2 ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ; ಇಲ್ಲಿನ ಗ್ರಾಹಕರ ಹಣದ ಮೇಲೆ ಎಫೆಕ್ಟ್ ಆಗುತ್ತಾ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಹಿನ್ನೆಲೆ ಈ ಕ್ರಮ ಜರುಗಿಸಲಾಗಿದೆ. ಈ ದಂಡ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಾ?
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಬ್ಯಾಂಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಿದೆ. ದಂಡಕ್ಕೆ ತುತ್ತಾಗಿರುವ ಎರಡೂ ಬ್ಯಾಂಕ್‌ಗಳು ಬೇರೆ ರಾಜ್ಯಗಳಲ್ಲಿ ಲೊಕೇಟ್ ಆಗಿವೆ. ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಹಿನ್ನೆಲೆ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ. ಎರಡು ಬ್ಯಾಂಕ್‌ಗಳಿಗೆ ದಂಡ ವಿಧಿಸಿರುವ ಮಾಹಿತಿಯನ್ನು ನವೆಂಬರ್ 4ರಂದು ಆರ್‌ಬಿಐ ನೀಡಿದೆ. ಹಾಗಾದ್ರೆ ಆ ಎರಡು ಬ್ಯಾಂಕ್‌ಗಳು ಯಾವವು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ಮಾಹಾರಾಷ್ಟ್ರದ ಉದಗಿರ್‌ನ ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಮೇಘಾಲಯದ ತುರಾದಲ್ಲಿರುವ ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದು, ದಂಡದ ಶಿಕ್ಷೆಗೆ ಗುರಿಯಾಗಿವೆ. ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1.5 ಲಕ್ಷ ರೂಪಾಯಿ ಮತ್ತು ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949ರ ಸೆಕ್ಷನ್ 46 (4) (i), 56 and 47 A (1) (C) ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ಹಾಕಿದೆ.
ಠೇವಣಿದಾರರ ಮೊತ್ತ ಮತ್ತು ಅವೇರ್‌ನೆಸ್ ಫಂಡ್ ಬಗ್ಗೆ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನಿಗದಿತ ಸಮಯದೊಳಗೆ ತಲುಪಿಸುವಲ್ಲಿ ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿಫಲವಾಗಿತ್ತು. ಇನ್ನು ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ SAF ಅಡಿಯಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಲಿಲ್ಲ. RBI ಯ ಪೂರ್ವಾನುಮತಿ ಇಲ್ಲದೆ ವಾರ್ಷಿಕ 25,000 ಕ್ಕಿಂತ ಹೆಚ್ಚು ಬಂಡವಾಳ ವೆಚ್ಚವನ್ನು ಮಾಡಿತ್ತು. SAF ಅಡಿಯಲ್ಲಿ ಸೂಚಿಸಲಾಗಿರುವ ಗರಿಷ್ಠ ಮಿತಿಗಿಂತ ಹೆಚ್ಚಿನ ಹೊಸ ಸಾಲಗಳನ್ನು ಮಂಜೂರು ಮಾಡಲಾಗಿದೆ. ಈ 2 ನಿಯಮಗಳ ಉಲ್ಲಂಘನೆ ಹಿನ್ನೆಲೆ ತುರಾ ಬ್ಯಾಂಕ್ ದಂಡಕ್ಕೆ ತುತ್ತಾಗಿದೆ.
ಇದನ್ನೂ ಓದಿ: ಭಾರತದ ಪ್ರಮುಖ ಬ್ಯಾಂಕ್ ಎಟಿಎಂನಿಂದ ದಿನಕ್ಕೆ ಗರಿಷ್ಟ ಎಷ್ಟು ಹಣ ಡ್ರಾ ಮಾಡಬಹುದು?
ಗ್ರಾಹಕರ ಮೇಲೆ ಪರಿಣಾಮ ಬೀರುತ್ತಾ?
ಆರ್‌ಬಿಐ ನಡೆಸಿದ ತಪಾಸಣೆ ವೇಳೆ ನಿಯಮ ಉಲ್ಲಂಘನೆ ಮಾಡಿರೋದು ಬೆಳಕಿಗೆ ಬಂದಿತ್ತು. ನಂತರ ಕೂಡಲೇ ಎರಡು ಬ್ಯಾಂಕ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ಗೆ ನೀಡಿದ ಉತ್ತರ ಮತ್ತು ವಿಚಾರಣೆಯಲ್ಲಿ ಬ್ಯಾಂಕ್ ನೀಡಿದ ಮೌಖಿಕ ಪ್ರತಿಕ್ರಿಯೆಯನ್ನು ಪರಿಗಣಿಸಿ ಎರಡೂ ಬ್ಯಾಂಕ್‌ಗಳಿಗೆ ವಿತ್ತೀಯ ದಂಡವನ್ನು ವಿಧಿಸಲು ಆರ್‌ಬಿಐ ನಿರ್ಧರಿಸಿದೆ. ಬ್ಯಾಂಕ್‌ಗಳ ಆಂತರಿಕ ವಹಿವಾಟು ನಡೆಸುವ ಮತ್ತು ನಿಯಮಗಳ ಪಾಲನೆ ಮಾಡುವ ಸಂದರ್ಭದಲ್ಲಿ ಉಂಟಾದ ದೋಷಗಳಿಂದಾಗಿ ದಂಡ ವಿಧಿಸಲಾಗಿದೆ. ಹಾಗಾಗಿ ದಂಡಕ್ಕೆ ತುತ್ತಾಗಿರುವ ಬ್ಯಾಂಕ್‌ಗಳ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಾಹಕರು ಮತ್ತು ಬ್ಯಾಂಕ್‌ಗಳ ಜೊತೆ ಮಾಡಿಕೊಂಡಿರುವ ಒಪ್ಪಂದಗಳ ಮೇಲೆಯೂ ಯಾವುದೇ ಪರಿಣಾಮ ಬೀರಲ್ಲ.
ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮನ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಕಟ್ಟಬೇಕಾ? ಇಲ್ಲಿದೆ RBI ನಿಯಮ!