ಮೋದಿ ಮಾತು ಕೇಳ್ತಿಲ್ಲಾ ಆರ್‌ಬಿಐ ಗವರ್ನರ್: ದಾರಿ ಬದಲಿಸಿದ ಪಟೇಲ್?
ಪ್ರಧಾನಿ ಮೋದಿ-ಆರ್‌ಬಿಐ ಗರ್ವನರ್ ಊರ್ಜಿತ್ ನಡುವೆ ಕಂದಕ?! ಪ್ರಧಾನಿ ಮೋದಿ ಮಾತು ಕೇಳ್ತಿಲ್ವಾ ಊರ್ಜಿತ್ ಪಟೇಲ್?! ರಬ್ಬರ್ ಸ್ಟಾಂಪ್ ಆರೋಪದಿಂದ ಹೊರ ಬರಲು ಊರ್ಜಿತ್ ನಿರ್ಧಾರ?! ಮೋದಿ ಸರ್ಕಾರದ ನಿಲುವು ವಿರೋಧಿಸುತ್ತಿರುವ ಊರ್ಜಿತ್ ಪಟೇಲ್
ನವದೆಹಲಿ(ಸೆ.5): ಊರ್ಜಿತ್ ಪಟೇಲ್ ಆರ್‌ಬಿಐ ಗರ್ವನರ್ ಹುದ್ದೆ ಅಲಂಕರಿಸಿ ೨ ವರ್ಷಗಳಾಗಿವೆ. ಈ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಬಹುಶಃ ಊರ್ಜಿತ್ ಪಟೇಲ್ ಎದುರಿಸಿದಷ್ಟು ಸವಾಲುಗಳನ್ನು ಈ ಹಿಂದಿನ ಯಾವ ಆರ್‌ಬಿಐ ಗವರ್ನರ್ ಕೂಡ ಎದುರಿಸಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.
ಕಾರಣ ಊರ್ಜಿತ್ ಪಟೇಲ್ ಆರ್‌ಬಿಐ ಗರ್ವನರ್ ಹುದ್ದೆ ಅಲಂಕರಿಸಿದ ಆರಂಭದ ದಿನಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣವನ್ನು ಘೋಷಿಸಿದ್ದರು. ನೋಟು ಅಮಾನ್ಯೀಕರಣ ಎಂದರೆ ಏನು ಎಂದೇ ತಿಳಿಯದ ಜನರಿಗಾಗಿ, ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸ್ಥಿರತೆಗಾಗಿ ಊರ್ಜಿತ್ ಪಟೇಲ್ ಸಾಕಷ್ಟು ಬೆವರು ಹರಿಸಿದ್ದಾರೆ.
ಆದರೆ ಊರ್ಜಿತ್ ಪಟೇಲ್ ಇದೀಗ ಪ್ರಧಾನಿ ಮೋದಿ ಅವರ ಮಾತು ಕೇಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರಂಭದಲ್ಲಿ ಮೋದಿ ಅವರ ನೋಟು ಅಮಾನ್ಯೀಕರಣವನ್ನು ಬಲವಾಗಿ ಸಮರ್ಥಿಸಿದ್ದ ಪಟೇಲ್, ಇದೀಗ ಮೋದಿ ಸರ್ಕಾರದ ಹಲವು ಆರ್ಥಿಕ ನೀತಿಗಳಿಗೆ ಅಪಸ್ವರ ಎತ್ತುತ್ತಿದ್ದಾರೆ.
ಪ್ರಮುಖವಾಗಿ ಊರ್ಜಿತ್ ಪಟೇಲ್ ವಿತ್ತ ಸಚಿವ ಅರುಣ್ ಜೇಟ್ಲಿ ಮೇಲೆ ಸಿಟ್ಟಾಗಿದ್ದಾರೆ. ಕಾರಣ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣಕ್ಕೆ ಆರ್‌ಬಿಐ ಸೇರಿದಂತೆ ವಿವಿಧ ಸಕ್ಷಮ ಪ್ರಾಧಿಕಾರಗಳು ಕಾರಣ ಎಂದು ಜೇಟ್ಲಿ ಆರೋಪಿಸಿದ್ದರು. ಇದರಿಂದ ಕೆರಳಿದ ಊರ್ಜಿತ್ ಪಟೇಲ್, ಪಿಎನ್ ಬಿ ಹಗರಣಕ್ಕೆ ವಿತ್ತ ಸಚಿವಾಲಯವೇ ನೇರ ಕಾರಣ ಎಂದು ಗಂಭೀರ ಆರೋಪ ಕೂಡ ಮಾಡಿದರು.
ಸದ್ಯ ಬಡ್ಡಿದರ ಏರಿಕೆ ವಿಚಾರದಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಶುರುವಾಗಿದೆ. ಆರ್‌ಬಿಐ ಬಡ್ಡಿದರ ಏರಿಸುವ ಪರವಾಗಿದ್ದರೆ, ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಶತಾಯಗತಾಯ ಬಡ್ಡಿದರ ಏರಿಕೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕುತ್ತಿದೆ.
ಹೀಗೆ ಮೋದಿ ಸರ್ಕಾರದ ರಬ್ಬರ್ ಸ್ಟಾಂಪ್ ಎಂದೇ ಕರೆಯಲಾಗಿದ್ದ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್, ಸದ್ಯ ಹಿಂದಿನ ಗರ್ವನರ್ ರಘುರಾಮ್ ರಾಜನ್ ಹಾದಿಯನ್ನೇ ತುಳಿಯುವ ಸೂಚನೆ ನೀಡಿದ್ದು, ಈ ಮೊದಲಿನ ಹಾಗೆ ಸರ್ಕಾರ ಹೇಳಿದ ಎಲ್ಲವನ್ನೂ ತಾನು ಕೇಳುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈ ಹೊಸ ಬೆಳವಣಿಗೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೊಡಬೇಕಿದೆ.