬಿಐ!
ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ರಿಸರ್ವ್ ಬ್ಯಾಂಕ್ ತನ್ನ ಸಂಪನ್ಮೂಲ ನಿಯೋಜನೆ| 10 ಲಕ್ಷ ವರೆಗಿನ ಸಾಲ, ತುರ್ತು ಆರೋಗ್ಯ ಸೇವೆಗೆ 50,000 ಕೋಟಿ: ಆರ್‌ಬಿಐ
ನವದೆಹಲಿ(ಮೇ.05): ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ರಿಸರ್ವ್ ಬ್ಯಾಂಕ್ ತನ್ನ ಸಂಪನ್ಮೂಲ ನಿಯೋಜಿಸಿಸಿದೆ. ಈ ಸಂಕಷ್ಟವನ್ನು ಭಾರತ ಸಮರ್ಥವಾಗಿ ಎದುರಿಸುವ ನಂಬಿಕೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು, ಲಸಿಕೆ ಉತ್ಪಾದನೆ, ಇತ್ಯಾದಿಗೆ ಬಳಕೆ ಮಾಡಲು 50,000 ಕೋಟಿ ರೂ. ನೀಡಲು ಆರ್‌ಬಿಐ ಮುಂದಾಗಿದೆ. ಮಾರ್ಚ್ 31, 2022 ತನಕ ಕೋವಿಡ್ -19 ಸಂಬಂಧಿತ ಸಾಲ ನೀಡಲಿದೆ. ಆರೋಗ್ಯ ಭದ್ರತೆಗಾಗಿ 50,000 ಕೋಟಿ ರೂ.ಗಳ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೇ 20 ರಂದು ಆರ್‌ಬಿಐ 35,000 ಕೋಟಿ ಮೌಲ್ಯದ ಸೆಕ್ಯೂರಿಟಿಗಳ ಖರೀದಿಯ ಎರಡನೇ ಹಂತವನ್ನು ಪ್ರಾರಂಭಿಸಲಿದೆ ಎಂದಿದ್ದಾರೆ.
ಅಸಂಘಟಿತ ವಲಯದ ಉಪಯೋಗಕ್ಕಾಗಿ 3 ವರ್ಷಗಳ ಅವಧಿಗೆ 10,000 ಕೋಟಿ ರೂ. ಸಣ್ಣ ಮಧ್ಯಮ ಬ್ಯಾಂಕ್ ಗಳಿಗೆ ನೀಡಲಾಗುತ್ತಿದ್ದು, 10 ಲಕ್ಷ ರೂ. ತನಕ ಸಾಲ ಪಡೆಯಬಹುದು. 10000 ಕೋಟಿ ಟಿಎಲ್‌ಆರ್‌ಒ ಸಹ ಆರ್‌ಬಿಐ ಎಸ್‌ಎಫ್‌ಬಿ ಅಡಿಯಲ್ಲಿ ತರಲಾಗುವುದು. ಇವುಗಳಿಗಾಗಿ ಸಾಲಗಾರನಿಗೆ 10 ಲಕ್ಷ ಮಿತಿ ಇರುತ್ತದೆ. ಈ ಸೌಲಭ್ಯವು 31 ಮಾರ್ಚ್ 2022 ರವರೆಗೆ ಲಭ್ಯವಿರುತ್ತದೆ ಎಂದೂ ಗವರ್ನರ್ ಈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಕೋವಿಡ್-19 ಗೆ ಸಂಬಂಧಿಸಿದ ಉದಯೋನ್ಮುಖ ಸನ್ನಿವೇಶಗಳ ಬಗ್ಗೆ ರಿಸರ್ವ್ ಬ್ಯಾಂಕ್ ಕಣ್ಣಿಡಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಕೊರೊನಾ ಎರಡನೇ ತರಂಗದಿಂದ ಪೀಡಿತ ದೇಶದ ನಾಗರಿಕರು, ವ್ಯಾಪಾರ ಘಟಕಗಳು ಮತ್ತು ಸಂಸ್ಥೆಗಳಿಗೆ ಕೇಂದ್ರ ಬ್ಯಾಂಕ್ ಸಾಧ್ಯವಾದಷ್ಟು ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.
ಏಪ್ರಿಲ್‌ನಲ್ಲಿ ವಿದ್ಯುತ್ ಬಳಕೆ ಕೂಡ ಹೆಚ್ಚಾಗಿದ್ದು, ರೈಲ್ವೆಯ ಸರಕು ಸಾಗಣೆಯಲ್ಲಿ ಹೆಚ್ಚಳ ಕಂಡುಬಂದಿದೆ. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಇತರ ಅಗತ್ಯ ವಸ್ತುಗಳ ದರಗಳು ಹೆಚ್ಚಳವನ್ನು ದಾಖಲಿಸಿದೆ. ಕೋವಿಡ್‌ನಿಂದಾಗಿ ಸರಬರಾಜು ಸ್ಥಗಿತಗೊಂಡ ಪರಿಣಾಮ ವಸ್ತುಗಳ ಬೆಲೆ ಏರಿಕೆ ಸಂಭವಿಸಿದೆ. ಮಾರ್ಚ್‌ನಲ್ಲಿ ಭಾರತದ ರಫ್ತು ಗಮನಾರ್ಹವಾಗಿ ಹೆಚ್ಚಾಗಿದ್ದು, ಏಪ್ರಿಲ್‌ನಲ್ಲಿಯೂ ಮುಂದುವರಿದಿದೆ.